ಕರ್ನಾಟಕ ಅಬಕಾರಿ ಇಲಾಖೆ ನೇಮಕಾತಿ; ಹುದ್ದೆಗಳ ವಿವರ
ಬೆಂಗಳೂರು, ಡಿಸೆಂಬರ್ 19; ಕರ್ನಾಟಕದ ಅಬಕಾರಿ ಇಲಾಖೆಯಲ್ಲಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ. ವಿವಿಧ ಹುದ್ದೆಗಳ ಭರ್ತಿಗೆ ಕೆಪಿಎಸ್‌ಸಿಗೆ ಪ್ರಸ್ತಾವನೆ ಕಳಿಸಲಾಗಿದ್ದು, ಒಪ್ಪಿಗೆ ಸಿಕ್ಕ ಬಳಿಕ ಅಧಿಸೂಚನೆ ಪ್ರಕಟವಾಗಲಿದೆ.
ಅಬಕಾರಿ ಇಲಾಖೆ ಸಚಿವ ಕೆ. ಗೋಪಾಲಯ್ಯ ಈ ಕುರಿತು ಮಾಹಿತಿ ನೀಡಿದ್ದಾರೆ. ಒಟ್ಟು 1,100 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟವಾಗಲಿದೆ. ಆಸಕ್ತರು ಅರ್ಜಿ ಹಾಕಲು ಸಿದ್ಧತೆ ಮಾಡಿಕೊಳ್ಳಬಹುದು.
ಅಬಕಾರಿ ಪೇದೆ 1000 ಮತ್ತು ಅಬಕಾರಿ ಸಬ್ ಇನ್ಸ್‌ಪೆಕ್ಟರ್ 100 ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನೇಮಕಾತಿ ನಡೆಯಲಿದೆ. ಈ ಕುರಿತು ಇಲಾಖೆಯಿಂದ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಹ ಕಳಿಸಲಾಗಿದೆ.

ಸಚಿವರು ಹೇಳಿದ್ದೇನು?; "ಇಲಾಖೆಯ ಒಟ್ಟು 1,100 ಹುದ್ದೆಗಳ ಪೈಕಿ 1000 ಅಬಕಾರಿ ಪದೇ, 100 ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಸಚಿವರು ಹೇಳಿದ್ದಾರೆ.
ಸಚಿವರು ಮಾತನಾಡಿ, "ರಾಜ್ಯದ ಬೊಕ್ಕಸಕ್ಕೆ ಆದಾಯ ತಂದು ಕೊಡುವ ಅಬಕಾರಿ ಇಲಾಖೆಯ ಬಲವರ್ಧನೆಗೆ ಸರ್ಕಾರ ಆದ್ಯತೆ ನೀಡಿದೆ. ಈ ವರ್ಷ 2900 ಕೋಟಿ ರೂ. ಆದಾಯ ಗಳಿಕೆಯ ಗುರಿ ನೀಡಲಾಗಿದೆ" ಎಂದರು.
ಹುದ್ದೆಗಳ ವಿವರ; ಸಚಿವರು ನೀಡಿರುವ ಮಾಹಿತಿಯಂತೆ ಅಬಕಾರಿ ಇಲಾಖೆಗೆ 2021ರ ಸೆಪ್ಟೆಂಬರ್‌ನಂತೆ ಮಂಜೂರಾಗಿರುವ ಹುದ್ದೆಗಳು 5812. ಕಾರ್ಯ ನಿರ್ವಹಣೆ ಮಾಡುತ್ತಿರುವ ಹುದ್ದೆಗಳು 4057. ಖಾಲಿ ಇರುವ ಹುದ್ದೆಗಳು 1755.
ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಅಬಕಾರಿ ಇನ್ಸ್‌ಪೆಕ್ಟರ್, ಅಬಕಾರಿ ಪೇದೆ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅಬಕಾರಿ ಪೇದೆ ಹುದ್ದೆಗೆ ವಿದ್ಯಾರ್ಹತೆ ಪಿಯುಸಿ, ಅಬಕಾರಿ ಇನ್ಸ್‌ಪೆಕ್ಟರ್ ಹುದ್ದೆಗೆ ಪದವಿ ಪಾಸ್ ಆಗಿರಬೇಕು.
ಅಬಕಾರಿ ಪೇದೆ ಹುದ್ದೆಗೆ ವೇತನ 21,400-42,000 ರೂ. ನಿಗದಿ ಮಾಡಲಾಗಿದೆ. ಹಾಗೆಯೇ ಅಬಕಾರಿ ಇನ್ಸ್‌ಪೆಕ್ಟರ್ ಹುದ್ದೆಗೆ 37,900-70,850 ರೂ.ಗಳು.
ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕಿದ ಬಳಿಕ ಕರ್ನಾಟಕ ಲೋಕಸೇವಾ ಆಯೋಗ ಅಬಕಾರಿ ಇನ್ಸ್‌ಪೆಕ್ಟರ್, ಅಬಕಾರಿ ಪೇದೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಿದೆ.
ಕೆಪಿಎಸ್‌ಸಿಯ ಉದ್ಯೋಗ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗದ ವೆಬ್ ಸೈಟ್‌ಗೆ ಭೇಟಿ ನೀಡಬಹುದಾಗಿದೆ.












Click it and Unblock the Notifications