ಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ: ರಾಜ್ಯದಲ್ಲಿ 56,432 ಸರ್ಕಾರಿ ಹುದ್ದೆಗಳ ನೇಮಕಾತಿಗೆ ಸಂಪುಟ ಅಸ್ತು
ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಆಗ್ರಹಿಸಿ ಇತ್ತೀಚೆಗೆ ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ನಡೆಸಿದ ಬೃಹತ್ ಪ್ರತಿಭಟನೆಗೆ ಕೊನೆಗೂ ಮಣಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಯುವಕ-ಯುವತಿಯರಿಗೆ ಸಿಹಿಸುದ್ದಿ ನೀಡಿದೆ. ಗುರುವಾರ ವಿಧಾನಸೌಧದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಬರೋಬ್ಬರಿ 56,432 ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಗ್ರೀನ್ ಸಿಗ್ನಲ್ ನೀಡಲಾಗಿದೆ.
ಮುಂದಿನ 30 ದಿನಗಳ ಒಳಗಾಗಿ ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಹಾಗೂ ಅಧಿಸೂಚನೆ ಹೊರಡಿಸುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಮೂಲಕ ಕಳೆದ ಹಲವು ವರ್ಷಗಳಿಂದ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿದ್ದ ಮತ್ತು ವಯೋಮಿತಿ ಮೀರುತ್ತಿದೆ ಎಂದು ಆತಂಕದಲ್ಲಿದ್ದ ಲಕ್ಷಾಂತರ ಅಭ್ಯರ್ಥಿಗಳ ನಿರೀಕ್ಷೆಗೆ ಕೊನೆಗೂ ಜೀವ ಬಂದಂತಾಗಿದೆ.

ಹಳೆಯ ಮೀಸಲಾತಿ ಅನ್ವಯವೇ ನೇಮಕಾತಿ
ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್, ನೇಮಕಾತಿ ಪ್ರಕ್ರಿಯೆಯ ರೂಪುರೇಷೆಗಳನ್ನು ವಿವರಿಸಿದರು. ರಾಜ್ಯದಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲಾತಿ ಹೆಚ್ಚಳ ಕಾಯ್ದೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಈ ಹಿಂದಿನ ಶೇ. 50ರ ಮೀಸಲಾತಿ ಮಿತಿಯಡಿಯಲ್ಲೇ (ಎಸ್‌ಸಿಗೆ ಶೇ. 15 ಮತ್ತು ಎಸ್‌ಟಿಗೆ ಶೇ. 3) ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂದಿನ ಸರ್ಕಾರ ಹೆಚ್ಚಳ ಮಾಡಿದ್ದ ಶೇ. 2ರಷ್ಟು (ಎಸ್‌ಸಿ) ಮತ್ತು ಶೇ. 4ರಷ್ಟು (ಎಸ್‌ಟಿ) ಹುದ್ದೆಗಳನ್ನು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಕಾಯ್ದಿರಿಸಲಾಗುವುದು. ಒಟ್ಟಾರೆ ಯಾವುದೇ ಕಾನೂನು ತೊಡಕುಗಳಿಲ್ಲದೆ ನೇಮಕಾತಿ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಸರ್ಕಾರ ಈ ತೀರ್ಮಾನ ಕೈಗೊಂಡಿದೆ. ಒಟ್ಟು 56,432 ಹುದ್ದೆಗಳ ಪೈಕಿ, ಕಲ್ಯಾಣ ಕರ್ನಾಟಕ ಭಾಗದ 371 (ಜೆ) ಅಡಿ 32,132 ಹುದ್ದೆಗಳು ಹಾಗೂ ಉಳಿದ 24,300 ಹುದ್ದೆಗಳಿಗೆ ಪ್ರತ್ಯೇಕವಾಗಿ ಹಣಕಾಸು ಇಲಾಖೆ ಅನುಮೋದನೆ ನೀಡಿದ್ದು, ಶೀಘ್ರವೇ ಪ್ರಕ್ರಿಯೆ ಚಾಲನೆ ಪಡೆಯಲಿದೆ.
ರೋಹಿತ್ ವೇಮುಲಾ ಕಾಯ್ದೆಗೆ ಅನುಮೋದನೆ
ಇದೇ ವೇಳೆ ರಾಜ್ಯದ ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಜಾತಿ ಆಧಾರಿತ ತಾರತಮ್ಯ ಹಾಗೂ ದೌರ್ಜನ್ಯಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾಗಿರುವ 'ರೋಹಿತ್ ವೇಮುಲಾ ಕಾಯ್ದೆ' ಜಾರಿಗೂ ರಾಜ್ಯ ಸಚಿವ ಸಂಪುಟ ಅಸ್ತು ಎಂದಿದೆ. ಈ ಹಿಂದೆ, ರಾಜ್ಯದಲ್ಲಿ ಈ ಮಹತ್ವದ ಕಾಯ್ದೆಯನ್ನು ಜಾರಿಗೊಳಿಸುವಂತೆ ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರದ ಮುಖಾಂತರ ಒತ್ತಾಯಿಸಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿಗಳು, ಮುಂಬರುವ ಅಧಿವೇಶನದಲ್ಲಿ ಕಾಯ್ದೆ ಮಂಡಿಸುವ ಭರವಸೆ ನೀಡಿದ್ದರು. ಅದರಂತೆ ತಜ್ಞರ ಸಮಿತಿಯಿಂದ ಕರಡು ಸಿದ್ಧಪಡಿಸಿ, ಗುರುವಾರದ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಒಪ್ಪಿಗೆ ಪಡೆಯಲಾಗಿದೆ. ಮುಂದಿನ ಬಜೆಟ್ ಅಧಿವೇಶನದಲ್ಲಿಯೇ ಈ ವಿಧೇಯಕವನ್ನು ಮಂಡಿಸಿ, ಅಧಿಕೃತ ಕಾನೂನಾಗಿ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.
ಕಾವೇರಿ 6ನೇ ಹಂತದ ಯೋಜನೆಗೂ ಅಸ್ತು
ಇದರ ಜೊತೆಗೆ, ಬೆಂಗಳೂರಿನ ಹೊರವಲಯ ಹಾಗೂ ಉಪನಗರಗಳಿಗೆ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷಿ 6,939 ಕೋಟಿ ರೂ. ವೆಚ್ಚದ 'ಕಾವೇರಿ 6ನೇ ಹಂತದ ಯೋಜನೆ'ಗೂ ಕ್ಯಾಬಿನೆಟ್ ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಿಂದ ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ಚಿಕ್ಕಬಾಣಾವರ, ಮಾದನಾಯಕನಹಳ್ಳಿ ಸೇರಿ ಹಲವು ಪ್ರದೇಶಗಳ ನೀರಿನ ಬವಣೆ ನೀಗಲಿದೆ. ಒಟ್ಟಿನಲ್ಲಿ ಉದ್ಯೋಗ, ಶಿಕ್ಷಣ ಹಾಗೂ ಮೂಲಸೌಕರ್ಯ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಬಾರಿಯ ಸಚಿವ ಸಂಪುಟ ಸಭೆ ಹಲವು ಕ್ರಾಂತಿಕಾರಿ ಹಾಗೂ ಜನಪರ ನಿರ್ಧಾರಗಳಿಗೆ ಸಾಕ್ಷಿಯಾಗಿದೆ.












Click it and Unblock the Notifications