ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ; ವಯೋಮಿತಿ ಸಡಿಲಿಕೆ, ವಿವರ
ಬೆಂಗಳೂರು, ಜನವರಿ 08: ಕರ್ನಾಟಕ ಸರ್ಕಾರ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ ನೀಡಿದೆ. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡುವ ಕುರಿತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಕೆಪಿಎಸ್‌ಸಿ ಈ ಹುದ್ದೆಗಳಿಗೆ ನೇಮಕಾತಿ ಮಾಡಲಿದೆ.
ಕಳೆದ ವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಲಿದೆ.

ಎಲ್ಲ ಅಭ್ಯರ್ಥಿಗಳಿಗೆ ಒಂದು ಬಾರಿ ಗರಿಷ್ಠ ವಯೋಮಿತಿ ಸಡಿಲಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಕೋವಿಡ್ ಮತ್ತು ನೇಮಕಾತಿ ವಿಳಂಬ ಆದ ಕಾರಣ ಈ ಸಡಿಲಿಕೆ ಮಾಡಲಾಗುತ್ತಿದೆ. ಒಂದು ಬಾರಿಗೆ ಮಾತ್ರ ಇದು ಅನ್ವಯವಾಗಲಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್. ಕೆ. ಪಾಟೀಲ ತಿಳಿಸಿದ್ದಾರೆ.
ಎಲ್ಲಾ ಅಭ್ಯರ್ಥಿಗಳಿಗೆ 1 ಬಾರಿಗೆ ಗರಿಷ್ಠ ವಯೋಮಿತಿ ಸಡಿಲಿಕೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ವಯೋಮಿತಿ ಸಾಮಾನ್ಯ ವರ್ಗಕ್ಕೆ 35 ರಿಂದ 38, ಪ್ರವರ್ಗ 2ಎ/ 2ಬಿ/ 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 38 ರಿಂದ 41 ಮತ್ತು ಪರಿಶಿಷ್ಟ ಪಂಗಡ ಪ್ರವರ್ಗ-1ಕ್ಕೆ 40 ರಿಂದ 43ಕ್ಕೆ ಸಡಿಲಿಕೆ ಮಾಡಲಾಗಿದೆ.
ಕೋವಿಡ್ ಮತ್ತು ಇತರ ಕಾರಣಗಳಿಂದಾಗಿ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಅಭ್ಯರ್ಥಿಗಳು ಬೇಡಿಕೆ ಇಟ್ಟಿದ್ದರು. ಆದ್ದರಿಂದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ ವಯೋಮಿತಿ ಸಡಿಲಿಕೆ ಮಾಡಲಾಗಿದೆ.
276 ಹುದ್ದೆಗಳ ಭರ್ತಿ; ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ನಡೆಯಲಿದೆ. ಒಟ್ಟು 276 ಹುದ್ದೆಗಳನ್ನು ಭರ್ತಿ ಮಾಡಲು ಸಿದ್ಧತೆಗಳು ನಡೆಯುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗ ಈ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಕೆಎಎಸ್ ಗ್ರೂಪ್ 'ಎ', ಗ್ರೂಪ್ 'ಬಿ' ವೃಂದದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಶೀಘ್ರವೇ ನಡೆಯಲಿದೆ. ಈ ಪೈಕಿ ಗ್ರೂಪ್ 'ಎ'ನಲ್ಲಿ ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ), ಸಹಾಯಕ ಆಯುಕ್ತರು, ಸಹಾಯಕ ನಿರ್ದೇಶಕರು, ಕಾರ್ಯನಿರ್ವಾಹಕ ಅಧಿಕಾರಿ, ಡಿವೈಎಸ್‌ಪಿ, ಸಹಾಯಕ ನಿರ್ದೇಶಕರು, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಗ್ರೂಪ್ 'ಬಿ' ವಿಭಾಗದಲ್ಲಿ ತಹಶೀಲ್ದಾರ್-ಗ್ರೇಡ್ 2, ವಾಣಿಜ್ಯ ತೆರಿಗೆ ಅಧಿಕಾರಿ, ಕಾರ್ಮಿಕ ಅಧಿಕಾರಿ, ಸಹಾಯಕ ಅಧೀಕ್ಷಕರು, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಲೆಕ್ಕಪರಿಶೋಧನೆ ಸಹಾಯಕ ನಿರ್ದೇಶಕರು ಅಬಕಾರಿ ಉಪ ಅಧೀಕ್ಷಕರು ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
2017ರ ಬಳಿಕ ರಾಜ್ಯದಲ್ಲಿ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ನಡೆದಿಲ್ಲ. ಆ ಅವಧಿಯಲ್ಲಿ 106 ಹುದ್ದೆಗಳ ನೇಮಕಾತಿ ನಡೆದಿತ್ತು. ಆಗ ಸಹಾಯಕ ಆಯುಕ್ತ ಮತ್ತು ಡಿವೈಎಸ್‌ಪಿ ಹುದ್ದೆಗಳನ್ನು ಭರ್ತಿ ಮಾಡಿರಲಿಲ್ಲ. ಸುಮಾರು 4 ವರ್ಷಗಳಿಂದ ಯಾವುದೇ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ನಡೆಯದಿರುವುದರಿಂದ ಅಭ್ಯರ್ಥಿಗಳು ನಿರಾಸೆಗೊಂಡಿದ್ದರು.
ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯಿತು. ಆಗ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಎಚ್. ಪಿ. ಗೋಪಿನಾಥ್ ಈ ಕುರಿತು ಪ್ರಶ್ನಿಸಿದ್ದರು. ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸುವಾಗ ಒಂದು ಬಾರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಡಿಪಿಆರ್ (ಸೇವೆಗಳು-2) 20, ವಾಣಿಜ್ಯ ತೆರಿಗೆ ಇಲಾಖೆ 41, ಖಜಾನೆ ಇಲಾಖೆ 2, ಆರ್‌ಡಿಪಿಆರ್ 20, ಒಳಾಡಳಿತ 5, ಸಮಾಜ ಕಲ್ಯಾಣ 10 ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ 7 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಗ್ರೂಪ್ 'ಬಿ'ನಲ್ಲಿ ವಾಣಿಜ್ಯ ತೆರಿಗೆ 59, ಕಾರ್ಮಿಕ 4, ಒಳಾಡಳಿತ (ಕಾರಾಗೃಹ) 3, ಸಹಾಕಾರ 9, ಆರ್ಥಿಕ ಇಲಾಖೆ (ಅಬಕಾರಿ) 5, ಕೌಶಲಾಭಿವೃದ್ಧಿ 2, ಯುವ ಸಬಲೀಕರಣ ಮತ್ತು ಕ್ರೀಡೆ 4, ನಗರಾಭಿವೃದ್ಧಿ 1, ಆರ್ಥಿಕ ಇಲಾಖೆಗೆ (ಖಜಾನೆ) 23, ಪ್ರವಾಸೋದ್ಯಮ 2, ಡಿಪಿಎಆರ್ (ಸಿಬ್ಬಂದಿ) 5, ಸಮಾಜ ಕಲ್ಯಾಣ 7 ಹುದ್ದೆಗಳ ಭರ್ತಿ ನಡೆಯಲಿದೆ ಎಂದು ಅಂದಾಜಿಸಲಾಗಿದೆ.












Click it and Unblock the Notifications