ಹಾಸನದಲ್ಲಿ ಮಾರ್ಚ್ 7ರಂದು ಉದ್ಯೋಗ ಮೇಳ: ಉದ್ಯೋಗಾಂಕ್ಷಿಗಳಿಗೆ ಇದೊಂದು ಉತ್ತಮ ಅವಕಾಶ
Job Fair in Hassan: ಹಾಸನದಲ್ಲಿ ಇದೇ ಮಾರ್ಚ್ 7ರಂದು ಉದ್ಯೋಗ ಮೇಳ ಇಟ್ಟುಕೊಳ್ಳಲಾಗಿದೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಲಾಗಿದೆ. ಹಾಗಾದ್ರೆ, ಯಾರೆಲ್ಲಾ ಭಾಗವಹಿಸಬಹುದು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮಾರ್ಚ್ 7ರಂದು ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದ್ದು, ನಿರುದ್ಯೋಗ ಯುವಕ-ಯುವತಿಯರು ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕೆಎಸ್ ಲತಾ ಕುಮಾರಿ ಅವರು ಮನವಿ ಮಾಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಉದ್ಯೋಗ ಮೇಳದ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಯೋಗದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಆವರಣದಲ್ಲಿ ಯುವ ಉದ್ಯೋಗ ಮೇಳ ಏರ್ಪಡಿಸಲಾಗಿದೆ. 100 ಕಂಪನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

ಸ್ಥಳದಲ್ಲೇ ನೇಮಕಾತಿ ಪತ್ರ ವಿತರಣೆ
ಯುವಕ-ಯುವತಿಯರಿಗೆ ನೇರ ಸಂದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ವಿದ್ಯಾಭ್ಯಾಸ ಮಾಡಿರುವ ಅಂಕಪಟ್ಟಿಗಳು ಹಾಗೂ ಸ್ವ ವಿವರದೊಂದಿಗೆ ಆಗಮಿಸಿ ಅಥವಾ ಆನ್‌ಲೈನ್ ಮೂಲಕ ಮುಂಚಿತವಾಗಿ ನೋಂದಣಿ ವ್ಯವಸ್ಥೆಯನ್ನು ಮಾಡಲಾಗಿದೆ. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉದ್ಯೋಗ ಮೇಳದ ಪೋಸ್ಟರ್ ಬಿಡುಗಡೆಯನ್ನು ಮಾಡಲಾಗಿದೆ. ಎಸ್‌ಎಸ್‌ಎಸ್‌ಸಿ, ಪಿ.ಯು.ಸಿ ಅಥವಾ ಯಾವುದೇ ಪದವಿ ಐಟಿಐ ಡಿಪ್ಲೋಮಾ ಅಭ್ಯರ್ಥಿಗಳು ಪಾಲ್ಗೊಳ್ಳಬಹುದು. ಅರ್ಹ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರವನ್ನು ಸ್ಥಳದಲ್ಲಿಯೇ ವಿತರಣೆ ಮಾಡುವಂತೆ ಕ್ರಮವಹಿಸಲಾಗುವುದು ಎಂದರು.
ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ತರಬೇತಿ
ಪಕ್ಕದ ಜಿಲ್ಲೆಯ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು, ಕೌಂಟರ್‌ಗಳನ್ನು ತೆರೆಯಲಾಗುವುದು. ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೂ ನೋಂದಣಿ ನಡೆಯಲಿದೆ. ನೇಮಕ ಮಾಡಿಕೊಳ್ಳುವ ವೇಳೆಯಲ್ಲಿ ಅಭ್ಯರ್ಥಿಯ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ತರಬೇತಿಯನ್ನು ನೀಡುತ್ತೇವೆ ಎಂದು ಕಂಪನಿಯವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
100 ಕಂಪನಿಗಳಲ್ಲಿ 10,000 ಉದ್ಯೋಗಾವಕಾಶ ಇದ್ದು, ಜಿಲ್ಲೆಯ ನಿರುದ್ಯೋಗಿ ಯುವಕ-ಯುವತಿಯರು ಇದೊಂದು ಸುವರ್ಣ ಅವಕಾಶ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಸಂದರ್ಶನಕ್ಕೆ ಆಗಮಿಸುವ ಅಭ್ಯರ್ಥಿಗಳಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.
ಉದ್ಯೋಗ ಮೇಳದ ಬಗ್ಗೆ ಮಾಹಿತಿ
ಉದ್ಯೋಗ ಮೇಳವು ಕೇವಲ ಕೆಲಸ ನೀಡುವ ವೇದಿಕೆಯಷ್ಟೇ ಅಲ್ಲ, ಉದ್ಯಮಗಳೊಂದಿಗೆ ನೇರ ಸಂಪರ್ಕ ಸಾಧಿಸುವ ಉತ್ತಮ ಅವಕಾಶವೂ ಆಗಿದೆ. ವಿವಿಧ ಕ್ಷೇತ್ರಗಳ ಕಂಪನಿಗಳು ಭಾಗವಹಿಸುವುದರಿಂದ ಉತ್ಪಾದನಾ, ಸೇವಾ, ತಾಂತ್ರಿಕ ಮತ್ತು ಆಡಳಿತ ವಿಭಾಗಗಳಲ್ಲಿ ಅವಕಾಶಗಳು ಲಭ್ಯವಿರುತ್ತವೆ. ಅಭ್ಯರ್ಥಿಗಳಿಗೆ ಅವರ ವಿದ್ಯಾಭ್ಯಾಸ ಮತ್ತು ಕೌಶಲ್ಯಕ್ಕೆ ಅನುಗುಣವಾಗಿ ತರಬೇತಿ ನೀಡುವ ವ್ಯವಸ್ಥೆಯೂ ಇರಬಹುದು. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಇಂತಹ ಮೇಳಗಳು ಸಹಕಾರಿಯಾಗುತ್ತವೆ. ಆಸಕ್ತರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಜೀವನದ ಮೊದಲ ಹೆಜ್ಜೆ ಇಡಬಹುದಾಗಿದೆ.












Click it and Unblock the Notifications