ಕೆಎಎಸ್ ಪರೀಕ್ಷೆ ಬರೆಯುವವರಿಗೆ ವಯೋಮಿತಿ ಸಡಿಲಿಕೆ, ವಿವರ
ಬೆಂಗಳೂರು, ಜನವರಿ 25: ಕರ್ನಾಟಕ ಸರ್ಕಾರ ಕೆಎಎಸ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಮಾಡಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಯೋಮಿತಿ ಸಡಿಲಿಕೆ ಮಾಡಲು ಒಪ್ಪಿಗೆ ನೀಡಲಾಗಿತ್ತು.
ಈ ಕುರಿತು ಗುರುವಾರ ಕರ್ನಾಟಕ ಸರ್ಕಾರ ಅಧಿಕೃತ ಆದೇಶವನ್ನು ಹೊರಡಿಸಿದೆ. 2023-24 ನೇ ಸಾಲಿನಲ್ಲಿ ಕೆಎಎಸ್ ಪರೀಕ್ಷೆ ಬರೆಯುವವರಿಗೆ ಒಂದು ಬಾರಿಗೆ ಸೀಮಿತವಾಗಿ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ ಎಂದು ಆದೇಶ ಹೇಳಿದೆ.

ವಿವರಗಳು: ಈ ಆದೇಶ 2023-24ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ರಿಕ್ತ ಸ್ಥಾನಗಳನ್ನು ತುಂಬಲು ಹೊರಡಿಸುವ ಅಧಿಸೂಚನೆಯಲ್ಲಿ ಅರ್ಹರಿರುವ ಎಲ್ಲಾ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡುವ ಕುರಿತು ಎಂಬ ವಿಷಯ ಒಳಗೊಂಡಿದೆ.
ಕೆಲವು ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ಆಕಾಂಕ್ಷಿಗಳು ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿ ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಇತರೆ ಕಾರಣದಿಂದ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗೆ ನೇಮಕಾತಿಗಾಗಿ 2021ನೇ ಸಾಲಿನಿಂದ ಪರೀಕ್ಷೆಯನ್ನು ನಡೆಸಿಲ್ಲವಾದ್ದರಿಂದ ಅನೇಕ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆ ಆಕಾಂಕ್ಷಿಗಳು ನೇಮಕಾತಿಗಾಗಿ ನಿಗದಿಪಡಿಸಿರುವ ಗರಿಷ್ಠ ವಯೋಮಿತಿಯನ್ನು ಮೀರಿ ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ ಎಂದು ಹೇಳಿದ್ದರು.
ಆದ್ದರಿಂದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇಂದ ಅಧಿಸೂಚನೆಗೊಳ್ಳಲಿರುವ ಗೆಜೆಟೆಡ್ ಪ್ರೊಬೇಷನರ್ಸ್ ಗ್ರೂಪ್-ಎ ಮತ್ತು ಗ್ರೂಪ್-ಬಿ ಹುದ್ದೆಗಳಿಗೆ ಹಾಜರಾಗಲು ಗರಿಷ್ಠ ವಯೋಮಿತಿಯನ್ನು ಸಡಿಲಿಸಿ ಪರೀಕ್ಷೆ ಬರೆಯಲು ಅವಕಾಶ ನೀಡುವಂತೆ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದ್ದರು.
ಈ ಅಂಶಗಳನ್ನು ಸರ್ಕಾರವು ಪರಿಶೀಲಿಸಿ 2023-24ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ವತಿಯಿಂದ ಅಧಿಸೂಚಿಸಲ್ಪಡುವ ಗ್ರೂಪ್-ಎ ಮತ್ತು ಗ್ರೂಪ್-ಬಿ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ತುಂಬಲು ಹೊರಡಿಸುವ ಅಧಿಸೂಚನೆಗೆ ಮಾತ್ರ ಅನ್ವಯವಾಗುವಂತೆ, ನಿಯಮಗಳನ್ವಯ ಅರ್ಹವಿರುವ ಎಲ್ಲ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲು ತೀರ್ಮಾನಿಸಿ ಆದೇಶಿಸಿದೆ.
ಸರ್ಕಾರದ ಆದೇಶ ದಿನಾಂಕ 24/01/2024ರಂತೆ ಕರ್ನಾಟಕ ಗೆಜೆಟೆಡ್ ಪ್ರೋಬೆಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ) ನಿಯಮಗಳು, 1997 ರನ್ವಯ 2023-24ನೇ ಸಾಲಿಗೆ ಕರ್ನಾಟಕ ಲೋಕಸೇವಾ ಆಯೋಗವು ರಿಕ್ತ ಸ್ಥಾನಗಳಿಗೆ ಹೊಸದಾಗಿ ಹೊರಡಿಸಲಿರುವ ಅಧಿಸೂಚನೆಯಲ್ಲಿ ಈಗಿರುವ ನಿಯಮಗಳ ಮೇಲೆ ಎಲ್ಲಾ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಒಂದು ಬಾರಿ (One time Measure) ಗರಿಷ್ಠ ವಯೋಮಿತಿಯನ್ನು (Upper age limit) ಮೂರು ವರ್ಷಗಳಿಗೆ ಹೆಚ್ಚಿಸಿ ಸರ್ಕಾರವು ಆದೇಶಿಸಿದೆ.
276 ಹುದ್ದೆಗಳ ಭರ್ತಿ; ಕರ್ನಾಟಕ ಸರ್ಕಾರ 2024ನೇ ಸಾಲಿನಲ್ಲಿ 276 ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳನ್ನು ಭರ್ತಿ ಮಾಡುವ ನಿರೀಕ್ಷೆ ಇದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ನೇಮಕಾತಿಗಾಗಿ ತಯಾರಿ ನಡೆದಿದೆ.
ಹುದ್ದೆಗಳನ್ನು ಭರ್ತಿ ಮಾಡಲು ಆರ್ಥಿಕ ಇಲಾಖೆಯ ಒಪ್ಪಿಗೆಯೂ ಸಿಕ್ಕಿದ್ದು, ಈ ಕುರಿತು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಹ ಸಲ್ಲಿಕೆಯಾಗಿದೆ. ಯಾವಾಗ ಅಧಿಸೂಚನೆ ಪ್ರಕಟವಾಗಲಿದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.












Click it and Unblock the Notifications