ಕಲಬುರಗಿ: ಬೃಹತ್ ಉದ್ಯೋಗ ಮೇಳ, ಹೆಸರು ನೋಂದಾಯಿಸಿ
ಕಲಬುರಗಿ, ಮಾರ್ಚ್ 18: ಕಲಬುರಗಿ ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಪ್ರಮುಖವಾದ ಮಾಹಿತಿಯೊಂದಿದೆ. ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳವನ್ನು ಏಪ್ರಿಲ್ ಮೊದಲ ವಾರದಲ್ಲಿ ಜಿಲ್ಲೆಯಲ್ಲಿ ಆಯೋಜನೆ ಮಾಡಲಾಗುತ್ತಿದೆ. ಈ ಉದ್ಯೋಗ ಮೇಳದಲ್ಲಿ 250ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳುತ್ತಿವೆ. ಉದ್ಯೋ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಜಂಟಿಯಾಗಿ ಕಲಬುರಗಿಯಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ.

ಏಪ್ರಿಲ್ ಮೊದಲನೇ ವಾರ ಈ ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ದಿನಾಂಕ ಮತ್ತು ಸ್ಥಳವನ್ನು ಇನ್ನೂ ಸಹ ಜಿಲ್ಲಾಡಳಿತ ಘೋಷಣೆ ಮಾಡಿಲ್ಲ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಆಸಕ್ತ ಹೊಂದಿರುವ ನಿರುದ್ಯೋಗಿ ಯುವಕ ಮತ್ತು ಯುವತಿಯರು ಹೆಸರು ನೋಂದಾಯಿಸಿಕೊಳ್ಳಿ ಎಂದು ಕರೆ ನೀಡಲಾಗಿದೆ.
ಈ ಉದ್ಯೋಗ ಮೇಳದಲ್ಲಿ 250ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು ಪಾಲ್ಗೊಳ್ಳಲಿದ್ದು, ಯಾವುದೇ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಉದ್ಯೋಕಾಂಕ್ಷಿಗಳು ಹೆಸರು ನೋಂದಣಿಗಾಗಿ ಲಿಂಕ್ ಅನ್ನು ಸಹ ಬಿಡುಗಡೆ ಮಾಡಲಾಗಿದೆ.
ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಆಸಕ್ತ ಹೊಂದಿರುವ ಅಭ್ಯರ್ಥಿಗಳು https://udyogamela.skillconnect.kaushalkar.com/ ಲಿಂಕ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು. ಆನ್‌ಲೈನ್ ಮೂಲಕ ಮಾತ್ರ ಹೆಸರು ನೋಂದಣಿ ಮಾಡಬೇಕೆ?, ಉದ್ಯೋಗ ಮೇಳ ನಡೆಯುವ ದಿನ ಅಭ್ಯರ್ಥಿಗಳು ಸ್ಥಳದಲ್ಲಿ ನೋಂದಣಿ ಮಾಡಿಸಲು ಸಾಧ್ಯವಿಲ್ಲವೇ? ಎಂಬ ಕುರಿತು ಇನ್ನೂ ಸಹ ಮಾಹಿತಿ ಸಿಕ್ಕಿಲ್ಲ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಕಛೇರಿ ಅಥವಾ ಸಹಾಯವಾಣಿ ಸಂಖ್ಯೆ 08022075030ಗೆ ಸಂಪರ್ಕಿಸಬಹುದು.
ಕರ್ನಾಟಕ ಸರ್ಕಾರ ಗ್ಯಾರಂಟಿ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಟಾನ ಸಮಿತಿಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದಲ್ಲಿ ಉದ್ಯೋಗ ಮೇಳಗಳನ್ನು ಪ್ರತಿ ಜಿಲ್ಲೆಯಲ್ಲಿ ಆಯೋಜನೆ ಮಾಡುತ್ತಿದೆ. ಸರ್ಕಾರದ ಗ್ಯಾರಂಟಿ ಯೋಜನೆಯಾದ ಯುವನಿಧಿ ಅಡಿ ನೋಂದಣಿಯಾಗಿರುವ ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವುದು ಮೇಳದ ಪ್ರಮುಖ ಉದ್ದೇಶವಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಏಪ್ರಿಲ್ ಮೊದಲ ವಾರದಲ್ಲಿ ಈ ಮಾದರಿಯ ಉದ್ಯೋಗ ಮೇಳ ನಡೆಯಲಿದೆ. ಉದ್ಯೋಗ ಮೇಳ ನಡೆಸುವ ದಿನಾಂಕ, ಸ್ಥಳವನ್ನು ಇನ್ನೂ ಸಹ ಕಲಬುರಗಿ ಜಿಲ್ಲಾಡಳಿತ ಅಂತಿಮಗೊಳಿಸಿಲ್ಲ. ಈ ಕುರಿತು ಶೀಘ್ರವೇ ಜಿಲ್ಲಾಡಳಿತ ಅಂತಿಮ ತೀರ್ಮಾನವನ್ನು ಕೈಗೊಳ್ಳಲಿದೆ.
ಮಿನಿ ಉದ್ಯೋಗ ಮೇಳ: ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜು ಹಿಂಭಾಗ ಇರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾರ್ಚ್ 21ರಂದು ಮಿನಿ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿದೆ.
ಈ ಉದ್ಯೋಗ ಮೇಳ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ತನಕ ನಡೆಯಲಿದೆ. ಮಹಿಂದ್ರಾ ಶಹಾ ಮೋಟಾರ್ಸ್, ಟೆಕ್ ಮಹಿಂದ್ರಾ, ಎಚ್‌ಸಿಜಿ ಕ್ಯಾನ್ಸರ್ ಸೆಂಟರ್, ಸ್ವತಂತ್ರ ಮೈಕ್ರೋ ಫೈನಾನ್ಸ್, ಮೆಡ್ ಪ್ಲಸ್ ಸಂಸ್ಥೆಗಳು ಪಾಲ್ಗೊಳ್ಳಲಿವೆ.
ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಿವೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳ ಜೊತೆ ಮಿನಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು.












Click it and Unblock the Notifications