ಶಿಕ್ಷಣ ಇಲಾಖೆ; ಬೋಧಕೇತರ ವೃಂದದ 279 ಹುದ್ದೆಗಳು ತಕ್ಷಣದಿಂದ ರದ್ದು
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಬೋಧಕೇತರ ವೃಂದದ 279 ಹುದ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು, ಫೆಬ್ರವರಿ 15; ಕರ್ನಾಟಕ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮುಖ್ಯೋಪಾಧ್ಯಾಯರ ವೃಂದದ 58 ಹುದ್ದೆಗಳ ಮಂಜೂರಾತಿ ಸಂಬಂಧ ಸರ್ಕಾರದ ಆದೇಶದಲ್ಲಿನ ಷರತ್ತಿನಂತೆ ಬೋಧಕೇತರ ವೃಂದದ 279 ಹುದ್ದೆಗಳನ್ನು ರದ್ದುಗೊಳಿಸುವ ಬಗ್ಗೆ ಆದೇಶ ಹೊರಡಿಸಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ. ವಿಶಾಲ್. ಆರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ದಿನಾಂಕ 19/01/2023ರಂದು ಬೆಂಗಳೂರಿನಲ್ಲಿ ನಡೆದ ಸಭೆಯ ನಡಾವಳಿ, ಅಪರ ಆಯುಕ್ತರ ಕಲಬುರಗಿ ಮತ್ತು ಧಾರವಾಡದ ನಿರ್ದೇಶಕರು ಡಿ. ಎಸ್. ಇ. ಆರ್. ಟಿ., ಕೆ. ಎಸ್. ಇ. ಎ. ಬಿ, ಕೆಟಿ. ಬಿ. ಎಸ್. ಹಾಗೂ ಜಿಲ್ಲಾ ಉಪನಿರ್ದೇಶಕರುಗಳಿಂದ ಸ್ವೀಕೃತವಾಗಿರುವ ಪ್ರಸ್ತಾವನೆಗಳ ಉಲ್ಲೇಖ ಈ ಆದೇಶ ಹೊರಡಿಸಲಾಗಿದೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯರು/ ಉಪ ಪ್ರಾಂಶುಪಾಲರ ವೃಂದದ 58 ಹುದ್ದೆಗಳನ್ನು ಸೃಜಿಸಲು ಬೋಧಕೇತರ ವೃಂದದ 279 ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.

ಯಾವ-ಯಾವ ಹುದ್ದೆಗಳು; ಶೀಘ್ರಲಿಪಿಗಾರ 50, ಹಿರಿಯ ಬೆರಳಚ್ಚುಗಾರ 29, ದ್ವಿತೀಯ ದರ್ಜೆ ಸಹಾಯಕ 100, ಕ್ಲರ್ಕ್-ಕಂ-ಡಾಟಾ ಎಂಟ್ರಿ ಆಪರೇಟರ್ 50, ಬೆರಳಚ್ಚುಗಾರ 50 ಸೇರಿ 279 ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.
ಈ ಕುರಿತ ಆದೇಶ ಹೀಗಿದೆ, ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳಂತೆ ಒಟ್ಟು 279 ಬೋಧಕೇತರ ವೃಂದದ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶಿಸಿದೆ. ಹುದ್ದೆವಾರು ಮಾಹಿತಿಯನ್ನು ಮಾಹಿತಿಯನ್ನು ಲಗತ್ತಿಸಿದೆ ಎಂದು ಹೇಳಿದೆ.
ಪ್ರಸ್ತಾವನೆ ಏನಿತ್ತು?; ಸರ್ಕಾರದ ಆದೇಶದಲ್ಲಿ ರದ್ದತಿಗೊಳಿಸಿರುವ ವಿವಿಧ ಬೋಧಕೇತರ ಹುದ್ದೆಗಳ ಸಂಬಂಧ ಶಾಲೆ/ ಕಛೇರಿಗಳಲ್ಲಿ ಮಂಜೂರಾಗಿರುವ ಆಯಾ ವೃಂದದ ಒಟ್ಟಾರೆ ಹುದ್ದೆಗಳ ಮಾಹಿತಿಯನ್ನು ಮತ್ತು ಶಾಲಾ/ ಕಛೇರಿಗಳಲ್ಲಿ ರದ್ದುಗೊಳಿಸಬಹುದಾದ ಒಟ್ಟಾರೆ ಹುದ್ದೆಗಳ ಮಾಹಿತಿಯನ್ನು ಆಯಾ ಜಿಲ್ಲಾ ಉಪನಿರ್ದೇಶಕರುಗಳಿಂದಲೂ ಮತ್ತು ಈ ಬಗ್ಗೆ ಆಯಾ ವಿಭಾಗೀಯ ಸಹನಿರ್ದೇಶಕರುಗಳಿಂದ ಪೂರಕ ವರದಿಗಳನ್ನು ಪಡೆಯಲಾಗಿರುತ್ತದೆ.

ಹಾಗೇಯೇ, ರಾಜ್ಯ ಮಟ್ಟದ ಕಛೇರಿಗಳಲ್ಲಿ ರದ್ದುಪಡಿಸಬಹುದಾದ ಹುದ್ದೆಗಳಿದ್ದಲ್ಲಿ ಆಯಾ ಕಛೇರಿ ಮುಖ್ಯಸ್ಥರುಗಳಿಂದ ವರದಿಗಳನ್ನು ಪಡೆಯಲಾಗಿದೆ. ಸದರಿ ಮಾಹಿತಿಗಳನ್ನು ಅವಲೋಕಿಸಿ ರೂಪದ ನೀತಿಯನ್ನು ಅಳವಡಿಸಿಕೊಳ್ಳಲಾಗಿದೆ.
* ರಾಜ್ಯದ ಡಯಟ್ ಹಾಗೂ ಸಿ.ಟಿ.ಇ ಗಳಲ್ಲಿನ ಶೀಘ್ರಲಿಪಿಗಾರರ ಹುದ್ದೆಗೆ ಸಂಬಂಧ ಪಟ್ಟಂತೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ನಿರ್ದೇಶನಾಲಯದ ವರದಿಯನ್ನು ಪಡೆಯಲಾಗಿದೆ. ವರದಿಯಂತೆ ಶೀಘ್ರಲಿಪಿಗಾರರ ಹುದ್ದೆಯನ್ನು ಏಕರೂಪವಾಗಿ ಎಲ್ಲಾ ಡಯಟ್‌ಗಳಲ್ಲಿ ರದ್ದುಪಡಿಸಬಹುದಾಗಿದೆ. ಡಯಟ್/ ಸಿ.ಟಿ.ಇನ ಒಟ್ಟು 33 ಹುದ್ದೆಗಳು ರದ್ದುಗೊಳ್ಳಲಿವೆ.
* ಕೇಂದ್ರ ಕಛೇರಿಗಳಲ್ಲಿನ ಹುದ್ದೆಗಳಿಗೆ ಸಂಬಂಧಪಟ್ಟಂತೆ ವರದಿಗಳನ್ನು ಪಡಯಲಾಗಿದ್ದು ಖಾಲಿ ಇರುವ ಒಟ್ಟು 17 ಶೀಘ್ರಲಿಪಿಗಾರರ ಹುದ್ದೆಗಳನ್ನು ರದ್ದುಪಡಿಸಬಹುದಾಗಿದೆ.
* ಬೆರಳಚ್ಚುಗಾರರು/ ಹಿರಿಯ ಬೆರಳಚ್ಚುಗಾರರು, ದ್ವಿತೀಯ ದರ್ಜೆ ಸಹಾಯಕರು, ಮತ್ತು ಕ್ಲರ್ಕ್-ಕಂ-ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಮಾಹಿತಿ ವರದಿಗಳನ್ನು ಅವಲೋಕಿಸಲಾಗಿದೆ. ಯಾವುದೇ ಶಾಲೆಯಲ್ಲಿ ಕಡಿಮೆ ದಾಖಲಾತಿ ಇದ್ದು ಒಂದಕ್ಕಿಂತ ಹೆಚ್ಚು ಹುದ್ದೆ ಮಂಜೂರಾಗಿದ್ದು ಹೆಚ್ಚುವರಿ ಎಂಬುದಾಗಿ ಗುರುತಿಸಿ ರದ್ದುಪಡಿಸಲು ಉಪನಿರ್ದೇಶಕರು ಹಾಗೂ ಕಛೇರಿ ಮುಖ್ಯಸ್ಥರು ಅಭಿಪ್ರಾಯಿಸಿರುವಂತೆ ಪರಿಶೀಲಿಸಿದೆ.
* ಬೆರಳಚ್ಚುಗಾರರು/ ಹಿರಿಯ ಬೆರಳಚ್ಚುಗಾರರು ಮತ್ತು ದ್ವಿತೀಯ ದರ್ಜೆ ಸಹಾಯಕರು ಮತ್ತು ಕ್ಲರ್ಕ್-ಕಂ- ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು ನಿಗದಿತ ಪ್ರಮಾಣದಲ್ಲಿ ರದ್ಧತಿಗೆ ದೊರೆತಿರುವುದಿಲ್ಲ. ಆದರೆ ಪಮಾಣಕ್ಕಿಂತ ಹೆಚ್ಚುವರಿ ಸಂಖ್ಯೆಯಲ್ಲಿ ದ್ವಿ.ದ.ಸ ಹುದ್ದೆಗಳನ್ನು ರದ್ದತಿಗೆ ಪ್ರಸ್ತಾಪಿಸಿರುತ್ತಾರೆ.
ಈ ಅಂಶಗಳನ್ನು ಪರಿಶೀಲಿಸಿ ದ್ವಿತೀಯ ದರ್ಜೆ ಸಹಾಯಕರು, ಬೆರಳಚ್ಚುಗಾರರು/ ಹಿರಿಯ ಬೆರಳಚ್ಚುಗಾರರು, ದ್ವಿತೀಯ ದರ್ಜೆ ಸಹಾಯಕರು, ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳು ಸಮಾನಾಂತರ ವೇತನ ಶ್ರೇಣಿಯಿರುವ ಹುದ್ದೆಗಳಾಗಿದ್ದು ದ್ವಿ.ದ.ಸ ಹುದ್ದೆಗಳಲ್ಲಿ ಹೆಚ್ಚುವರಿಯಾಗಿ ರದ್ಧತಿಗೆ ದೂರೆತಿರುವ 05 ಹುದ್ದೆಗಳನ್ನು ಬೆರಳಚ್ಚುಗಾರರು/ ಹಿರಿಯ ಬೆರಳಚ್ಚುಗಾರರು ಮತ್ತು ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಕೊರತೆಗೆ ಸರಿದೂಗಿಸಬಹುದಾಗಿದೆ.
* ಒಟ್ಟು 50 ಶೀಘ್ರಲಿಪಿಗಾರರು, 105 ದ್ವಿ.ದ.ಸ, 76 ಬೆರಳಚ್ಚುಗಾರರು/ ಹಿರಿಯ ಬೆರಳಚ್ಚುಗಾರರು, 48 ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ (ಸಿ.ಸಿಟಿ) ಹುದ್ದೆಗಳನ್ನು ರದ್ದುಪಡಿಸಬಹುದಾಗಿದೆ.
* ರದ್ದುಪಡಿಸಬಹುದಾದ ಹುದ್ದೆಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿಯನ್ನು ಹತ್ತಿರದ ಖಾಲಿ ಹುದ್ದೆಗೆ ಅಥವಾ ಖಾಲಿ ಹುದ್ದೆ ಲಭ್ಯವಿಲ್ಲದೇ ಇದ್ದಲ್ಲಿ ಸಮಾನ ವೃಂದಕ್ಕೆ ಸ್ಥಳಾಂತರಿಸಬಹುದಾಗಿದೆ. ಒಟ್ಟಾರೆ 279 ಬೋಧಕೇತರ ವಿವಿಧ ವೃಂದದ ಹುದ್ದೆಗಳನ್ನು ಗುರುತಿಸಿ ಕೆಳಕಂಡಂತೆ ರದ್ದು ಪಡಿಸಿ ಆದೇಶಿಸಲಾಗಿದೆ.
ವರದಿ ಸಲ್ಲಿಕೆಗೆ ಸೂಚನೆ; ಈ ಬಗ್ಗೆ ಆಯಾ ಕಛೇರಿ ಮುಖ್ಯಸ್ಥರು ಕೆಳಕಂಡ ಕ್ರಮಗಳನ್ನು ತುರ್ತಾಗಿ ಕೈಗೊಂಡು ವರದಿಯನ್ನು ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
* ಆಯಾ ಕಛೇರಿ ಮುಖ್ಯಸ್ಥರು ಹಾಗೂ ಸಂಬಂಧಪಟ್ಟ ನಿರ್ದೇಶಕರು, ಸಹ ನಿರ್ದೇಶಕರು, ಹಾಗೂ ಜಿಲ್ಲಾ ಉಪ ನಿರ್ದೇಶಕರು ಅನುಬಂಧದಲ್ಲಿನ ಹುದ್ದೆಗಳನ್ನು ಪರಿಶೀಲಿಸಿಕೊಳ್ಳತಕ್ಕದ್ದು.
* ಖಾಲಿ ಹುದ್ದೆಗಳು ಮತ್ತು ಕಾರ್ಯನಿರತ ಹುದ್ದೆಗಳಾಗಿದ್ದಲ್ಲಿ ಆ ಹುದ್ದೆಗಳೂ ಸೇರಿದಂತೆ, ಒಟ್ಟಾರೆ 279 ಹುದ್ದೆಗಳು ರದ್ದಾಗಿರುವುದರಿಂದ ಸದರಿ ಕಾರ್ಯ ನಿರತ ಸಿಬ್ಬಂದಿಗಳನ್ನು ಹತ್ತಿರದ ಸ್ಥಳಕ್ಕೆ ಸ್ಥಳಾಂತರಿಸಿರುವಂತ ಆಯಾ ಸಹ ನಿರ್ದೇಶರು/ ಉಪ ನಿರ್ದೇಶಕರು ಕ್ರಮವಹಿಸಿ ಹತ್ತಿರದ ಸ್ಥಳ ಆಯ್ಕೆಗೆ ಅನುವುಮಾಡಿಕೊಟ್ಟು, ಮೂಲ ಸ್ಥಳದಿಂದ ಬಿಡುಗಡೆಗೊಳಿಸಿ ಹೊಸ ಸ್ಥಳಕ್ಕೆ ಹಾಜರಾಗುವಂತೆ ಕ್ರಮವಹಿಸತಕ್ಕದ್ದು.
* ಒಂದು ವೇಳೆ ಯಾವುದಾದರೂ ಅಂತಹ ಕಾರ್ಯನಿರತ ಸಿಬ್ಬಂದಿಯು ಇಚ್ಛೆಪಟ್ಟಲ್ಲಿ ಆಯಾ ವಿಭಾಗೀಯ ಸಹನಿರ್ದೇಶಕರು ಹತ್ತಿರದ ಮತ್ತೂಂದು ಖಾಲಿ ಹುದ್ದೆಯನ್ನು ಆಯ್ಕೆಮಾಡಿಕೊಳ್ಳಲು ಅನುವಾಗುವಂತೆ ಕ್ರಮವಹಿಸತಕ್ಕದ್ದು,
* ಕಾರ್ಯನಿರತ ಸಿಬ್ಬಂದಿಗೆ ಸಂಬಂಧಿಸಿದಂತೆ ಮೇಲಿನಂತೆ ಸ್ಥಳಾಂತರಿಸಲು ಖಾಲಿ ಹುದ್ದೆ ಲಭ್ಯವಿಲ್ಲದೇ ಇದ್ದ ಪಕ್ಷದಲ್ಲಿ ಅದೇ ಘಟಕದೊಳಗಿನ ಸಮಾನಾಂತರ ವೃಂದದ ಹುದ್ದೆಯನ್ನು ಗುರುತಿಸಿ ಹುದ್ದೆ ಎದುರಾಗಿ ಅಂತಹ ಸಿಬ್ಬಂದಿಗೆ ಸ್ಥಳ ನಿಯುಕ್ತಿಗೊಳಿಸುವುದು. ಈ ಕ್ರಮವು ಬೇರೆ ಯಾವುದೇ ಆಯ್ಕೆ ಇಲ್ಲದೇ ಇದ್ದಾಗ ಮಾತ್ರ ಅನಿವಾರ್ಯ ಸಂದರ್ಭದಲ್ಲಿನ ಆಯ್ಕೆಯಾಗಿರತಕ್ಕದ್ದು, ಈ ಬಗ್ಗೆ ಕಟ್ಟುನಿಟ್ಟಿನ ಎಚ್ಚರ ವಹಿಸತಕ್ಕದ್ದು ಮತ್ತು ಅಂತಹ ಸಿಬ್ಬಂದಿಗೆ ವೇತನಕ್ಕೆ ಯಾವುದೇ ತೊಂದರೆಯಾಗದಂತೆ ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸಿ ಆಯುಕ್ತರು/ ಅಪರ ಆಯುಕ್ತರ ಅನುಮೋದನೆಯನ್ನು ಪಡೆಯತಕ್ಕದ್ದು, ಅಂತಹ ಯಾವುದೇ ಸಿಬ್ಬಂದಿಗೂ ಜೇಷ್ಟತೆಯ ವಿಷಯಗಳಲ್ಲಿ ತೊಂದರೆಯಾಗತಕ್ಕದ್ದಲ್ಲ.
* ಸದರಿ ಎಲ್ಲಾ ರದ್ದುಗೊಂಡಿರುವ ಹುದ್ದೆಗಳ ಮಾಹಿತಿಗಳನ್ನು ಆಯಾ ಕಛೇರಿಯ ಹುದ್ದೆ ಮಂಜೂರಾತಿ ವಹಿಗಳು/ ಸಿಬ್ಬಂದಿ ಪರಿಶಿಷ್ಟ್ಯಗಳಲ್ಲಿ (ಶೆಡ್ಯೂಲ್)ಗಳಲ್ಲಿ ಹುದ್ದೆ ರದ್ಧತಿ ಸಂಬಂಧ ಕೆಂಪುಶಾಹಿಯಲ್ಲಿಯೇ ನಮೂದಿಸಿ ಕಛೇರಿ ಮುಖ್ಯಸ್ಥರು ದಾಖಲಿಸಿ ದೃಢೀಕರಿಸತಕ್ಕದ್ದು. ಆಯಾ ಉಪನಿರ್ದೇಶಕರು ಸಹ ಈ ಮಾಹಿತಿಯನ್ನು ಹೊಂದಿರತಕ್ಕದ್ದು.
* ಕಲಬುರಗಿ ಮತ್ತು ಧಾರವಾಡ ಆಯುಕ್ತಾಲಯದ ವ್ಯಾಪ್ತಿಯಲ್ಲಿ ರದ್ದುಪಡಿಸಿರುವ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ಸ್ಥಳನಿಯುಕ್ತಿಗೊಳಿಸಲು ಅಪರ ಆಯುಕ್ತರು ಕಲಬುರಗಿ ಮತ್ತು ಧಾರವಾಡ ರವರು ಅಗತ್ಯ ಕ್ರಮವಹಿಸತಕ್ಕದ್ದು ಎಂದು ತಿಳಿಸಲಾಗಿದೆ.











Click it and Unblock the Notifications