KPSC: ಗೆಜೆಟೆಡ್ ಪ್ರೊಬೇಷನರ್ ಪರೀಕ್ಷೆ ಮುಂದೂಡಲು ಒತ್ತಾಯ
ಬೆಂಗಳೂರು, ಜುಲೈ 30: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯ ಪೂರ್ವಭಾವಿ ಪರೀಕ್ಷೆ ದಿನಾಂಕ ಘೋಷಣೆ ಮಾಡಿದೆ. ಆದರೆ ಅದೇ ದಿನಾಂಕದಂದು ಕೇಂದ್ರ ಸರ್ಕಾರದ ವಿವಿಧ ನೇಮಕಾತಿ ಪರೀಕ್ಷೆ ಇದೆ, ಆದ್ದರಿಂದ ದಿನಾಂಕ ಬದಲಾವಣೆ ಮಾಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ.
ಕೆಪಿಎಸ್‌ಸಿ ಈಗಾಗಲೇ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. 25/8/2024ರ ಭಾನುವಾರ ಪರೀಕ್ಷೆಗಳು ನಡೆಯಲಿವೆ.

ಆದರೆ ಅಂದು ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಬ್ಯಾಂಕುಗಳ ಕ್ಲರ್ಕ್, ಪ್ರೊಹಿಬಿಟರಿ ಆಫೀಸರ್ಸ್, ಸ್ಪೆಷಲಿಸ್ಟ್ ಆಫೀಸರ್ಸ್ ಹುದ್ದೆಗಳ ನೇಮಕಾತಿಗಾಗಿ ಪೂರ್ವಭಾವಿ ಪರೀಕ್ಷೆಯನ್ನು ನಿಗದಿ ಮಾಡಲಾಗಿದೆ. ಒಂದೇ ದಿನ ಎರಡು ಪರೀಕ್ಷೆ ಇದ್ದು, ಅಭ್ಯರ್ಥಿಗಳಿಗೆ ತೊಂದರೆಯಾಗಿದೆ.
ದಿನಾಂಕ ಬದಲಾವಣೆ ಮಾಡಿ: ಕರ್ನಾಟಕದಲ್ಲಿ ಹಲವು ಅಭ್ಯರ್ಥಿಗಳು ಕೆಪಿಎಸ್‌ಸಿಯ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ಮತ್ತು ಬ್ಯಾಂಕುಗಳ ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಒಂದೇ ದಿನ ಎರಡು ಪರೀಕ್ಷೆ ಇರುವುದು ತೊಂದರೆಯಾಗಿದೆ. ಪರೀಕ್ಷೆ ದಿನಾಂಕ ಬದಲಾವಣೆ ಮಾಡಿ ಎಂದು ಒತ್ತಾಯಿಸಿದ್ದಾರೆ.
ಈ ಕುರಿತು ಕೆಪಿಎಸ್‌ಸಿ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಕೆ. ಅವರಿಗೆ ಆಲ್ ಕರ್ನಾಟಕ ಸ್ಟೇಟ್ ಸ್ಟುಡೆಂಟ್ಸ್ ಅಸೋಸಿಯೇಷನ್ (ರಿ) ಪತ್ರವನ್ನು ಬರೆದಿದೆ. ಐಬಿಪಿಎಸ್ ಪರೀಕ್ಷೆ ಹಿನ್ನಲೆಯಲ್ಲಿ ಕೆಪಿಎಸ್‌ಸಿ ನಡೆಸುವ ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ಪೂರ್ವಭಾವಿ ಪರೀಕ್ಷೆ ಮುಂದೂಡಬೇಕು ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಐಬಿಪಿಎಸ್ ಕ್ಲರ್ಕ್ ಪೂರ್ವಭಾವಿ ಪರೀಕ್ಷೆ ಹಿನ್ನಲೆಯಲ್ಲಿ ಕೆಪಿಎಸ್‌ಸಿ ವತಿಯಿಂದ ಆಗಸ್ಟ್ 25ರಂದು ನಡೆಸಲಾಗುತ್ತಿರುವ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ನಮ್ಮ ಕಛೇರಿಗೆ ಅನೇಕ ಮನವಿ, ಪೋನ್ ಕರೆಗಳು ಬರುತ್ತಿವೆ.
ಕೆಪಿಎಸ್‌ಸಿಯ ಗಮನಕ್ಕೆ ಈ ಕುರಿತು ತಂದಾಗ ಆಗಸ್ಟ್ 25ರಂದೇ ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಗಳನ್ನು ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಒಂದೇ ದಿನ ಎರಡು ಪರೀಕ್ಷೆ ಇರುವುದರಿಂದ ಕನ್ನಡಗ ಅಭ್ಯರ್ಥಿಗಳಿಗೆ ತೊಂದರೆ ಆಗುತ್ತಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಅರಸುವ ಮತ್ತು ರಾಜ್ಯ ಆಡಳಿತ ಸೇವೆಗೆ ಅಣಿಯಾಗಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಆಯೋಗದ ಕ್ರಮದಿಂದ ಅನಾನುಕೂಲ ಉಂಟಾಗುವುದನ್ನು ತಪ್ಪಿಸುವಂತೆ ತಮ್ಮಲ್ಲಿ ವಿನಂತಿಸುತ್ತಿದ್ದು, ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಕೆಪಿಎಸ್‌ಸಿ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಮನವಿ ಮಾಡಲಾಗಿದೆ.
ಪರೀಕ್ಷೆ ವೇಳಾಪಟ್ಟಿ: ಕರ್ನಾಟಕ ಲೋಕಸೇವಾ ಆಯೋಗ 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 25ರಂದು ನಡೆಸಲಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ಪತ್ರಿಕೆ-1 ಮತ್ತು ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ.
ನೇಮಕಾತಿಗಾಗಿ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಈ ಪೂರ್ವಭಾವಿ ಪರೀಕ್ಷೆಗೆ ತಯಾರಿ ಆರಂಭಿಸಬಹುದು. ಆದರೆ ಈಗ ಕೆಪಿಎಸ್‌ಸಿ ಪರೀಕ್ಷೆ ದಿನಾಂಕವನ್ನು ಮುಂದೂಡಿಕೆ ಮಾಡಲಿದೆಯೇ? ಎಂದು ಕಾದು ನೋಡಬೇಕಿದೆ.
ಕೆಪಿಎಸ್‌ಸಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳಿಗೆ ದಿನಾಂಕ 21/07/2024ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸುವುದಾಗಿ ಮೊದಲು ಘೋಷಣೆ ಮಾಡಿತ್ತು. ಆದರೆ ಬಳಿಕ ದಿನಾಂಕ 25/08/2024ರಂದು ಪರೀಕ್ಷೆ ಮರು ನಿಗದಿಪಡಿಸಿತ್ತು. ಈಗ ಮತ್ತೆ ದಿನಾಂಕ ಬದಲಾವಣೆಗೆ ಒತ್ತಾಯ ಕೇಳಿ ಬಂದಿದೆ.
ಕರ್ನಾಟಕ ಸರ್ಕಾರ ದಿನಾಂಕ 21/06/2024ರಲ್ಲಿ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಪೂರ್ವಭಾವಿ ಪರೀಕ್ಷೆಯ ದಿನಾಂಕ ಈ ಹಿಂದೆ ಬದಲಾಯಿಸಲಾಗಿತ್ತು.











Click it and Unblock the Notifications