Karnataka Government Jobs: ಕ್ರೀಡಾಪಟುಗಳ ಮೀಸಲಾತಿ ಏರಿಕೆ
ಬೆಂಗಳೂರು, ಜನವರಿ 30: ಕರ್ನಾಟಕ ಸರ್ಕಾರ ರಾಜ್ಯದ ಕ್ರೀಡಾಪಟುಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾಪಟುಗಳ ಮೀಸಲಾತಿ ಹೆಚ್ಚಳ ಮಾಡಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ. ಅಲ್ಲದೇ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 45 ವರ್ಷಗಳಿಗೆ ಹೆಚ್ಚಿಸಲು ನಿಯಮಗಳಿಗೆ ತಿದ್ದುಪಡಿ ತರಲು ಸಹ ಒಪ್ಪಿಗೆಯನ್ನು ಕೊಟ್ಟಿದೆ.
ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್. ಕೆ. ಪಾಟೀಲ ಸಭೆಯ ವಿವರಗಳನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಿದರು.

ಸಚಿವರು ಮಾತನಾಡಿ, ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕಾನ್ಸ್‌ಟೇಬಲ್‌ನಿಂದ ಡಿವೈಎಸ್ಪಿ ತನಕ ಪ್ರಶಂಸನೀಯ ಕ್ರೀಡಾಪಟುಗಳ ಮೀಸಲಾತಿ ಪ್ರಮಾಣವನ್ನು ಶೇ 2 ರಿಂದ ಶೇ 3ಕ್ಕೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿದೆ ಎಂದರು.
ನಿಯಮಗಳಲ್ಲಿ ಬದಲಾವಣೆ: ಪ್ರಸ್ತುತ ಈ ಮೀಸಲಾತಿ ಪ್ರಮಾಣ ಶೇ 2ರಷ್ಟಿದ್ದು ಇದನ್ನು ಶೇ 3ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. 2023ರಲ್ಲಿನ ಅನುಸೂಚಿಯ ಕ್ರಮ ಸಂಖ್ಯೆ (3) ರಲ್ಲಿ ಡಿವೈಎಸ್ಪಿ ಹುದ್ದೆಯ ವಯೋಮಿತಿ ಕಾಲಂನಲ್ಲಿ ಎಸ್‌ಸಿ/ ಎಸ್‌ಟಿ ಹಾಗೂ ಕೆಟಗರಿ-1ರ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 45 ವರ್ಷಗಳಿಗೆ ಹೆಚ್ಚಿಸಲು ನಿಯಮಗಳಿಗೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯ ಪೊಲೀಸ್ ಸೇವೆಗಳು (ಪೊಲೀಸ್ ಕಾನ್ಸ್‌ಸ್ಟೇಬಲ್, ಪೊಲೀಸ್ ಸಬ್-ಇನ್ಸ್‌ಸ್ಟೆಕ್ಟರ್ ಮತ್ತು ಪೊಲೀಸ್ ಉಪಾಧೀಕ್ಷಕರ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಟುಗಳ ನೇರ ನೇಮಕಾತಿ) (ವಿಶೇಷ) (ತಿದ್ದುಪಡಿ) ನಿಯಮಗಳು, 2025ರ ಕರಡು ನಿಯಮಗಳನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗುತ್ತದೆ.
ಅದರಿಂದ ಬಾಧಿತರಾದವರಿಂದ ಆಕ್ಷೇಪಣೆ/ ಸಲಹೆಗಳನ್ನು ಆಹ್ವಾನಿಸಲು ಸದರಿ ನಿಯಮಗಳಿಗೆ ಯಾವುದೇ ಗಂಭೀರ ಸ್ವರೂಪದ ಆಕ್ಷೇಪಣೆ/ ಸಲಹೆಗಳನ್ನು ಸ್ವೀಕೃತವಾಗದಿದ್ದಲ್ಲಿ ಅಥವಾ ಸ್ವೀಕೃತವಾದ ಆಕ್ಷೇಪಣೆ/ ಸಲಹೆಗಳನ್ನು ಪರಿಗಣಿಸಿ ಕರಡು ನಿಯಮಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡದಿದ್ದಲ್ಲಿ ಪುನ: ಸಚಿವ ಸಂಪುಟದ ಮುಂದೆ ಮಂಡಿಸದೇ ಸದರಿ ಕರಡು ನಿಯಮಗಳನ್ನು ಅಂತಿಮಗೊಳಿಸಲು, ಸಚಿವ ಸಂಪುಟ ನಿರ್ಧರಿಸಿದೆ ಎಂದರು.
ಪೊಲೀಸ್ ಇಲಾಖೆಯ ನೇರ ನೇಮಕಾತಿಯಲ್ಲಿ ಕ್ರೀಡಾಪಟುಗಳ ಮೀಸಲಾತಿಯ ಪ್ರಮಾಣವನ್ನು ಶೇ 3ಕ್ಕೆ ಹೆಚ್ಚಿಸಲು ಈ ಹಿಂದೆ ಘೋಷಿಸಲಾಗಿತ್ತು. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಲಾಗಿದೆ.
ಮೀಸಲಾತಿಗೆ ತಡೆ: ಈ ಹಿಂದೆ ಕರ್ನಾಟಕ ಸರ್ಕಾರ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇಕಡ 2ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಆದೇಶವನ್ನು ಹೊರಡಿಸಿತ್ತು. ಆದರೆ 2024ರ ಡಿಸೆಂಬರ್‌ನಲ್ಲಿ ಈ ಆದೇಶಕ್ಕೆ ತಡೆ ನೀಡಲಾಗಿದ್ದು, ವಿಶೇಷ ರಾಜ್ಯಪತ್ರದ ಮೂಲಕ ಈ ಕುರಿತು ಅಧಿಕೃತ ಆದೇಶವನ್ನು ಹೊರಡಿಸಲಾಗಿತ್ತು.
ಈ ಆದೇಶದಲ್ಲಿ ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇಕಡ 2% ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ದಿನಾಂಕ 18.09.20240 ಅಧಿಸೂಚನೆ ಅನ್ವಯ ಯಾವುದೇ ಕುಮ ಕೈಗೊಳ್ಳದಂತೆ ಸೂಚನೆಗಳನ್ನು ನೀಡಲಾಗಿತ್ತು.
ಆದೇಶದಲ್ಲಿ ಸರ್ಕಾರವು ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 19770 ನಿಯಮ 9ಕ್ಕೆ ತಿದ್ದುಪಡಿ ಮಾಡಿರುವುದನ್ನು ಪುನರ್ ಪರಿಶೀಲಿಸಲಿದೆ. ಆದುದರಿಂದ, ರಾಜ್ಯ ಸಿವಿಲ್ ಸೇವೆಯಲ್ಲಿನ ನೇರ ನೇಮಕಾತಿಯಲ್ಲಿ ಕ್ರೀಡಾ ಸಾಧಕರಿಗೆ ಶೇಕಡ 2% ರಷ್ಟು ಹುದ್ದೆಗಳನ್ನು ಮೀಸಲಿರಿಸಿ ಹೊರಡಿಸಲಾಗಿರುವ ಅಧಿಸೂಚನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಡೆಹಿಡಿಯಲಾಗಿದೆ ಎಂದು ಎಲ್ಲಾ ನೇಮಕಾತಿ ಪ್ರಾಧಿಕಾರಗಳಿಗೆ ಆದೇಶದಲ್ಲಿ ಸೂಚನೆ ಕೊಡಲಾಗಿತ್ತು.












Click it and Unblock the Notifications