ಅರ್ಜಿ ಹಾಕಿ; ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೇಮಕಾತಿ
ಬೆಂಗಳೂರು, ಮಾರ್ಚ್ 17; ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಿಯಮಿತ ಬೆಂಗಳೂರು, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಕೆ ಮಾಡಲು 16/4/2022ರ ಸಂಜೆ 17.30 ಕೊನೆಯ ದಿನವಾಗಿದೆ.
ಒಟ್ಟು 72 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕಿದೆ. ಅರ್ಜಿಗಳನ್ನು ಖುದ್ದಾಗಿ/ ಅಂಚೆ/ ಕೊರಿಯರ್ ಇತ್ಯಾದಿ ಮೂಲಕ ಕಳುಹಿಸಲು ಅವಕಾಶವಿಲ್ಲ.
ಸಾಮಾನ್ಯ ಅಭ್ಯರ್ಥಿ 36, ಪರಿಶಿಷ್ಟ ಜಾತಿ 11, ಪರಿಶಿಷ್ಟ ಪಂಗಡ 2, ಪ್ರವರ್ಗ-1 3, ಪ್ರವರ್ಗ 2ಎ 11, ಪ್ರವರ್ಗ 2ಬಿ 3, ಪ್ರವರ್ಗ 3ಎ 3, ಪ್ರವರ್ಗ 3ಬಿ 3 ಸೇರಿದಂತೆ ಒಟ್ಟು 72 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಆಯ್ಕೆಯಾದ ಅಭ್ಯರ್ಥಿಗಳ ವೇತನ ಶ್ರೇಣಿ 28425-955-33200-1310-41060-1800-50060-2080-62540-2235-87125.
ವಿದ್ಯಾರ್ಹತೆ ವಿವರಗಳು; ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿ ಪರೀಕ್ಷೆಯಲ್ಲಿ ಭಾಷಾ ವಿಷಯಗಳು ಸೇರಿದಂತೆ ಕ್ರೋಢೀಕೃತ ಶೇಕಡ 60 ರಷ್ಟು ಅಂಕಗಳೊಂದಿಗೆ ಹಾಗೂ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಮತ್ತು ಅಂಗವಿಕಲ ಅಭ್ಯರ್ಥಿಗಳು ಕನಿಷ್ಟ ಶೇಕಡ 55ರಷ್ಟು ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
ಅಭ್ಯರ್ಥಿಗಳು ಕನ್ನಡವನ್ನು ಓದುವ ಸಾಮರ್ಥ್ಯದ ಜೊತೆ ಕನ್ನಡದ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಛವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳಬೇಕು ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸಹಕಾರ ವಿಷಯದಲ್ಲಿ ವಿದ್ಯಾರ್ಹತೆ ಮತ್ತು ಅನುಭವವನ್ನು ಹೊಂದಿರುವವರಿಗೆ ಆದ್ಯತೆ ಇದೆ.
ವಯೋಮಿತಿ ವಿವರ; ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು 40 ವರ್ಷ, ಇತರೆ ಹಿಂದುಳಿದ ಜಾತಿ/ ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 38 ವರ್ಷಗಳು, ಸಾಮಾನ್ಯ ವರ್ಗದ ಅಭ್ಯರ್ಥಿಗಳು 35 ವರ್ಷಗಳು.
ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಆಯಾ ವರ್ಗ/ ಪ್ರವರ್ಗಗಳನ್ವಯ 10 ವರ್ಷಗಳ ವಯೋಮಿತಿ ಸಡಿಲಿಕೆ ನಿಗದಿ ಮಾಡಲಾಗಿದೆ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳ ರಿಯಾಯಿತಿಯನ್ನು ನೀಡಲಾಗುತ್ತದೆ.
ಅರ್ಜಿಗಳನ್ನು ಸಲ್ಲಿಕೆ ಮಾಡುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು ರೂ. 500 (ತೆರಿಗೆ ಹೊರತುಪಡಿಸಿ). ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ಜಾತಿ/ ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 1000 ರೂ. ಶುಲ್ಕವನ್ನು ಪಾವತಿ ಮಾಡಬೇಕು.
ಅಭ್ಯರ್ಥಿಗಳು ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು. ಒಮ್ಮೆ ಶುಲ್ಕವನ್ನು ಪಾವತಿಸಿದ ನಂತರ ಅದನ್ನು ಯಾವುದೇ ಸಂದರ್ಭದಲ್ಲಿಯೂ ಹಿಂತಿರುಗಿಸಲಾಗುವುದಿಲ್ಲ. ಶುಲ್ಕವನ್ನು ಸಂದಾಯ ಮಾಡದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತದೆ. ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಆನ್‍ಲೈನ್ ಮೂಲಕ ಮಾತ್ರ ಪಾವತಿ ಮಾಡಬೇಕು.
ಸೂಚನೆಗಳು
* ಅಭ್ಯರ್ಥಿಗಳು ಅರ್ಜಿಗಳನ್ನು ಕಡ್ಡಾಯವಾಗಿ ಆನ್‍ಲೈನ್ ಮುಖಾಂತರವೇ ಬ್ಯಾಂಕಿನ ವೆಬ್‍ಸೈಟ್ https://www.karnatakaapex.com/new/index.php/en/
ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಮೊದಲು ಜಾಹೀರಾತನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಬೇಕು.
* ದಿನಾಂಕ 16/4/2022 ರವರೆಗೆ ವೆಬ್‍ಸೈಟ್ ತೆರೆದಿರುತ್ತದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಾಯಂಕಾಲ 17.30 ಗಂಟೆಯೊಳಗೆ ಆನ್‍ಲೈನ್‍ನಲ್ಲಿ ಸಲ್ಲಿಸಬಹುದಾಗಿರುತ್ತದೆ. ನಿಗದಿತ ಕೊನೆಯ ದಿನಾಂಕ ಮತ್ತು ಸಮಯದ ನಂತರ ಬಂದ ಅರ್ಜಿ ತಿರಸ್ಕರಿಸಲಾಗುತ್ತದೆ.
* ಅಭ್ಯರ್ಥಿಗಳು ಕೇವಲ ಒಂದು ಬಾರಿ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಒಮ್ಮೆ ಸಲ್ಲಿಸಿದ ಅರ್ಜಿಯನ್ನು ಯಾವುದೇ ಕಾರಣದಿಂದಲೂ ತಿದ್ದುಪಡಿ ಮಾಡಲು ಅವಕಾಶವಿಲ್ಲ.
* ಅಭ್ಯರ್ಥಿಗಳು ಇತ್ತೀಚಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರವನ್ನು ಒಂದು ಹಾಳೆಯ ಮೇಲಿಟ್ಟು ಅದರ ಕೆಳಗೆ ಕಪ್ಪು ಶಾಹಿಯ ಸ್ಕೆಚ್/ ಮಾರ್ಕರ್ ಪೆನ್‍ಲ್ಲಿ ಸಹಿಯನ್ನು ಸ್ಕ್ಯಾನ್ ಮಾಡಿ ಅರ್ಜಿಗೆ ಅಪ್‌ಲೋಡ್ ಮಾಡಬೇಕು. ಭಾವಚಿತ್ರ ಹಾಗೂ ಸಹಿಯನ್ನು ಅಪ್‌ಲೋಡ್ ಮಾಡದ ಅರ್ಜಿ ತಿರಸ್ಕಾರವಾಗಲಿದೆ.
ಆಯ್ಕೆ ವಿಧಾನ : ಅಭ್ಯರ್ಥಿಗಳ ಆಯ್ಕೆಯನ್ನು ಅವರುಗಳು ಸಲ್ಲಿಸಿರುವ ಅರ್ಜಿಗಳ ಪರಿಶೀಲನೆಯ ನಂತರ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಮತ್ತು ಮೌಖಿಕ ಸಂದರ್ಶನದ ಮೂಲಕ ಮಾಡಲಾಗುವುದು. ಪದವಿ ಪರೀಕ್ಷೆಗಳಲ್ಲಿ ಒಟ್ಟ ಪಡೆದ ಅಂಕಗಳ ಶೇಕಡ ಪ್ರಮಾಣದ ಅರ್ಹತೆ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳಿಗೆ ವಿವಿಧ ವಿಷಯಗಳ ಮೇಲೆ ಲಿಖಿತ ಪರೀಕ್ಷೆ ನಡೆಸಲಾಗುವುದು.












Click it and Unblock the Notifications