Google Layoffs 2026: ಗೂಗಲ್ ಕ್ಲೌಡ್‌ನಲ್ಲಿ ಮತ್ತೆ ಲೇಆಫ್ ಬಿಸಿ; ಎಐ ತಂತ್ರಜ್ಞಾನದತ್ತ ಮುಖಮಾಡಿದ ಟೆಕ್ ದೈತ್ಯ
ತಂತ್ರಜ್ಞಾನ ವಲಯವು ನಿರಂತರ ಬದಲಾವಣೆಯ ಬಯಸುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಜಾಗತಿಕ ಮಟ್ಟದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದೆ. ಅದೇ ರೀತಿ ಎಐ ಅಭಿವೃದ್ಧಿಯ ಓಟದಲ್ಲಿ ಸಾವಿರಾರು ಟೆಕ್ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳುತ್ತಿರುವ ಕಠಿಣ ವಾಸ್ತವವೂ ನಮ್ಮ ಮುಂದಿದೆ. ಇದೀಗ ಜಾಗತಿಕ ಟೆಕ್ ದೈತ್ಯ 'ಗೂಗಲ್' ಕೂಡ ತನ್ನ ಆದ್ಯತೆಗಳನ್ನು ಬದಲಾಯಿಸಿಕೊಂಡಿದ್ದು, ಎಐ ತಂತ್ರಜ್ಞಾನದತ್ತ ಹೆಚ್ಚಿನ ಸಂಪನ್ಮೂಲಗಳನ್ನು ವಿನಿಯೋಗಿಸುವ ನಿಟ್ಟಿನಲ್ಲಿ ತನ್ನ ಕ್ಲೌಡ್ ಹಾಗೂ ಭದ್ರತಾ ವಿಭಾಗಗಳಲ್ಲಿ ಅನಿರೀಕ್ಷಿತ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಇದು ಟೆಕ್ ಜಗತ್ತಿನಲ್ಲಿ ಎಐ ತರುತ್ತಿರುವ ಬದಲಾವಣೆಗಳ ಜೊತೆಗೆ ಹೊಸ ಆತಂಕವನ್ನೂ ಸೃಷ್ಟಿಸಿದೆ.
ಹೌದು, ಗೂಗಲ್ ತನ್ನ ಕ್ಲೌಡ್ ವಿಭಾಗ, ಮ್ಯಾಂಡಿಯಂಟ್ ಮತ್ತು ಥ್ರೆಟ್ ಇಂಟೆಲಿಜೆನ್ಸ್ ತಂಡಗಳಲ್ಲಿ ದಿಢೀರ್ ಉದ್ಯೋಗ ಕಡಿತ ಮಾಡಿದೆ. ಎಐ ತಂತ್ರಜ್ಞಾನದ ಮೇಲೆ ಹೆಚ್ಚಿನ ಹೂಡಿಕೆ ಮಾಡುವ ಉದ್ದೇಶದಿಂದ ಟೆಕ್ ದೈತ್ಯ ಕಂಪನಿಗಳು ತಮ್ಮ ಸಂಪನ್ಮೂಲಗಳನ್ನು ಬದಲಾಯಿಸುತ್ತಿದ್ದು, ಗೂಗಲ್ ಕೂಡ ಇದೇ ಹಾದಿ ಹಿಡಿದಿದೆ.

ಬ್ಯುಸಿನೆಸ್ ಇನ್ಸೈಡರ್ ಮತ್ತು ಇತರ ಆರ್ಥಿಕ ಮಾಧ್ಯಮಗಳ ವರದಿಯ ಪ್ರಕಾರ, ಕಳೆದ ಎರಡು ವಾರಗಳಿಂದ ಈ ಲೇಆಫ್ ಪ್ರಕ್ರಿಯೆ ನಡೆಯುತ್ತಿದೆ. 2022 ರಲ್ಲಿ ಗೂಗಲ್ ಖರೀದಿಸಿದ್ದ ಪ್ರಮುಖ ಸೈಬರ್ ಭದ್ರತಾ ಸಂಸ್ಥೆ 'ಮ್ಯಾಂಡಿಯಂಟ್' ಹಾಗೂ ಗೂಗಲ್‌ನ ಆಂತರಿಕ ಭದ್ರತಾ ತಂಡವಾದ 'ಥ್ರೆಟ್ ಇಂಟೆಲಿಜೆನ್ಸ್ ಗ್ರೂಪ್'ನ ಉದ್ಯೋಗಿಗಳು ಈ ಬಾರಿಯ ಲೇಆಫ್‌ಗೆ ಗುರಿಯಾಗಿದ್ದಾರೆ. ಜಾಗತಿಕ ಮಟ್ಟದ ಸೈಬರ್ ಬೆದರಿಕೆಗಳು, ಹ್ಯಾಕರ್‌ಗಳ ಚಟುವಟಿಕೆಗಳು ಮತ್ತು ಡಿಜಿಟಲ್ ಭದ್ರತೆಯ ಬಗ್ಗೆ ನಿರಂತರವಾಗಿ ವರದಿಗಳನ್ನು ಪ್ರಕಟಿಸುವಲ್ಲಿ ಥ್ರೆಟ್ ಇಂಟೆಲಿಜೆನ್ಸ್ ತಂಡವು ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಕೆಲಸ ಕಳೆದುಕೊಂಡಿರುವ ಹಲವು ಉದ್ಯೋಗಿಗಳು ತಮ್ಮ ಲಿಂಕ್ಡ್‌ಇನ್ ಖಾತೆಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಕೇವಲ ಗೂಗಲ್ ಮಾತ್ರವಲ್ಲದೆ, ಇತರ ಪ್ರಮುಖ ಟೆಕ್ ಕಂಪನಿಗಳು ಕೂಡ ಎಐ ತಂತ್ರಜ್ಞಾನಕ್ಕೆ ಹೆಚ್ಚಿನ ಹಣ ಮೀಸಲಿಡಲು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ. ಕಳೆದ ತಿಂಗಳಷ್ಟೇ ಮೆಟಾ ತನ್ನ ಶೇಕಡಾ 10 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. ಕಾಯಿನ್‌ಬೇಸ್ ಮತ್ತು ಬ್ಲಾಕ್ ಕಂಪನಿಗಳು ಕೂಡ ಕೃತಕ ಬುದ್ಧಿಮತ್ತೆಯ ಹೂಡಿಕೆಯನ್ನೇ ಮುಂದಿಟ್ಟುಕೊಂಡು ಉದ್ಯೋಗ ಕಡಿತ ಮಾಡಿವೆ. ಸೈಬರ್ ಭದ್ರತಾ ಸಂಸ್ಥೆಯಾದ ಕ್ಲೌಡ್‌ಫ್ಲೇರ್ "ಏಜೆಂಟಿಕ್ ಎಐ ಯುಗಕ್ಕೆ" ಸಿದ್ಧವಾಗುವ ನಿಟ್ಟಿನಲ್ಲಿ ಕಳೆದ ಮೇ ತಿಂಗಳಲ್ಲಿ 1,100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿತ್ತು.
ಗೂಗಲ್ ಹೇಳುವುದೇನು?
ಈ ಕುರಿತು ಪ್ರತಿಕ್ರಿಯಿಸಿರುವ ಗೂಗಲ್ ವಕ್ತಾರರು, "ಗ್ರಾಹಕರು ಮತ್ತು ಉದ್ಯಮದ ಬದಲಾಗುತ್ತಿರುವ ಬೇಡಿಕೆಗಳನ್ನು ಪೂರೈಸಲು ನಾವು ನಿಯಮಿತವಾಗಿ ನಮ್ಮ ಆಂತರಿಕ ರಚನೆಗಳನ್ನು ಮತ್ತು ತಂಡಗಳನ್ನು ಮೌಲ್ಯಮಾಪನ ಮಾಡುತ್ತೇವೆ," ಎಂದು ಸ್ಪಷ್ಟಪಡಿಸಿದ್ದಾರೆ. ಭವಿಷ್ಯದ ಬೆಳವಣಿಗೆಯ ದೃಷ್ಟಿಯಿಂದ ಎಐ ತಂತ್ರಜ್ಞಾನದ ಅಭಿವೃದ್ಧಿಯತ್ತ ಹೆಚ್ಚಿನ ಹೂಡಿಕೆ ಮಾಡುವುದು ಕಂಪನಿಗೆ ಅನಿವಾರ್ಯವಾಗಿದೆ ಎಂದು ಆಂತರಿಕ ಮೂಲಗಳು ತಿಳಿಸಿವೆ.
ಗೂಗಲ್ ಎಐ ಸಿಇಒ ಡೆಮಿಸ್ ಹಸ್ಸಾಬಿಸ್ ಪ್ರತಿಕ್ರಿಯೆ
ಹಲವು ಟೆಕ್ ಕಂಪನಿಗಳು ಎಐ ನೆಪದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿದ್ದರೆ, ಗೂಗಲ್ ಡೀಪ್‌ಮೈಂಡ್ ಸಿಇಒ ಡೆಮಿಸ್ ಹಸ್ಸಾಬಿಸ್ ಇದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಐ ಬಳಕೆಯಿಂದ ಉದ್ಯೋಗಿಗಳ ಉತ್ಪಾದಕತೆ ಹೆಚ್ಚಾದಾಗ, ಅವರನ್ನು ಕೆಲಸದಿಂದ ತೆಗೆಯುವ ಬದಲು ಹೊಸ ಯೋಜನೆಗಳಿಗೆ ಬಳಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಮೆಟಾ ಮತ್ತು ಅಮೆಜಾನ್‌ನಂತಹ ಕಂಪನಿಗಳಿಂದ ಕೆಲಸ ಕಳೆದುಕೊಂಡಿರುವ ಪ್ರತಿಭಾವಂತ ಎಂಜಿನಿಯರ್‌ಗಳನ್ನು ತಮ್ಮ ಕಂಪನಿಯ ಹೊಸ ಪ್ರಾಜೆಕ್ಟ್‌ಗಳಿಗೆ ಸ್ವಾಗತಿಸಲು ತಾವು ಸಿದ್ಧ ಎಂದು ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಗೂಗಲ್‌ನ ಅತಿದೊಡ್ಡ ಲೇಆಫ್ ನಡೆದದ್ದು ಜನವರಿ 2023 ರಲ್ಲಿ; ಆ ಸಮಯದಲ್ಲಿ ಕಂಪನಿಯು ಒಂದೇ ಬಾರಿಗೆ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು. 2026 ರ ಆರಂಭದಿಂದಲೂ ವಿವಿಧ ವಿಭಾಗಗಳಲ್ಲಿ ಸಾವಿರಾರು ಉದ್ಯೋಗಿಗಳನ್ನು ಹಂತ ಹಂತವಾಗಿ ವಜಾಗೊಳಿಸಲಾಗಿದೆ.
ಒಟ್ಟಾರೆಯಾಗಿ, 2026 ರ ಆರಂಭದಿಂದ ಇಲ್ಲಿಯವರೆಗೆ ಜಾಗತಿಕವಾಗಿ ಟೆಕ್ ವಲಯದಲ್ಲಿ ಬರೋಬ್ಬರಿ 1,42,000 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದು, ಟೆಕ್ ಉದ್ಯೋಗಿಗಳಲ್ಲಿ ಲೇಆಫ್ ಆತಂಕ ಮುಂದುವರೆದಿದೆ.












Click it and Unblock the Notifications