Teachers Deputation: ಶಿಕ್ಷಣ ಇಲಾಖೆ ನೀಡಿದ ಹೊಸ ಅಪ್‌ಡೇಟ್
ಬೆಂಗಳೂರು, ಆಗಸ್ಟ್ 11: ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ನಿಯೋಜನೆ ಮೇರೆಗೆ ಮುಂದುವರೆಸುವ ಬಗ್ಗೆ ಕರ್ನಾಟಕ ಸರ್ಕಾರದ ಆಯುಕ್ತರ ಕಛೇರಿ, ಶಾಲಾ ಶಿಕ್ಷಣ ಇಲಾಖೆ ಹೊಸ ಅಪ್‌ಡೇಟ್ ನೀಡಿದೆ. ಕೆಲವು ಮಾನದಂಡಗಳಿಗೆ ಒಳಪಟ್ಟು ತಾತ್ಕಾಲಿಕವಾಗಿ ಶಿಕ್ಷಕರ ನಿಯೋಜನೆ ಮಾಡಿಕೊಳ್ಳಲು ಅನುಮತಿಯನ್ನು ನೀಡಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಎಲ್ಲಾ ನಿರ್ದೇಶಕರು ಹಾಗೂ ವರ್ಗಾವಣಾ ಪ್ರಾಧಿಕಾರಿಗಳಿಗೆ ಈ ಕುರಿತು ಪತ್ರದ ಮೂಲಕ ಮಾಹಿತಿ ನೀಡಲಾಗಿದೆ.
ಶಿಕ್ಷಣ ಇಲಾಖೆಯ ಆಯುಕ್ತರಾದ ಬಿ. ಬಿ. ಕಾವೇರಿ ಈ ಕುರಿತು ಜ್ಞಾಪನಾ ಪತ್ರದಲ್ಲಿ ಮಾಹಿತಿ ನೀಡಿದ್ದಾರೆ. ಕಛೇರಿ ವರ್ಗಾವಣಾ ಅಧಿಸೂಚನೆ ಸಂಖ್ಯೆ: ಸಿ3(7) ಪ್ರಾ.ಪ್ರೌ.ಶಾಶಿ ಸಾಮಾನ್ಯ ವರ್ಗಾವಣೆ/01/2023-24 ದಿನಾಂಕ 15/06/2024 ಉಲ್ಲೇಖ ಮಾಡಲಾಗಿದೆ.

ಪತ್ರದ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ ಅಧಿಸೂಚನೆಯನ್ವಯ 2023-24ನೇ ಸಾಲಿನ ಸಾರ್ವತ್ರಿಕ ವರ್ಗಾವಣೆಯನ್ನು ಹಮ್ಮಿಕೊಂಡಿದ್ದು ಸದರಿ ವೇಳಾಪಟ್ಟಿಯಲ್ಲಿ ಅಧಿಸೂಚಿಸಿರುವಂತೆ ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ, ಕಾರ್ಯನಿರ್ವಹಿಸಿ 3 ಅಥವಾ 5 ವರ್ಷ ಪೂರೈಸಿರುವ ಶಿಕ್ಷಕರ/ ಅಧಿಕಾರಿಗಳ ಹಿಮ್ಮುಖ ವರ್ಗಾವಣೆಯನ್ನು ಕೌನ್ಸಿಲಿಂಗ್ ಮೂಲಕ ಈಗಾಗಲೇ ಕೈಗೊಳ್ಳಲಾಗಿದೆ.
ಸದರಿ ವರ್ಗಾವಣೆಯಿಂದ ತೆರವಾದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ವರ್ಗಾವಣೆ ಕಾಯ್ದೆ ಮತ್ತು ನಿಯಮಗಳಲ್ಲಿ ಆದೇಶಿಸಿರುವಂತೆ ಲಿಖಿತ ಪರೀಕ್ಷೆ ಮೂಲಕ ಭರ್ತಿ ಮಾಡಬೇಕಾಗಿದ್ದು, ಸದರಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸಾಕಷ್ಟು ಸಮಯಾವಕಾಶದ ಅವಶ್ಯಕತೆ ಇರುತ್ತದೆ. ನಿರ್ದಿಷ್ಟಪಡಿಸಿದ ಖಾಲಿ ಹುದ್ದೆಗಳ ಅಗತ್ಯತೆ ಸೃಷ್ಟಿಯಾಗಿರುವುದರಿಂದ ಶೈಕ್ಷಣಿಕವಾಗಿ ಸರ್ಕಾರದ ಕಾರ್ಯಕ್ರಮಗಳನ್ನು ಸುಗಮವಾಗಿ ಅನುಷ್ಠಾನಗೊಳಿಸಲು ತೊಡಕುಂಟಾಗಿರುತ್ತದೆ.
ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿರ್ದಿಷ್ಟಪಡಿಸಿದ ಖಾಲಿ ಹುದ್ದೆಗಳನ್ನು ಶೈಕ್ಷಣಿಕ ಹಿತದೃಷ್ಟಿಯಿಂದ ಹಾಗೂ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಸಂಬಂಧ ಅನುಮತಿ ನೀಡುವಂತ ಮನವಿ ಮಾಡಿಕೊಂಡಿರುತ್ತಾರೆ.
ಈ ಹಿನ್ನೆಲೆಯಲ್ಲಿ ಸದರಿ ಮನವಿಗಳನ್ನು ಪರಿಶೀಲಿಸಿ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಖಾಲಿ ಇರುವ ನಿರ್ದಿಷ್ಟಪಡಿಸಿದ ಹುದ್ದೆಗಳನ್ನು ನಿಯೋಜನೆ ಮೂಲಕ ಭರ್ತಿ ಮಾಡಲು ಅನುವಾಗುವಂತೆ ಕೆಳಕಂಡ ಮಾನದಂಡಗಳಿಗೆ ಒಳಪಟ್ಟು ಅನುಮತಿ ನೀಡಿದೆ.
ಮಾನದಂಡಗಳು
* ನಿಯೋಜಿತ ಶಿಕ್ಷಕರು/ ಅಧಿಕಾರಿಗಳು ನಿಯೋಜನೆ ಅವಧಿಯಲ್ಲಿ ಯಾವುದೇ ಭತ್ಯೆಗಳಿಗೆ ಅರ್ಹರಿರುವುದಿಲ್ಲ
* ಸದರಿ ತಾತ್ಕಾಲಿಕ ನಿಯೋಜನೆಯು ತಾಂತ್ರಿಕ ಸಹಾಯಕರ ಹುದ್ದೆಗೆ ಅನ್ವಯಿಸುವುದಿಲ್ಲ.
* ಆಯಾ ತಾಲ್ಲೂಕು ವ್ಯಾಪ್ತಿಯಲ್ಲಿ ಯಾವುದಾದರೂ ಶೂನ್ಯ ದಾಖಲಾತಿ ಇರುವ ಶಾಲೆಯಲ್ಲಿ ಶಿಕ್ಷಕರಿದ್ದಲ್ಲಿ ಮಾತ್ರ ಆ ಶಾಲೆಯ ಶಿಕ್ಷಕರಿಗೆ ನಿರ್ದಿಷ್ಟಪಡಿಸಿದ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ವಹಿಸುವುದು.
* ಮಕ್ಕಳ ದಾಖಲಾತಿ ಕಡಿಮೆ ಇರುವ ಶಾಲೆಗಳಲ್ಲಿ ಕಾರ್ಯಭಾರ ಕಡಿಮೆ ಇರುವ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರನ್ನು ನಿರ್ದಿಷ್ಟಪಡಿಸಿದ ಹುದ್ದೆಗಳಲ್ಲಿ ನಿಯೋಜಿಸುವುದು.
* ಗ್ರೂಪ್-ಬಿ ವೃಂದಕ್ಕೆ ಡಯಟ್ ಕಛೇರಿಗಳಲ್ಲಿ ಕಡಿಮೆ ಕಾರ್ಯಭಾರವಿರುವ ಉಪನ್ಯಾಸಕರನ್ನು ಗುರುತಿಸಿ ಸದರಿಯವರಿಗೆ ನಿರ್ದಿಷ್ಟ ಪಡಿಸಿದ ಹುದ್ದೆಗಳ ಹೆಚ್ಚುವರಿ ಕಾರ್ಯಭಾರವನ್ನು ನೀಡಬಹುದಾಗಿರುತ್ತದೆ
* ಮಾನದಂಡ 3, 4 ಮತ್ತು 5 ರಲ್ಲಿನ ಶಿಕ್ಷಕರ/ ಮುಖ್ಯಶಿಕ್ಷಕರ/ ಉಪನ್ಯಾಸಕರ ಲಭ್ಯತೆ ಇಲ್ಲದಿದ್ದಲ್ಲಿ ಪ್ರಸ್ತುತ ಹಿಮ್ಮುಖ ವರ್ಗಾವಣೆ ಪಡೆದಿರುವವರು ಆಯಾ ತಾಲ್ಲೂಕಿನ ಒಳಗೆ ಸ್ಥಳ ಆಯ್ಕೆ ಮಾಡಿಕೊಂಡು ಕರ್ತವ್ಯ ನಿರ್ವಹಿಸುತ್ತಿರುವವರು, ಈ ಹಿಂದೆ ಯಾವ ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರೋ ಅದೇ ಹುದ್ದೆಗೆ ಮಾತ್ರ ನಿಯೋಜನೆ ಮಾಡಲು ಅವಕಾಶ ಕಲ್ಪಿಸಿದೆ.
* ನಿಯೋಜಿತ ಶಿಕ್ಷಕರುಗಳ ಮೂಲ ಶಾಲೆಯ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಚಟುವಟಿಕೆಗಳಿಗೆ ತೊಡಕಾಗದಂತೆ ಕ್ರಮವಹಿಸುವುದು.
ಮೇಲೆ ಸೂಚಿಸಿರುವ ಮಾನದಂಡಗಳನ್ನು ಶೈಕ್ಷಣಿಕ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಕಡ್ಡಾಯವಾಗಿ ಪಾಲಿಸಿ ಪಾರದರ್ಶಕತೆಯಿಂದ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದೆ. ಜಿಲ್ಲಾ ಹಂತದಲ್ಲಿ ನಿಯೋಜನೆ ಮಾಡಿರುವ ತಾಲೂಕುವಾರು/ ಹುದ್ದೆವಾರು ವಿವರಗಳನ್ನು ಕಛೇರಿಗೆ ವರದಿ ಮಾಡಲು ತಿಳಿಸಿದೆ.












Click it and Unblock the Notifications