Teacher Recruitment: ವಸತಿ ಶಾಲೆಗಳ ವಿವಿಧ ಹುದ್ದೆಗಳ ಭರ್ತಿ, ವಿವರ
ಬೆಂಗಳೂರು, ಸೆಪ್ಟೆಂಬರ್ 30: ಕರ್ನಾಟಕದ ಆರ್ಥಿಕ ಇಲಾಖೆ ಷರತ್ತುಗಳ ಅನ್ವಯ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಒಪ್ಪಿಗೆ ನೀಡಿದೆ. ಒಟ್ಟು 875 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಕೊಡಲಾಗಿದ್ದು, ಇವುಗಳಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿವೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಸುಮಿತ್ರ ಆದೇಶವನ್ನು ಹೊರಡಿಸಿದ್ದಾರೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಕ್ಕೆ ಮಂಜೂರಾದ ಬೋಧಕ ಹುದ್ದೆಗಳ ಕನಿಷ್ಠ ಶೇ.20 ರಷ್ಟು ಹುದ್ದೆಗಳನ್ನು ಶಿಕ್ಷಣ ಇಲಾಖೆಯಿಂದ ನಿಯೋಜನೆ ಮೂಲಕ ಭರ್ತಿ ಮಾಡಲು ಅನುಕೂಲವಾಗುವಂತೆ ಸಂಸ್ಥೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಮಾರ್ಪಡಿಸಿಕೊಳ್ಳತಕ್ಕದ್ದು ಎಂದು ಷರತ್ತು ವಿಧಿಸಲಾಗಿದೆ.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2011ರಲ್ಲಿ ರಚಿಸಲಾಗಿರುತ್ತದೆ. 2011ರ ನಂತರ ಸರ್ಕಾರದ ಆದೇಶಗಳಲ್ಲಿ ಕಾಲಕಾಲಕ್ಕೆ ಸಂಘದ ವಸತಿ ಶಾಲೆ/ ಕಾಲೇಜುಗಳ ಬೋಧಕ/ ಬೋಧಕೇತರ ನೇಮಕಾತಿ, ವಿದ್ಯಾರ್ಹತೆ, ಮುಂಬಡ್ತಿ ಹೀಗೆ ಹಲವಾರು ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರದ ಆದೇಶಗಳನ್ನು ಹೊರಡಿಸಲಾಗಿರುವ ಬಗ್ಗೆ ಹಾಗೂ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2011ರ ನಿಯಮಗಳು ರಚನೆಯಾದ ನಂತರ ಸರ್ಕಾರದ ಆದೇಶಗಳಲ್ಲಿ ಮಾಡಿರುವ ನೇಮಕಾತಿ ನಿಯಮಗಳ ತಿದ್ದುಪಡಿಗಳು ಹಾಗೂ ಸರ್ಕಾರದ ಆದೇಶಗಳಲ್ಲಿ ಸಂಘದ ಕೇಂದ್ರ ಕಛೇರಿಗೆ ಹಾಗೂ ವಸತಿ ಶಾಲೆಗಳಿಗೆ ಹಲವು ಹುದ್ದೆಗಳು ಮಂಜೂರಾಗಿರುವ ಹುದ್ದೆಗಳನ್ನು ಸರ್ಕಾರದ ಅಧಿಸೂಚನೆ ದಿನಾಂಕ 14.10.2022ರಲ್ಲಿ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಳು 2021ರಲ್ಲಿ ಸೇರ್ಪಡೆ ಮಾಡಿ ಪರಿಷ್ಕರಿಸಿ ಆದೇಶಿಸಲಾಗಿರುತ್ತದೆ ಎಂದು ಪ್ರಸ್ತಾವನೆ ಹೇಳಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗಳು 2021ರನ್ವಯ ಸರ್ಕಾರದ ಆದೇಶ ದಿನಾಂಕ 08.02.2019ರಲ್ಲಿ ಭಾರತ ಸಂವಿಧಾನ ಅನುಚ್ಛೇಧ 371(ಜೆ)ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೊರಡಿಸಿರುವ ಕರ್ನಾಟಕ ಸಾರ್ವಜನಿಕ ಉದ್ಯೋಗ (ಹೈದ್ರಾಬಾದ್- ಕರ್ನಾಟಕ ಪ್ರದೇಶಕ್ಕೆ ನೇಮಕಾತಿಯಲ್ಲಿ ಮೀಸಲಾತಿ) ಆದೇಶ 2013 ರನ್ವಯ ಕರ್ನಾಟಕ ವಸತಿ ಶಿಕ್ಷಣ ಕಛೇರಿ ಹೈದ್ರಾಬಾದ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚೆನ್ನಮ್ಮ/ ಏಕಲವ್ಯ/ ಶ್ರೀಮತಿ ಇಂದಿರಾಗಾಂದಿ/ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಹಾಗೂ ಅಟಲ್ ಬಿಹಾರಿ ವಾಜಪೇಯಿ ವಸತಿ ಮಂಜೂರಾಗಿರುವ ಶಾಲೆ/ ಕಾಲೇಜುಗಳಿಗೆ ಮಂಜೂರಾಗಿರುವ ಹುದ್ದೆಗಳಲ್ಲಿ ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಸ್ಥಳೀಯ ವ್ಯಕ್ತಿಗಳಿಗೆ ರಾಜ್ಯ ಮಟ್ಟದ ಸ್ಥಳೀಯ ಮತ್ತು ವೃಂದ ಸ್ಥಳೀಯ ವೃಂದಗಳನ್ನು ರಚಿಸಿ ಶೇಕಡಾವಾರು ಹುದ್ದೆಗಳನ್ನು ಮೀಸಲಿರಿಸಿ ಅಧಿಸೂಚಿಸಲಾಗಿರುತ್ತದೆ.
ದಿನಾಂಕ 22.03.2022 ಪತ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ದಿನಾಂಕ 07.09.2022ರ ಪತ್ರದಲ್ಲಿ ಕಲ್ಯಾಣ ಕರ್ನಾಟಕ ವೃಂದದ ನೇಮಕಾತಿಗೆ ಕ್ರಮ ಕೈಗೊಂಡು, ಉಳಿಕೆ ಮೂಲ ವೃಂದದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಮೋದನೆಗಾಗಿ ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ. ಅದರಂತೆ ಮೀಸಲಾತಿವಾರು ಹುದ್ದೆಗಳನ್ನು ನಿಗದಿಪಡಿಸಿ ಮೀಸಲಾತಿಗೆ ಸಂಬಂಧಿಸಿದಂತೆ ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ ಇವರಿಂದ ಧೃಡೀಕರಣ ಪಡೆಯಲು ಕ್ರಮವಹಿಸಿದೆ. ಅಧಿಸೂಚನೆಯಂತೆ ಸಂಘದ ಅಧೀನದ ವಸತಿ ಶಾಲೆಗಳಲ್ಲಿ ಈಗಾಗಲೇ ಮಂಜೂರಾಗಿ ಖಾಲಿ ಇರುವ ಹಾಗೂ ಕರ್ನಾಟಕ ಲೋಕಾಸೇವಾ ಆಯೋಗದಿಂದ ಹೆಚ್ಚುವರಿ ಆಯ್ಕೆ ಪಟ್ಟಿಗೆ ಸಲ್ಲಿಸಿರುವ ಪಮಾಣವನ್ನು ಹೊರತುಪಡಿಸಿ, ಉಳಿದ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಿದೆ ಎಂದು ಪ್ರಸ್ತಾವನೆ ಹೇಳಿತ್ತು.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸಮಾಜ ಕಲ್ಯಾಣ ಇಲಾಖೆ/ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ಮೊರಾರ್ಜಿ ದೇಸಾಯಿ/ ಕಿತ್ತೂರು ರಾಣಿ ಚನ್ನಮ್ಮ/ ಅಟಲ್ ಬಿಹಾರಿ ವಾಜಪೇಯಿ/ ಏಕಲವ್ಯ ಮಾದರಿ/ ಶ್ರೀಮತಿ ಇಂದಿರಾಗಾಂಧಿ/ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದದ ಈ ಕೆಳಕಂಡ 875 ಹುದ್ದೆಗಳನ್ನು ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಲಾಗಿದೆ.
ಹುದ್ದೆಗಳ ವಿವರ: ಕನ್ನಡ ಶಿಕ್ಷಕ 100, ಇಂಗ್ಲಿಶ್ ಶಿಕ್ಷಕ 100, ಹಿಂದಿ ಶಿಕ್ಷಕ 50, ಗಣಿತ ಶಿಕ್ಷಕ 100, ವಿಜ್ಞಾನ ಶಿಕ್ಷಕ 100, ಸಮಾಜ ಶಿಕ್ಷಕ 150, ಕಂಪ್ಯೂಟರ್ ಸೈನ್ಸ್ ಶಿಕ್ಷಕ 50, ದೈಹಿಕ ಶಿಕ್ಷಕ 75, ಎಫ್‌ಡಿಎ ಕಂ ಕಂಪ್ಯೂಟರ್ ಆಪರೇಟರ್ 75, ವಾರ್ಡನ್ 75 ಸೇರಿ ಒಟ್ಟು 875 ಹುದ್ದೆಗಳನ್ನು ಭರ್ತಿ ಮಾಡಲು ಒಪ್ಪಿಗೆ ಕೊಡಲಾಗಿದೆ.












Click it and Unblock the Notifications