ಪ್ರೌಢ ಶಾಲೆಗೆ 6 ಸಾವಿರ ಅತಿಥಿ ಶಿಕ್ಷಕರ ನೇಮಕ, ಯಾವ ಜಿಲ್ಲೆಗೆ ಎಷ್ಟು?
ಬೆಂಗಳೂರು, ಮೇ 26; ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು 2023-24ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರೌಢ ಶಾಲೆಗಳಲ್ಲಿ 6 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಿದ್ದಾರೆ. ಯಾವ ಜಿಲ್ಲೆಗೆ ಎಷ್ಟು ಹುದ್ದೆಗಳು? ಎಂದು ಸಹ ದಾಖಲು ಮಾಡಿದ್ದಾರೆ.
ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಕುರಿತು ಜ್ಞಾಪನಾ ಪತ್ರವನ್ನು ಹೊಡಸಿದ್ದಾರೆ. ಸರ್ಕಾರದ ಆದೇಶ ಸಂಖ್ಯೆ ದಿನಾಂಕ 25/05/2023, ಸರ್ಕಾರದ ಆದೇಶ ಸಂಖ್ಯೆ ದಿನಾಂಕ 23/05/2023, ಸರ್ಕಾರದ ಆದೇಶ ಸಂಖ್ಯೆ ದಿನಾಂಕ 27/04/2022 ಮತ್ತು ಸರ್ಕಾರದ ಆದೇಶ ಸಂಖ್ಯೆ ದಿನಾಂಕ 18/06/2022 ಉಲ್ಲೇಖಿಸಿದ್ದಾರೆ.

ಪ್ರೌಢಶಾಲೆಗಳಲ್ಲಿನ ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳಿಗೆದುರಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ನೇರ ನೇಮಕಾತಿ/ ಬಡ್ತಿ/ ವರ್ಗಾವಣೆ ಮೂಲಕ ಭರ್ತಿ ಮಾಡುವವರೆಗೆ ಅಥವಾ ಪ್ರಸಕ್ತ ಶೈಕ್ಷಣಿಕ ಸಾಲಿನ ಅಂತ್ಯದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಒಟ್ಟು 6000 ಅತಿಥಿ ಶಿಕ್ಷಕರನ್ನು ತಾತ್ಕಾಲಿಕವಾಗಿ ಗೌರವಧನದ ಆಧಾರದ ಮೇಲೆ ಶಾಲಾ ಪ್ರಾರಂಭದ ದಿನಾಂಕದಿಂದಲೇ ನೇಮಕ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ.
ಷರತ್ತುಗಳು; 6 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕೆಲವಯ ಷರತ್ತುಗಳನ್ನು ಹಾಕಲಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಕ್ರಮವಹಿಸಲು ಸೂಚಿಸಲಾಗಿದೆ. ತಪ್ಪಿದಲ್ಲಿ ಸಂಬಂಧಿಸಿದ ಉಪ ನಿರ್ದೇಶಕರು (ಆಡಳಿತ) ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

* ಸರ್ಕಾರಿ ಪ್ರೌಢ ಶಾಲೆಗಳಿಗೆ ಶಾಲಾವಾರು/ ತಾಲ್ಲೂಕುವಾರು ಖಾಲಿ ಇರುವ ಅಗತ್ಯ ಹುದ್ದೆಗಳಿಗೆ ಮಾತ್ರ ಅತಿಥಿ ಶಿಕ್ಷಕರನ್ನು ತ್ವರಿತವಾಗಿ ನೇಮಕಾತಿ ಮಾಡಲು ಆದ್ಯತೆ ಮೇರೆಗೆ ಅಗತ್ಯ ಕ್ರಮ ವಹಿಸುವುದು.
* ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರುಗಳ ಮೂಲಕವೇ ನೇಮಕ ಮಾಡುವುದು.
* ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗಳು/ ಬೆಂಗಳೂರು ಪಬ್ಲಿಕ್ ಶಾಲೆಗಳು ಹಾಗೂ ಆದರ್ಶ ವಿದ್ಯಾಲಯಗಳಲ್ಲಿ ಖಾಲಿ ಇರುವ ಸಹ ಶಿಕ್ಷಕರ ಹುದ್ದೆಗಳ ಶೇಕಡ 100 ರಷ್ಟು ಅತಿಥಿ ಶಿಕ್ಷಕರನ್ನು ಮೊದಲ ಆದ್ಯತೆ ನೀಡಿ ನೇಮಕ ಮಾಡಿಕೊಳ್ಳಲು ಕ್ರಮವಹಿಸುವುದು.
* ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಠಿಣ ವಿಷಯಗಳಾದ ಗಣಿತ, ವಿಜ್ಞಾನ, ಆಂಗ್ಲ ವಿಷಯದ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಆದ್ಯತೆ ನೀಡಲು ತಿಳಿಸಿದೆ. ನಂತರ ಇತರೆ ವಿಷಯಗಳಿಗೆ ಆದ್ಯತೆ ನೀಡುವುದು.
* ಸದರಿ ವಿಷಯಗಳಿಗೆ ಹೆಚ್ಚುವರಿ ಶಿಕ್ಷಕರು ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡುವಂತಿಲ್ಲ.
* ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಂಡ ಹುದ್ದೆಗೆ ವರ್ಗಾವಣೆ/ ನೇಮಕಾತಿ ಮುಖಾಂತರ ಖಾಯಂ ಶಿಕ್ಷಕರು ಸ್ಥಳನಿಯುಕ್ತಿಗೊಂಡಲ್ಲಿ ಸದರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ತಾಲ್ಲೂಕಿನಲ್ಲಿ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡುವುದು.
* ಅತಿಥಿ ಶಿಕ್ಷಕರನ್ನು ಅತೀ ಹೆಚ್ಚು ಮಕ್ಕಳಿರುವ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವ ಪ್ರೌಢ ಶಾಲೆಗಳಿಗೆ ಆದ್ಯತೆ ಮೇರೆಗೆ ಒದಗಿಸುವುದು.
* ಅತಿಥಿ ಶಿಕ್ಷಕರನ್ನು ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಾವಶ್ಯಕ ಖಾಲಿ ಹುದ್ದೆಗಳಿಗೆ ಆದ್ಯತೆ ಮೇರೆಗೆ ನೇಮಿಸುವುದು.
* ಅತಿಥಿ ಶಿಕ್ಷಕರನ್ನು ಆಯಾ ಹುದ್ದೆಗೆ ನಿಗಧಿಪಡಿಸಿದ ಕನಿಷ್ಠ ವಿದ್ಯಾರ್ಹತೆಯನ್ನು ಪರಿಗಣಿಸಿ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡತಕ್ಕದ್ದು.
* ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರ ಗೌರವ ಸಂಭಾವನೆ ದರ ಮಾಹೆಯಾನ ರೂ.10,500 ಆಗಿರುತ್ತದೆ. ಈ ಗೌರವ ಧನ ಪಾವತಿಯನ್ನು ಅತಿಥಿ ಶಿಕ್ಷಕರು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಪಾವತಿಸುವುದು.
* ತಾಲ್ಲೂಕುವಾರು ಅತಿಥಿ ಶಿಕ್ಷಕರ ಹಂಚಿಕೆ ಮಾಡಿ ಅನುದಾನದ ವಿವರ ಈ ಕಛೇರಿಗೆ ಸಲ್ಲಿಸಿದ ನಂತರ ತಾಲ್ಲೂಕಿನಿಂದ ತಾಲ್ಲೂಕಿಗೆ ಅತಿಥಿ ಶಿಕ್ಷಕರ ಮರುಹಂಚಿಕೆ ಮಾಡುವಂತಿಲ್ಲ.
ಇಲಾಖೆಯ ನಿಯಮಗಳು ಹಾಗೂ ಸುತ್ತೋಲೆಗಳ ಮಾರ್ಗದರ್ಶನದಡಿ ಒಟ್ಟು 6000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲು ಸರ್ಕಾರದ ಸಹಮತಿಯಂತೆ ಷರತ್ತುಗಳನ್ನೊಳಗೊಂಡಂತೆ ಜಿಲ್ಲೆಗಳಿಗೆ ಅತಿಥಿ ಶಿಕ್ಷಕರನ್ನು ಹಂಚಿಕೆ ಮಾಡಿ ಅನುಮತಿ ನೀಡಲಾಗಿದೆ.
ಜಿಲ್ಲಾವಾರು ಹುದ್ದೆಗಳು; ಶಿಕ್ಷಣ ಇಲಾಖೆ ಅತಿಥಿ ಶಿಕ್ಷಕರ ನೇಮಕಾತಿಗಾಗಿ ಜಿಲ್ಲಾವಾರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಬಾಗಲಕೋಟೆ 210, ಬಳ್ಳಾರಿ 253, ಚಿಕ್ಕೋಡಿ 350, ಬೆಳಗಾವಿ 211, ಬೆಂಗಳೂರು ಗ್ರಾಮಾಂತರ 85, ಬೆಂಗಳೂರು ಉತ್ತರ 65, ಬೆಂಗಳೂರು ದಕ್ಷಿಣ 145, ಬೀದರ್ 191, ಚಾಮರಾಜನಗರ 96 ಹುದ್ದೆಗಳು.
ಚಿಕ್ಕಬಳ್ಳಾಪುರ 125, ಚಿಕ್ಕಮಗಳೂರು 111, ಚಿತ್ರದುರ್ಗ 90, ದಕ್ಷಿಣ ಕನ್ನಡ 176, ದಾವಣಗೆರೆ 80, ಧಾರವಾಡ 132, ಗದಗ 132, ಹಾಸನ 234, ಹಾವೇರಿ 152, ಕಲಬುರಗಿ 268, ಕೊಡಗು 51, ಕೋಲಾರ 179 ಹುದ್ದೆಗಳು.
ಕೊಪ್ಪಳ 298, ಮಂಡ್ಯ 219, ಮೈಸೂರು 232, ರಾಯಚೂರು 431, ರಾಮನಗರ 102, ಶಿವಮೊಗ್ಗ 141, ಮಧುಗಿರಿ 110, ತುಮಕೂರು 141, ಉಡುಪಿ 113, ಶಿರಸಿ 86, ಉತ್ತರ ಕನ್ನಡ 32, ವಿಜಯನಗರ 189, ವಿಜಯಪುರ 206, ಯಾದಗಿರಿ 364 ಹುದ್ದೆಗಳು.












Click it and Unblock the Notifications