ಸರ್ಕಾರಿ ಉದ್ಯೋಗಾಕಾಂಕ್ಷಿಗಳೇ ಗಮನಿಸಿ ; ನೇಮಕಾತಿಗೆ ನಡೆದಿದೆ ತಯಾರಿ
ಬೆಂಗಳೂರು, ಡಿಸೆಂಬರ್ 19; ಕರ್ನಾಟಕದ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳು ಖಾಲಿ ಇವೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಕಾಲ ಕಾಲಕ್ಕೆ ಸರ್ಕಾರ ನೇಮಕಾತಿಯನ್ನು ಮಾಡುತ್ತದೆ. ರಾಜ್ಯದ 43 ಇಲಾಖೆಗಳಿಗೆ ಒಟ್ಟು ಮಂಜೂರಾಗಿರುವ ಹುದ್ದೆಗಳು 7,72,025.
ಬೆಳಗಾವಿಯಲ್ಲಿ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್‌ನಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಕುರಿತು ಚರ್ಚೆ ನಡೆದಿದೆ. ಶಶೀಲ್ ಜಿ. ನಮೋಶಿ (ಶಿಕ್ಷಕರ ಕ್ಷೇತ್ರ) ಕೇಳಿದ್ದ ಪ್ರಶ್ನೆಗೆ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ.

ಸರ್ಕಾರದಲ್ಲಿರುವ ವಿವಿಧ ಇಲಾಖೆಗಳ ಸಂಖ್ಯೆ ಎಷ್ಟು?, ಎಲ್ಲಾ ವೃಂದದ ಹುದ್ದೆಗಳು ಸೇರಿದಂತೆ ಈ ಇಲಾಖೆಗಳಿಗೆ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ ಎಷ್ಟು? (ಇಲಾಖೆವಾರು ಅಂಕಿ-ಅಂಶ ಒದಗಿಸುವುದು) ಎಂದು ಸದಸ್ಯರು ಪ್ರಶ್ನಿಸಿದ್ದರು.
ಮುಖ್ಯಮಂತ್ರಿಗಳು ಉತ್ತರದಲ್ಲಿ ರಾಜ್ಯ ಸರ್ಕಾರದಲ್ಲಿ ಒಟ್ಟು 43 ಇಲಾಖೆಗಳಿವೆ. ಎಲ್ಲಾ ವೃಂದದ ಹುದ್ದೆಗಳು ಸೇರಿದಂತೆ ಇಲಾಖೆಗಳಿಗೆ ಮಂಜೂರಾಗಿರುವ ಹುದ್ದೆಗಳ ವಿವಿರಗಳನ್ನು ನೀಡಿದ್ದಾರೆ. ಅಧಿಕಾರಿ ಹುದ್ದೆಗಳು 86,309, ಸಿಬ್ಬಂದಿ 6,85,716 ಮತ್ತು ಒಟ್ಟು ಮಂಜೂರಾಗಿರುವ ಹುದ್ದೆಗಳು 7,72,025 ಎಂದು ಮಾಹಿತಿ ನೀಡಿದ್ದಾರೆ.
ಮತ್ತೊಂದು ಪ್ರಶ್ನೆಯಲ್ಲಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಶೇ 50 ಹೆಚ್ಚು ಹುದ್ದೆಗಳು ಖಾಲಿ ಇರುವುದರಿಂದ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಕೆಲಸ ಕಾರ್ಯಗಳು ಆಗದಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ? ಎಂದು ಪ್ರಶ್ನೆ ಮಾಡಿದ್ದರು. ಬಂದಿದ್ದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಕೈಗೊಂಡ ಕ್ರಮಗಳೇನು? ಎಂದು ಕೇಳಿದ್ದರು.
ಮುಖ್ಯಮಂತ್ರಿಗಳ ಉತ್ತರ; ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಖಾಲಿ ಇರುವ ಹುದ್ದೆಗಳಲ್ಲಿ ಹೆಚ್ಚುವರಿ ಪ್ರಭಾರದಲ್ಲಿರಿಸಿ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ. ನೇರ ನೇಮಕಾತಿ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಂಡಿದೆ ಹಾಗೂ ಖಾಲಿ ಇರುವ ಮುಂಬಡ್ತಿ ಹುದ್ದೆಗಳನ್ನು ಅರ್ಹ ಅಭ್ಯರ್ಥಿಗಳು ಲಭ್ಯವಾದಂತೆ ಕಾಲಕಾಲಕ್ಕೆ ಮುಂಬಡ್ತಿ ನೀಡುವ ಮೂಲಕ ಭರ್ತಿ ಮಾಡಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ವಿಳಂಬವಾಗುವುದರಿಂದ ಅಲ್ಲಿಯವರೆಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕಡೆ ಸರ್ಕಾರ ನಿರ್ಧಾರ ತೆಗೆದುಕೊಳ್ಳುವುದೇ? ಎಂದು ಪ್ರಶ್ನೆ ಮಾಡಲಾಗಿತ್ತು.
ಮುಖ್ಯಮಂತ್ರಿಗಳು ಗ್ರೂಪ್-ಸಿ ವೃಂದದ ಶೀಘ್ರಲಿಪಿಗಾರರು, ಬೆರಳಚ್ಚುಗಾರರು, ವಾಹನ ಚಾಲಕರು ಮತ್ತು ಗ್ರೂಪ್-ಡಿ ವೃಂದದ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲು ಕ್ರಮ ವಹಿಸಿದೆ ಎಂದು ಹೇಳಿದ್ದಾರೆ.
ಹುದ್ದೆಗಳ ಭರ್ತಿಗೆ ಸಿದ್ಧತೆ; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪ್ರಯತ್ನ ನಡೆಸಿದೆ. ಇಂತಹ ಸಂದರ್ಭದಲ್ಲಿಯೇ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳನ್ನು ಸಹ ಭರ್ತಿ ಮಾಡಿ ನೌಕರರ ಮೇಲಿನ ಹೊರೆಯನ್ನು ಕಡಿಮೆ ಮಾಡಬೇಕಿದೆ.
ಸುಗಮ ಆಡಳಿತ ನಿರ್ವಹಣೆ, ಹಾಲಿ ಅಧಿಕಾರಿ ಸಿಬ್ಬಂದಿ ಮೇಲಿನ ಕೆಲಸದ ಒತ್ತಡ ತಪ್ಪಿಸಲು ಅವಶ್ಯಕತೆಗೆ ಅನುಗುಣವಾಗಿ ಹುದ್ದೆಗಳಿಗೆ ನೇಮಕಾತಿ ಮಾಡುವುದು ಅನಿವಾರ್ಯವಾಗಿದೆ. ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಸರ್ಕಾರ ಚಿಂತನೆ ನಡೆಸಿದ್ದು, ಪ್ರಾಥಮಿಕ ತಯಾರಿ ಆರಂಭಿಸಿದೆ.
ಕರ್ನಾಟಕ ಗೆಜೆಟೆಡ್ ಪ್ರೊಬೆಷನರ್‌ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ) ನಿಯಮಗಳು, 1997ರ ಷೆಡ್ಯೂಲ್ 1ರಲ್ಲಿ ನಿರ್ದಿಷ್ಟಪಡಿಸಿರುವ ಗ್ರೂಪ್ -ಎ ಮತ್ತು ಗ್ರೂಪ್- ಬಿ ನೇಮಕಾತಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸಂಗ್ರಹ ಮಾಡುತ್ತಿದೆ.
43 ಇಲಾಖೆಗಳಲ್ಲಿ ಒಟ್ಟು 2,55,920 ಹುದ್ದೆಗಳು ಖಾಲಿ ಇವೆ ಎಂಬುದು ಲೆಕ್ಕಾಚಾರ. ಈ ಪೈಕಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಆರೋಗ್ಯ, ವೈದ್ಯಕೀಯ ಶಿಕ್ಷಣ, ಕಂದಾಯ, ಪೊಲೀಸ್, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನೀರಾವರಿ ಹೀಗೆ ತುರ್ತು ಅಗತ್ಯ ಇರುವ ಇಲಾಖೆಗಳ ಖಾಲಿ ಹುದ್ದೆಗಳನ್ನು ಮೊದಲು ತುಂಬಲು ಸರ್ಕಾರ ಚಿಂತಿಸಿದೆ.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಹುದ್ದೆಗಳ ನೇರ ನೇಮಕಾತಿ ಕಡಿಮೆಯಾಗಿದ್ದು, ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕ ಮಾಡಿಕೊಳ್ಳುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಆದ್ದರಿಂದ ಮೊದಲ ಹಂತದಲ್ಲಿ ವಿವಿಧ ಇಲಾಖೆಗಳ ನೇಮಕಾತಿಯನ್ನು ಮಾಡಲು ಸರ್ಕಾರ ತಯಾರಿ ಆರಂಭಿಸಿದೆ.












Click it and Unblock the Notifications