Karnataka Lokayukta: ಲೋಕಾಯುಕ್ತದಲ್ಲಿ ಕೆಲಸ ಖಾಲಿ ಇದೆ, ವಿದ್ಯಾರ್ಹರೆ, ವೇತನ ವಿವರ
ಬೆಂಗಳೂರು, ನವೆಂಬರ್ 02: ಕರ್ನಾಟಕ ಲೋಕಾಯುಕ್ತ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್-ಸಿ ವೃಂದದ ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುತ್ತದೆ. ಆಸಕ್ತರು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 30/10/2024 ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/11/2024.
ಗ್ರೂಪ್-ಸಿ ವೃಂದದ ಉಳಿಕೆ ಮೂಲ ವೃಂದದಲ್ಲಿ ಖಾಲಿಯಿರುವ 16 ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗಳನ್ನು ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) ನಿಯಮಗಳು 1988ರ ಅನುಬಂಧ- ಎ ಮತ್ತು ಕೆಸಿಎಸ್ (ಸಾಮಾನ್ಯ ನೇಮಕಾತಿ) ನಿಯಮಗಳು 1977 ಹಾಗೂ ಅಧಿಸೂಚನೆ ದಿನಾಂಕ 14-08-2006 ರನ್ವಯ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು. ಅರ್ಜಿ ಸಲ್ಲಿಕೆ ಮಾಡಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ 18 ವರ್ಷ ತುಂಬಿರಬೇಕು ಹಾಗೂ ಗರಿಷ್ಠ ವಯೋಮಿತಿ ಮೀರಿರಬಾರದು. ಗರಿಷ್ಠ ವಯೋಮಿತಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಪ್ರವರ್ಗ-1 43 ವರ್ಷಗಳು. ಪ್ರವರ್ಗ 2ಎ/ 2ಬಿ/ 3ಎ/ 3ಬಿ 41 ವರ್ಷಗಳು. ಸಾಮಾನ್ಯ ಅರ್ಹತೆ 38 ವರ್ಷಗಳು.
ವೇತನ, ಇತರ ಮಾಹಿತಿಗಳು: ಕ್ಲರ್ಕ್-ಕಂ-ಟೈಪಿಸ್ಟ್ ಒಟ್ಟು ಹುದ್ದೆಗಳು 16. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 34100-800-35700-900-39300-1000-43300-1125-47800-1250-52800-1375-58300-1500-64300-1650-67600 ರೂ. ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಪದವಿ ಪೂರ್ವ ಶಿಕ್ಷಣ ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆ ಉತ್ತೀರ್ಣ ಅಥವಾ ತತ್ಸಮಾನ (ಮೂಲ ಅಂಕಪಟ್ಟಿಯನ್ನು ಅರ್ಹತಾ ಪರೀಕ್ಷೆಗೆ ಕರೆ ಬಂದಾಗ ಪರಿಶೀಲನೆಗಾಗಿ ಹಾಜರುಪಡಿಸುವುದು).
ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಕಮರ್ಷಿಯಲ್ ಪ್ರಾಕ್ಟೀಸ್‌ನ ಬೆರಳಚ್ಚು ವಿಷಯಗಳ ತೇರ್ಗಡೆಯ ತತ್ಸಮಾನತೆ ಬಗ್ಗೆ ಸರ್ಕಾರದ ಆದೇಶ ದಿನಾಂಕ 9ನೇ ನವೆಂಬರ್ 2006ರನ್ವಯ ಪರಿಗಣಿಸಲಾಗುವುದು. (ಸದರಿ ಸರ್ಕಾರದ ಆದೇಶವನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕೃತ ಜಾಲತಾಣದಲ್ಲಿ (ವೆಬ್ ಸೈಟ್) ಅಧಿಸೂಚನೆ ವಿಭಾಗದಲ್ಲಿ ವಿಕ್ಷಿಸಬಹುದು). ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಯ ತತ್ಸಮಾನ ವಿದ್ಯಾರ್ಹತೆಯನ್ನು ಸರ್ಕಾರದ ಸುತ್ತೋಲೆ ದಿನಾಂಕ 27/02/2018ರಲ್ಲಿ ತಿಳಿಸಿರುವಂತೆ ಪರಿಗಣಿಸಲಾಗುವುದು. (ಸದರಿ ಸರ್ಕಾರದ ಸುತ್ತೋಲೆಯನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಜಾಲತಾಣದಲ್ಲಿ ನೋಡಬಹುದು)
ನೇಮಕಾತಿ ಪಕ್ರಿಯೆಯನ್ನು ಕರ್ನಾಟಕ ಲೋಕಾಯುಕ್ತ (ವೃಂದ, ನೇಮಕಾತಿ ಮತ್ತು ಸಿಬ್ಬಂದಿ ಹಾಗೂ ಅಧಿಕಾರಿಗಳ ಸೇವಾ ಷರತ್ತು) (ತಿದ್ದುಪಡಿ) ನಿಯಮಗಳು 20050 ಅನುಬಂಧ-'ಎ' ರಲ್ಲಿ ತಿಳಿಸಿದಂತೆ ಕ್ಲರ್ಕ್-ಕಂ-ಟೈಪಿಸ್ಟ್ ಹುದ್ದೆಗೆ ನಿಗದಿಪಡಿಸಲಾದ ವಿದ್ಯಾರ್ಹತೆಯಲ್ಲಿ ಪಡೆದ ಅಂಕಗಳ ಮತ್ತು ಮೀಸಲಾತಿ ಆಧಾರದ ಮೇರೆಗೆ ಶ್ರೇಯಾಂಕದಲ್ಲಿರುವ ಅಭ್ಯರ್ಥಿಗಳ ಪೈಕಿ 1:10 ಅನುಪಾತದಲ್ಲಿ ಅರ್ಹತಾ ಪಟ್ಟಿಯನ್ನು ತಯಾರಿಸಿ, ಸದರಿ ಪಟ್ಟಿಯಲ್ಲಿ ಇರುವಂತಹ ಅಭ್ಯರ್ಥಿಗಳಿಗೆ ಈ ಕಛೇರಿಯಿಂದ ಅರ್ಹತಾ ಪರೀಕ್ಷೆ ನಡೆಸಲಾಗುವುದು.
ಸದರಿ ಅರ್ಹತಾ ಪರೀಕ್ಷೆಗೆ ನಿಗದಿಪಡಿಸಲಾದ ಗರಿಷ್ಠ 20 ಅಂಕಗಳಿಗೆ ಅಭ್ಯರ್ಥಿಯು ಕನಿಷ್ಠ ಶೇ.50ರಷ್ಟು ಅಂಕಗಳನ್ನು ಪಡೆದಲ್ಲಿ ಮಾತ್ರ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು. ಅರ್ಹತಾ ಪರೀಕ್ಷೆಯನ್ನು ಬೆರಳಚ್ಚು ಯಂತ್ರ/ ಗಣಕಯಂತ್ರದ ಮೂಲಕ ಕೈಗೊಳ್ಳಲಾಗುವುದು.
ಅರ್ಜಿ ಶುಲ್ಕದ ವಿವರ: ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ಅರ್ಹತೆ, ಪವರ್ಗ-2(ಎ), 2(ಬಿ), 3(ಎ), 3(ಬಿ) ಮತ್ತು ಮಾಜಿ ಸೈನಿಕರಿಗೆ 250 ರೂ. ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಪವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಸಂದರ್ಭದಲ್ಲೂ ಹಿಂದಿರುಗಿಸಲಾಗುವುದಿಲ್ಲ. ಆನ್-ಲೈನ್ ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆಗಳು ಕಂಡುಬಂದಲ್ಲಿ ಸಹಾಯವಾಣಿ ಸಂಖ್ಯೆ 080-22011297 ಗೆ ಕಚೇರಿ ಕೆಲಸದ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಆನ್-ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭದ ದಿನಾಂಕ 30/10/2024. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29/11/2024 (ಮಧ್ಯರಾತ್ರಿ 11:59 ಗಂಟೆಯವರೆಗೆ). ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 30/11/2024 (ಮಧ್ಯರಾತ್ರಿ 11:59 ಗಂಟೆಯವರೆಗೆ).
ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ವೆಬ್‌ಸೈಟ್ https://lokayukta.kar.nic.in ನಲ್ಲಿ ಸಲ್ಲಿಸಬೇಕಿದೆ. ಅರ್ಜಿಗಳನ್ನು ಆನ್-ಲೈನ್ ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು. ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.












Click it and Unblock the Notifications