ಉದ್ಯೋಗಕ್ಕೆ ಆಘಾತ: ಸಾವಿರಾರು ಉದ್ಯೋಗಿಗಳಿಗೆ ಫೇಸ್‌ಬುಕ್ ಗೇಟ್ ಪಾಸ್!
ನವದೆಹಲಿ, ನವೆಂಬರ್ 09: ಫೇಸ್‌ಬುಕ್ ಪೋಷಕ ಸಂಸ್ಥೆಯಾಗಿರುವ ಮೆಟಾ ಬುಧವಾರದಂದು ವ್ಯಾಪಕವಾದ ಉದ್ಯೋಗ ಕಡಿತವನ್ನು ಪ್ರಾರಂಭಿಸಲು ಯೋಜನೆ ಹಾಕುತ್ತಿದೆ ಎಂದು ಮುಖ್ಯ ಕಾರ್ಯನಿರ್ವಾಹಕ ಮಾರ್ಕ್ ಜುಕರ್‌ಬರ್ಗ್ ತಿಳಿಸಿದ್ದಾರೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿಯ ಪ್ರಕಾರ, ನಿರಾಶಾದಾಯಕ ಗಳಿಕೆ ಮತ್ತು ಆದಾಯದಲ್ಲಿನ ಕುಸಿತದ ನಂತರ ಸೋಷಿಯಲ್ ಮೀಡಿಯಾದ ದೈತ್ಯ ಸಂಸ್ಥೆಯಾಗಿರುವ ಮೇಟಾ ತನ್ನ ವೆಚ್ಚವನ್ನು ತಗ್ಗಿಸುವ ನಿಟ್ಟಿನಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ.
ಎಲೋನ್ ಮಸ್ಕ್‌ಗೆ ಮಾರಾಟ ಮಾಡಿದ ನಂತರ ಟ್ವಿಟ್ಟರ್ ತನ್ನ ಉದ್ಯೋಗಿಗಳಲ್ಲಿ ಶೇ.50ರಷ್ಟು ಜನರನ್ನು ಕಡಿತಗೊಳಿಸಿತು. ಇದರ ಬೆನ್ನಲ್ಲೇ ಮಾರ್ಕ್ ಜುಕರ್‌ಬರ್ಗ್ ಕಂಪನಿಯ ಅಂಥದ್ದೇ ಹೆಜ್ಜೆ ಇರಿಸಲು ಮುಂದಾಗಿದೆ. ಈ ಹಿಂದೆ ಅತಿಯಾದ ಆಶಾವಾದವೇ ಹೆಚ್ಚಿನ ಸಿಬ್ಬಂದಿ ನೇಮಕಕ್ಕೆ ಕಾರಣವಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ. ಈ ಸಂಸ್ಥೆಯು ಉದ್ಯೋಗಿಗಳ ವಜಾಗೊಳಿಸುವ ಕುರಿತು ಬುಧವಾರ ಸಂಜೆ 6 ಗಂಟೆ ಹೊತ್ತಿಗೆ ಅಧಿಕೃತವಾಗಿ ಪ್ರಕರಟಿಸುವ ನಿರೀಕ್ಷೆಯಿದೆ.

87000 ಉದ್ಯೋಗಿಗಳನ್ನು ಹೊಂದಿರುವ ಮೆಟಾ
ಕಳೆದ ಸೆಪ್ಟೆಂಬರ್ 30ರ ಅಂಕಿ-ಅಂಶಗಳ ಪ್ರಕಾರ, ಮೇಟಾ ಸಂಸ್ಥೆಯು 87,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಈ ಪೈಕಿ ಕಂಪನಿಯು ಶೇ.10ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವುದಕ್ಕೆ ನಿರ್ಧರಿಸಿದೆ ಎಂದು ವರದಿಯಾಗಿದೆ. ಆ ಮೂಲಕ 8700 ಉದ್ಯೋಗಿಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಈ ಕುರಿತು ಸಂಜೆ 4.30ರ ಹೊತ್ತಿಗೆ ಕಂಪನಿಯು ಅಧಿಕೃತವಾಗಿ ತಿಳಿಸುವ ನಿರೀಕ್ಷೆಯಿದೆ ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿವೆ.

ಮೆಟಾದಿಂದ ಉದ್ಯೋಗ ಕಡಿತ ನಿರ್ಧಾರವೇಕೆ?
ಮೊದಲ 18 ವರ್ಷಗಳಲ್ಲಿ ಕಂಪನಿಯು ಮೂಲಭೂತವಾಗಿ ಬೆಳವಣಿಗೆ ಹೊಂದಿದೆ. ಮೂಲಭೂತವಾಗಿ ನಾವು ಬಹಳ ಬೇಗ ಅಭಿವೃದ್ಧಿಯನ್ನು ಸಾಧಿಸಿದ್ದೇವೆ. ಆದರೆ ಇತ್ತೀಚಿನ ದಿನಗಳಲ್ಲಿ ನಮ್ಮ ಕಂಪನಿಯ ಆದಾಯದಲ್ಲಿ ಕೊಂಚ ಇಳಿಮುಖವಾಗಿದೆ. ಹೀಗಾಗಿ ನಾವು ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.

ಟ್ವಿಟ್ಟರ್‌ನ ಉದ್ಯೋಗ ಕಡಿತದೊಂದಿಗೆ ಹೋಲಿಕೆ
ವಜಾ ಮಾಡಲು ಯೋಜಿಸುತ್ತಿರುವ ಉದ್ಯೋಗಿಗಳ ಸಂಖ್ಯೆಯನ್ನು ಮೇಟಾ ಅಧಿಕೃತವಾಗಿ ದೃಢಪಡಿಸದಿದ್ದರೂ, ಕಳೆದ ವಾರ ವರದಿಯೊಂದು ಕಂಪನಿಯು ಸಾವಿರಾರು ಉದ್ಯೋಗಿಗಳನ್ನು ಕಂಪನಿಯನ್ನು ತೊರೆಯುವಂತೆ ಹೇಳಿದೆ. ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಟ್ವಿಟ್ಟರ್‌ನ ಉದ್ಯೋಗ ಕಡಿತಕ್ಕಿಂತ ಮೆಟಾದ ಉದ್ಯೋಗ ಕಡಿತವು ಶೇಕಡಾವಾರು ಆಧಾರದ ಮೇಲೆ ತುಲನಾತ್ಮಕವಾಗಿ ಕಡಿಮೆಯಾಗಿರುತ್ತದೆ.

ಉದ್ಯೋಗದಿಂದ ವಜಾಗೊಂಡವರಿಗೆ 4 ತಿಂಗಳ ವೇತನ
ಮೇಟಾದ ಸಂಸ್ಥೆಯ ಮಾನವ ಸಂಪನ್ಮೂಲ ಮುಖ್ಯಸ್ಥ ಲೋರಿ ಗೋಲರ್, ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುವ ಪ್ರಕ್ರಿಯೆ ಕುರಿತು ತಿಳಿಸಿದ್ದಾರೆ. ಕಂಪನಿಯಿಂದ ವಜಾ ಆಗುತ್ತಿರುವ ಉದ್ಯೋಗಿಗಳಿಗೆ 4 ತಿಂಗಳ ವೇತನವನ್ನು ಪರಿಹಾರವಾಗಿ ನೀಡಲಾಗುವುದು ಎಂದು ತಿಳಿಸಿದರು. ಸೆಪ್ಟೆಂಬರ್ 30ರ ಅಂಕಿ-ಅಂಶಗಳ ಪ್ರಕಾರ, ಕಂಪನಿಯಲ್ಲಿ 87000 ಉದ್ಯೋಗಿಗಳಿದ್ದು, ಈಗ ಸಂಸ್ಥೆಯು ಶೇ.10ರಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಬಗ್ಗೆ ಸಂಸ್ಥೆಯು ಲೆಕ್ಕಾಚಾರ ಹಾಕಿಕೊಂಡಿದೆ.












Click it and Unblock the Notifications