ಹೊಸ ಹುದ್ದೆಗಳ ಸೃಜನೆ; ಆರ್ಥಿಕ ಇಲಾಖೆಯ ಮಹತ್ವದ ಸುತ್ತೋಲೆ
ಬೆಂಗಳೂರು, ಜನವರಿ 04: ಕರ್ನಾಟಕ ಸರ್ಕಾರದ ಆರ್ಥಿಕ ಇಲಾಖೆ ಹೊಸ ಹುದ್ದೆಗಳ ಸೃಜನೆ ಬಗ್ಗೆ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಆರ್ಥಿಕ ಇಲಾಖೆಯ ಸಹಮತಿ ಇಲ್ಲದೇ ಸೃಜಿಸಲಾದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದೆ.
ಈ ಕುರಿತು ಡಾ. ಪಿ. ಸಿ. ಜಾಫರ್ ಕಾರ್ಯದರ್ಶಿ (ಆ ಮತ್ತು ಸಂ) ಆರ್ಥಿಕ ಇಲಾಖೆ ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು/ ಪ್ರಧಾನ ಕಾರ್ಯದರ್ಶಿಗಳು/ ಕಾರ್ಯದರ್ಶಿಗಳಿಗೆ ಪತ್ರವನ್ನು ಬರೆದಿದ್ದಾರೆ.

ಸುತ್ತೋಲೆಯ ವಿವರ; ಕರ್ನಾಟಕ ಸರ್ಕಾರದ (ಕಾರ್ಯ ಕಲಾಪಗಳ ನಿರ್ವಹಣೆ) ನಿಯಮಗಳು -1977ರ ಅನ್ವಯ ಅಡಳಿತ ಇಲಾಖೆಗಳು ಹುದ್ದೆಗಳನ್ನು ಸೃಜಿಸುವ ಪೂರ್ವದಲ್ಲಿ ಆರ್ಥಿಕ ಇಲಾಖೆಯ ಸಹಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಹೇಳಿದೆ.
ಆರ್ಥಿಕ ಇಲಾಖೆಯ ಸಹಮತಿ ಪಡೆಯದೆ, ಹಲವಾರು ವಿಶ್ವವಿದ್ಯಾಲಯಗಳು/ ವೈದ್ಯಕೀಯ ವಿಶ್ವವಿದ್ಯಾಲಯಗಳು/ ಕೃಷಿ ವಿಶ್ವವಿದ್ಯಾಲಯಗಳು ಆಡಳಿತ ಮಂಡಳಿಯ (FC/GC) ಅನುಮೋದನೆ ಪಡೆದು ಹುದ್ದೆಗಳನ್ನು ತನ್ನ ಹಂತದಲ್ಲಿಯೇ ಸೃಜಿಸಿಕೊಂಡಿರುವುದು ಕಂಡುಬಂದಿರುತ್ತದೆ.
ಆರ್ಥಿಕ ಇಲಾಖೆಯ ಸಹಮತಿಯಿಲ್ಲದೇ ವಿಶ್ವವಿದ್ಯಾಲಯಗಳ ಹಂತದಲ್ಲಿಯೇ ಸೃಜಿಸಿಕೊಂಡ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಯು ಅನುಮತಿ ನೀಡುತ್ತಿರುವುದು ನಿಯಮಗಳಿಗೆ ವಿರುದ್ಧವಾಗಿರುತ್ತದೆ ಎಂದು ತಿಳಿಸಿದೆ. ಹುದ್ದೆ ಭರ್ತಿಗೆ ಅನುಮತಿ ನೀಡಿದ ನಂತರ ವೇತನ ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸುತ್ತಿರುವ ಕ್ರಮವು ಸಹ ನಿಯಮಗಳಿಗೆ ವಿರುದ್ಧವಾದ ಕ್ರಮವಾಗಿರುತ್ತದೆ.
ಆದುದರಿಂದ ಎಲ್ಲಾ ವಿಶ್ವವಿದ್ಯಾಲಯಗಳು, ವೈದ್ಯಕೀಯ ವಿಶ್ವವಿದ್ಯಾಲಯಗಳು/ ಕೃಷಿ ವಿಶ್ವ ವಿದ್ಯಾಲಯಗಳು ಆಡಳಿತ ಮಂಡಳಿಯ (FC/GC) ಅನುಮೋದನೆ ಪಡೆದು ತಮ್ಮ ಹಂತದಲ್ಲಿಯೇ ಆದೇಶ/ ಅಧಿಸೂಚನೆ/ ನಡವಳಿ ಮೂಲಕ ಸೃಜಿಸಿಕೊಳ್ಳಲಾದ ಹುದ್ದೆಗಳ ವಿವರಗಳೊಂದಿಗೆ, ಸರ್ಕಾರದ ಆದೇಶವಿರುವ ಹುದ್ದೆಗಳ ದಾಖಲೆಗಳೊಂದಿಗೆ ಮತ್ತು ವೃಂದವಾರು ಭರ್ತಿಯಾಗಿರುವ ಹುದ್ದೆಗಳ ವಿವರಗಳೊಂದಿಗೆ, ಆರ್ಥಿಕ ಇಲಾಖೆಯ ಅನುಮೋದನೆಗಾಗಿ ಆಡಳಿತ ಇಲಾಖೆ ಮೂಲಕ ಮತ್ತು ಆಡಳಿತ ಇಲಾಖೆಯ ಶಿಫಾರಸ್ಸಿನೊಂದಿಗೆ ಪ್ರಸ್ತಾವನೆ ಸಲ್ಲಿಸಲು ತಿಳಿಸಲಾಗಿದೆ.
ಮುಂದುವರೆದು, ಆರ್ಥಿಕ ಇಲಾಖೆಯ ಸಹಮತಿ ಇಲ್ಲದೇ ಸೃಜಿಸಲಾದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ ಹಾಗೂ ಸದರಿ ಹುದ್ದೆಗಳ ಭರ್ತಿಗೆ ಸಹಮತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ವಿವಿಧ ಹುದ್ದೆಗಳ ಭರ್ತಿ; ಕರ್ನಾಟಕದ ಆರ್ಥಿಕ ಇಲಾಖೆ 2024ರಲ್ಲಿ ವಿವಿಧ ಇಲಾಖೆಗಳಲ್ಲಿನ ಹಲವಾರು ಹುದ್ದೆಗಳನ್ನು ಭರ್ತಿ ಮಾಡಲು ತಯಾರಿ ನಡೆಸಿದೆ. ತುರ್ತಾಗಿ ಭರ್ತಿ ಮಾಡಬೇಕಿರುವ ಹುದ್ದೆಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಮಾಹಿತಿಯನ್ನು ಸಂಗ್ರಹ ಮಾಡುತ್ತಿದೆ.
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಖಾಲಿ ಹುದ್ದೆಗಳ ಕುರಿತು ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ನೀಡಿದ್ದರು. ರಾಜ್ಯ ಸರ್ಕಾರದಲ್ಲಿ ಒಟ್ಟು 43 ಇಲಾಖೆಗಳಿವೆ,
ಅಧಿಕಾರಿ ಹುದ್ದೆಗಳು 86,309, ಸಿಬ್ಬಂದಿ 6,85,716 ಮತ್ತು ಒಟ್ಟು ಮಂಜೂರಾಗಿರುವ ಹುದ್ದೆಗಳು 7,72,025 ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದರು. ಸುಮಾರು 2.50 ಲಕ್ಷಕ್ಕಿಂತ ಅಧಿಕ ಹುದ್ದೆಗಳು ಖಾಲಿ ಇದ್ದು, ನೇಮಕಾತಿ ನಡೆಯಬೇಕಿದೆ.












Click it and Unblock the Notifications