BMTC Recruitment; ಶಿಶಿಕ್ಷು ತರಬೇತಿಗಾಗಿ ಅರ್ಜಿ ಹಾಕಿ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಶಿಶಿಕ್ಷು ತರಬೇತಿಗಾಗಿ ಅರ್ಜಿ ಕರೆದಿದೆ. ಮಾರ್ಚ್ 15ರ ತನಕ ಅರ್ಜಿ ಸಲ್ಲಿಕೆ ಮಾಡಬಹುದು.
ಬೆಂಗಳೂರು, ಫೆಬ್ರವರಿ 27; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 150 ಪೂರ್ಣಾವಧಿ ಶಿಶಿಕ್ಷು ತರಬೇತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತರು ಮಾರ್ಚ್ 15ರಂದು ನಡೆಯುವ ದಾಖಲಾತಿಗಳ ಪರಿಶೀಲನೆಯಲ್ಲಿ ಅಗತ್ಯ ದಾಖಲೆಗಳ ಜೊತೆ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ ಶಿಶಿಕ್ಷು ಕಾಯ್ದೆ 1961ರ ಪ್ರಕಾರ ವಿವಿಧ ವೃತ್ತಿಗಳಲ್ಲಿ ಪೂರ್ಣಾವಧಿ ಶಿಶಿಕ್ಷು ತರಬೇತಿಗೆ ಅರ್ಜಿ ಕರೆಯಲಾಗಿದೆ. ಅರ್ಜಿ ಸಲ್ಲಿಸುವವರಿಗೆ15/3/2023ರಂದು ಕನಿಷ್ಠ ವಯೋಮಿತಿ 16 ವರ್ಷ ತುಂಬಿರಬೇಕು, ಗರಿಷ್ಠ 30 ವರ್ಷ ಮೀರಿರಬಾರದು.

ಪೂರ್ಣಾವಧಿ ಶಿಶಿಕ್ಷು; ಮೆಕಾನಿಕಲ್ ಡೀಸೆಲ್ 100, ಫಿಟ್ಟರ್ 50, ವೆಲ್ಡರ್ 50, ಮೋಟಾರ್ ವೆಹಿಕಲ್ ಬಾಡಿ ಬಿಲ್ಡರ್ 40, ಎಲೆಕ್ಟ್ರೀಷಿಯನ್ 100, ಎಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ 60, ಕಂಪ್ಯೂಟರ್ ಆಪರೇಟರ್ ಕಂ ಪ್ರೋಗ್ರಾಮಿಂಗ್ ಅಸಿಸ್ಟೆಂಟ್ 150 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಕೆ ಮಾಡುವವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಥವ ಐಟಿಐನಲ್ಲಿ ಉತ್ತೀರ್ಣರಾಗಿರಬೇಕು.
ಡಿಪ್ಲೋಮ ಶಿಶಿಕ್ಷು; ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್ 5, ಡಿಪ್ಲೋಮ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ 8, ಡಿಪ್ಲೋಮ ಇನ್ ಕಂಪ್ಯೂಟರ್ ಸೈನ್ಸ್/ ಡಿಪ್ಲೋಮ ಇನ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಷನ್/ ಡಿಪ್ಲೋಮ ಇನ್ ಇನ್ಫರ್ಮೇಷನ್ ಟೆಕ್ನಾಲಜಿ 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ಪದವಿ ಶಿಶಿಕ್ಷು; ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಸಿವಿಲ್) 5, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (ಎಲೆಕ್ಟ್ರಿಕಲ್) 8, ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ & ಕಮ್ಯುನಿಕೇಷನ್, ಇನ್ಫರ್ಮೇಷನ್ ಟೆಕ್ನಾಲಜಿ, ಕಂಪ್ಯೂಟರ್ ಅಪ್ಲಿಕೇಷನ್ 30 ಹುದ್ದೆಗಳು.
ತರಬೇತಿ ಭತ್ಯೆ; ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆ ನೀಡಲಾಗುತ್ತದೆ. ಎಸ್‌ಎಸ್‌ಎಲ್‌ಸಿ ತೇರ್ಗಡೆ ಹೊಂದಿದವರಿಗೆ 6 ಸಾವಿರ ರೂ., ಐಟಿಐ ತೇರ್ಗಡೆ ಹೊಂದಿದವರಿಗೆ 7 ಸಾವಿರ ರೂ., ಡಿಪ್ಲೋಮಾ ತೇರ್ಗಡೆ 8 ಸಾವಿರ ರೂ., ಪದವಿ ತೇರ್ಗಡೆ 9 ಸಾವಿರ ರೂ. ಭತ್ಯೆಯನ್ನು ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ವಿವರ; ಶಿಶಿಕ್ಷು ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಅಭ್ಯರ್ಥಿಯ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ, ಜಾತಿ, ಅಪೇಕ್ಷಿತ ವೃತ್ತಿಯ ಮಾಹಿತಿಗಳನ್ನೊಳಗೊಂಡ ಹಾಗೂ ಸ್ಪಷ್ಟವಾಗಿ ಬೆರಳಚ್ಚುಗೊಳಿಸಿದ ಅರ್ಜಿಯೊಂದಿಗೆ ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳಾದ ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಐ.ಟಿ.ಐ ತೇರ್ಗಡೆ ಹೊಂದಿದ್ದಲ್ಲಿ ಅದರ ಮೂಲ ಅಂಕಪಟ್ಟಿ, ಡಿಪ್ಲೋಮ ಅಂಕಪಟ್ಟಿಗಳು, ಪದವಿ ಅಂಕಪಟ್ಟಿಗಳು, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಆಧಾರ್ ಲಿಂಕ್ ಬ್ಯಾಂಕ್ ಖಾತೆಯ ಪ್ರತಿ, ಮತ್ತು ಇತ್ತೀಚಿನ 2 ಪಾಸ್‍ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ದಿನಾಂಕ 15/03/2023 ರಂದು ಬೆಳಗ್ಗೆ 10.30 ಗಂಟೆಯಿಂದ 5.00 ಗಂಟೆಯೊಳಗಾಗಿ ದಾಖಲಾತಿಗಳ ಪರಿಶೀಲನೆಗೆ ಹಾಜರಾಗಬೇಕು.
ದಾಖಲಾತಿಗಳ ಪರಿಶೀಲನೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣದ ಪಕ್ಕ, ಬೆಂಗಳೂರು-560027 ಇಲ್ಲಿ ನಡೆಯಲಿದೆ. ಖುದ್ದಾಗಿ ಮೂಲ ದಾಖಲಾತಿಗಳ ಪರಿಶೀಲನೆಗೆ ಅಭ್ಯರ್ಥಿಗಳು ಹಾಜರಾಗತಕ್ಕದ್ದು ಹಾಗೂ ಮೂಲ ದಾಖಲಾತಿಗಳ ಒಂದು ಸೆಟ್ ಜೆರಾಕ್ಸ್ ಪ್ರತಿಗಳನ್ನು ಸಹ ತರುವುದು. ಅಪೂರ್ಣ ಅಥವಾ ವಿಳಂಬವಾಗಿ ಸಲ್ಲಿಸುವ ಅರ್ಜಿಗಳನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
ಸೂಚನೆಗಳು
* ಅಭ್ಯರ್ಥಿಗಳು ಈಗಾಗಲೇ ಶಿಶಿಕ್ಷು ಕಾಯ್ದೆ 1961 ರನ್ವಯ ಶಿಶಿಕ್ಷು ತರಬೇತಿ ಪಡೆದಿರುವವರು ಪುನಃ ಅರ್ಜಿ ಸಲ್ಲಿಸಲು ಅರ್ಹರಲ್ಲ.
* ಶಿಶಿಕ್ಷು ತರಬೇತಿ ಪಡೆಯುವ ಅಭ್ಯರ್ಥಿಗಳು ತಮ್ಮ ತರಬೇತಿ ಪೂರ್ಣಗೊಳಿಸಿದ ನಂತರ ಸಂಸ್ಥೆಯಲ್ಲಿ ಅವರಿಗೆ ಯಾವುದೇ ರೀತಿಯ ನೇಮಕಾತಿ ಮಾಡಿಕೊಳ್ಳುವ ಒಪ್ಪಂದಕ್ಕೆ ಒಳಪಟ್ಟಿರುವುದಿಲ್ಲ ಮತ್ತು ತರಬೇತಿ ಪಡೆಯಲು ಅರ್ಹತೆ ಪಡೆದವರು ಶಿಶಿಕ್ಷು ಕಾಯ್ದೆ 1961ರ ನಿಯಮಗಳು, ನಿಬಂಧನೆ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತಾರೆ.
* ತಾಂತ್ರಿಕ ಶಿಶಿಕ್ಷು ತರಬೇತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಉತ್ತಮ ದೇಹದಾರ್ಡ್ಯತೆ ಹೊಂದಿರಬೇಕು.
* ಒಂದಕ್ಕಿಂತ ಹೆಚ್ಚಿನ ವೃತ್ತಿಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರತಿಯೊಂದು ವೃತ್ತಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ಪತ್ರ ವ್ಯವಹಾರಕ್ಕೆ ಅವಕಾಶವಿರುವುದಿಲ್ಲ.
* ಹೆಚ್ಚಿನ ಮಾಹಿತಿಯನ್ನು ಸಂಸ್ಥೆಯ ವೆಬ್‍ಸೈಟ್ mybmtc.karnataka.gov.in ಮೂಲಕ ಪಡೆಯಬಹುದು.












Click it and Unblock the Notifications