Government Jobs Exam: ನೆಲದ ಮೇಲೆ ಕುಳಿತು ಸರ್ಕಾರಿ ಹುದ್ದೆ ನೇಮಕಾತಿ ಪರೀಕ್ಷೆ ಬರೆದ ಸಾವಿರಾರು ಅಭ್ಯರ್ಥಿಗಳು: ವಿಡಿಯೋ ವೈರಲ್
Government Jobs Exam Video Viral: ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ಸರ್ಕಾರಿ ನೇಮಕಾತಿ ಪರೀಕ್ಷೆಯೊಂದನ್ನು ನಡೆಸಲಾಗಿದೆ. ಈ ವೇಳೆ ಸಾವಿರಾರು ಅಭ್ಯರ್ಥಿಗಳು ಜಮದರ್ಪಾಳಿ ಏರ್‌ಸ್ಟ್ರಿಪ್‌ನಲ್ಲಿ ಯಾವುದೇ ಮೇಜಿಲ್ಲದೆ ಕುಳಿತುಕೊಂಡು ಪರೀಕ್ಷೆ ಬರೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಇಡೀ ದೇಶದ ಗಮನ ಸೆಳೆದಿದೆ.
ಏರ್‌ಸ್ಟ್ರಿಪ್‌ನಲ್ಲೇ ಪರೀಕ್ಷೆ: ಒಡಿಶಾ ರಾಜ್ಯದ ಸಂಬಲ್‌ಪುರ ಜಿಲ್ಲೆಯ ಜಮದರ್ಪಾಳಿ ಏರ್‌ಸ್ಟ್ರಿಪ್‌ನಲ್ಲಿ ಹೋಮ್‌ಗಾರ್ಡ್ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಪರೀಕ್ಷೆಗೆ ಸಾವಿರಾರು ಅಭ್ಯರ್ಥಿಗಳು ಹಾಜಾರಾಗಿದ್ದು, ಅವರನ್ನು ಏರ್‌ಸ್ಟ್ರಿಪ್‌ನಲ್ಲೇ ಸಾಲು ಸಾಲಾಗಿ ಕೆಳಗೆ ಕೂರಿಸಿ ಪರೀಕ್ಷೆ ನಡೆಸಲಾಯಿತು.

ಮೇಜು ಅಥವಾ ಮ್ಯಾಟ್ ವ್ಯವಸ್ಥೆ ಇರದ ಕಾರಣ, ಅಭ್ಯರ್ಥಿಗಳು ಏರ್‌ಸ್ಟ್ರಿಪ್‌ನ ನೆಲದ ಮೇಲೆಯೇ ಕುಳಿತು ಪರೀಕ್ಷೆ ಬರೆದರು. ಈ ದೃಶ್ಯವನ್ನು ಡ್ರೋನ್ ಮೂಲಕ ಸೆರೆಹಿಡಿಯಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ದೊಡ್ಡ ಮಟ್ಟದ ಚರ್ಚೆಗೆ ಕಾರಭವಾಗಿದೆ.
ಗಮನ ಸೆಳೆದ ಅಭ್ಯರ್ಥಿಗಳ ವಿದ್ಯಾಭ್ಯಾಸ: ಹೋಮ್‌ಗಾರ್ಡ್ ಹುದ್ದೆಗೆ ಕನಿಷ್ಠ ಅರ್ಹತೆ ಐದನೇ ತರಗತಿ ಉತ್ತೀರ್ಣ ಆಗಿದ್ದರೂ, ಅನೇಕ ಅಭ್ಯರ್ಥಿಗಳ ವಿದ್ಯಾರ್ಹತೆಗಳು ವಿಶೇಷವಾಗಿ ಗಮನಸೆಳೆದವು. ಸುಮಾರು 187 ಹುದ್ದೆಗಳಿಗೆ 8,000ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪರೀಕ್ಷೆಗೆ ಹಾಜರಾದವರಲ್ಲಿ ಪದವೀಧರರು, ಎಂಜಿನಿಯರ್‌ಗಳು, ಎಂ.ಬಿ.ಎ, ಎಂ.ಸಿ.ಎ ಪದವಿದಾರರು, ಡಿಪ್ಲೊಮಾ, ಐಟಿಐ ತರಬೇತಿ ಪಡೆದವರು ಹಾಗೂ ಕಂಪ್ಯೂಟರ್ ಸೈನ್ಸ್ ಪದವೀಧರರೂ ಇದ್ದರು. ಇದು ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ ಎಷ್ಟಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ.
ಪರೀಕ್ಷೆಯ ವೇಳಾಪಟ್ಟಿ: ಅಭ್ಯರ್ಥಿಗಳಿಗೆ ಬೆಳಗ್ಗೆ 6 ಗಂಟೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶವನ್ನು ಬೆಳಗ್ಗೆ 9 ಗಂಟೆಯಿಂದ ಮಾತ್ರ ಅನುಮತಿಸಲಾಗಿತ್ತು. ಪ್ರಶ್ನೆ ಪತ್ರಿಕೆಗಳನ್ನು ಬೆಳಿಗ್ಗೆ 10:30ಕ್ಕೆ ವಿತರಿಸಲಾಯಿತು. ಪರೀಕ್ಷೆಯಲ್ಲಿ 30 ನಿಮಿಷಗಳ ಟಿಪ್ಪಣಿ ಬರವಣಿಗೆ ವಿಭಾಗಕ್ಕೆ 20 ಅಂಕಗಳು ಹಾಗೂ ನಂತರ ಒಂದು ಗಂಟೆಯ ಸಾಮಾನ್ಯ ಜ್ಞಾನ ಪರೀಕ್ಷೆಗೆ 30 ಅಂಕಗಳನ್ನು ನಿಗದಿಪಡಿಸಲಾಗಿತ್ತು.
ಭಾರೀ ಬಿಗಿ ಭದ್ರತೆ: ಪರೀಕ್ಷೆ ವೇಳೆ ಭಾರೀ ಜನಸಂದಣಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಆಡಳಿತವು ಕಠಿಣ ಭದ್ರತಾ ಕ್ರಮಗಳನ್ನು ಕೈಗೊಂಡಿತ್ತು. 3 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 24 ಇನ್‌ಸ್ಪೆಕ್ಟರ್‌ಗಳು, 86 ಸಬ್‌ಇನ್‌ಸ್ಪೆಕ್ಟರ್‌ಗಳು ಹಾಗೂ ಎಎಸ್‌ಐಗಳು, 100ಕ್ಕೂ ಹೆಚ್ಚು ಹೋಮ್‌ಗಾರ್ಡ್‌ಗಳು ಮತ್ತು ಟ್ರಾಫಿಕ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇನ್ನೂ ನೆಲದ ಮೇಲೆ ಕುಳಿತುಕೊಂಡು ಬರೆಯುತ್ತಿರುವ ಈ ದೃಶ್ಯಗಳು ಇದೀಗ ದೇಶಾದ್ಯಂತ ಭಾರೀ ಚರ್ಚೆಯನ್ನು ಹುಟ್ಟುಹಾಕಿವೆ. ಇದನ್ನು ಗಮನಿಸಿದರೆ, ಉದ್ಯೋಗ ಸಂಕಷ್ಟ ಮತ್ತು ಸರ್ಕಾರಿ ನೇಮಕಾತಿಗಳ ಮೇಲಿನ ಭಾರೀ ಸ್ಪರ್ಧೆ ಇರುವುದನ್ನು ಕಾಣಬಹುದು. ಇಲ್ಲಿ ಉದ್ಯೋಗಾವಕಾಶಗಳು ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಬಹುದು.












Click it and Unblock the Notifications