BMTC Recruitment 2024: 2,500 ಹುದ್ದೆಗಳಿಗೆ ಅರ್ಜಿ ಆಹ್ವಾನ, ಆಯ್ಕೆಯಾದವರಿಗೆ ಮಾಸಿಕ ಸಂಬಳ ಎಷ್ಟು ಗೊತ್ತಾ?
ಬೆಂಗಳೂರು, ಮಾರ್ಚ್, 29: ಬೆಂಗಳೂರಿನ ಜೀವನಾಡಿ ಸಾರಿಗೆಯಾದ ಬಿಎಂಟಿಸಿ ಆಗಾಗ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡುವುದಲ್ಲದೇ, ಉದ್ಯೋಗವಕಾಶಗಳನ್ನು ಕೂಡ ಒದಗಿಸುತ್ತಾ ಬಂದಿದೆ. ಇದೀಗ ಬಿಎಂಟಿಸಿಯಲ್ಲಿ ಖಾಲಿಯಿರುವ 2,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಹಾಗಾದರೆ ಅರ್ಜಿ ಸಲ್ಲಿಸಲು ಏನೆಲ್ಲ ಅರ್ಹತೆಗಳನ್ನು ಹೊಂದಿರಬೇಕು ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು?: 2,500 ನಿರ್ವಾಹಕ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಇದೀಗ ನೋಟಿಫಿಕೇಶನ್ ಬಿಡುಗಡೆಗೊಳಿಸಿದೆ. ವೃಂದದ 2,286 ಹುದ್ದೆಗಳು, ಸ್ಥಳೀಯ ವೃಂದದ 199, 15 ಹಿಂಬಾಕಿ ಹುದ್ದೆ ಸೇರಿ ಒಟ್ಟು 2,500 ಹುದ್ದೆಗಳಿಗೆ ಮಾರ್ಚ್ 10ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಎಂದು ತಿಳಿಸಿದೆ. ಇನ್ನು ಅರ್ಜಿ ಸಲ್ಲಿಸಬಯಸುವವರು ದ್ವಿತೀಯ ಪಿಯು ಪೂರ್ಣಗೊಳಿಸಿರಬೇಕು. ಮಾನ್ಯತೆ ಹೊಂದಿರುವ ಮೋಟಾರು ವಾಹನ ನಿರ್ವಾಹಕ ಪರವಾನಗಿ, ಬ್ಯಾಡ್ಜ್ ಹೊಂದಿರಬೇಕಾಗುತ್ತದೆ.

ವಯೋಮಿತಿ ವಿವರ: ಇನ್ನು ವಯೋಮಿತಿಯನ್ನು ನೋಡುವುದಾದರೆ, ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ, 2ಎ, 2ಬಿ, 3ಎ ಮತ್ತು 3ಬಿಗೆ 38, ಎಸ್ಸಿ, ಎಸ್ಟಿ ಮತ್ತು ಪ್ರವರ್ಗ-1ಕ್ಕೆ 40, ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗೆ 45 ವರ್ಷ. ಹೆಚ್ಚಿನ ಮಾಹಿತಿಗಾಗಿ cetonline.karnataka.gov.inಗೆ ಭೇಟಿ ನೀಡಬಹುದಾಗಿದೆ.
ದೇಹದಾರ್ಢ್ಯತೆ: ಪುರುಷರು 160 ಸೆಂಟಿ ಮೀಟರ್, ಮಹಿಳೆಯರು 150 ಸೆಂಟ್ ಮೀಟರ್ ಎತ್ತರ ಇರಬೇಕಾಗುತ್ತದೆ. ಅಭ್ಯರ್ಥಿಗಳು ಕನಿಷ್ಠ ವಯೋಮಿತಿ 18 ಆಗಿದ್ದು, ಗರಿಷ್ಠ ವಯೋಮಿತಿ 35 ವರ್ಷ ಆಗಿದೆ. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ, ಎಸ್ಟಿ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ಮತ್ತು ಮಾಜಿ ಸೈನಿಕ, ಇಲಾಖಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇರಲಿದೆ ಎಂದು ತಿಳಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ವರ್ಷದ ವೃತ್ತಿ ತರಬೇತಿಯಲ್ಲಿ ಮಾಸಿಕ ವೇತನ 9,100 ರೂಪಾಯಿ ನೀಡಲಾಗುತ್ತದೆ. ವರ್ಷದ ಬಳಿಕ ಎರಡು ವರ್ಷಗಳ ಅವಧಿಗೆ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆಯಲ್ಲಿ ನೇಮಕ ಆದಲ್ಲಿ ಮಾಸಿಕ 18,660-25,300 ರೂಪಾಯಿ ವೇತನ ನಿಗದಿಪಡಿಸಲಾಗಿದೆ. ಎರಡು ವರ್ಷಗಳ ಖಾಯಂ ಪೂರ್ವ ಪರೀಕ್ಷಾರ್ಥ ಸೇವೆ ತೃಪ್ತಿಕರವಾಗಿ ಪೂರೈಸಿದ ಬಳಿಕ ಅಭ್ಯರ್ಥಿಗಳ ನೇಮಕಾತಿಯನ್ನು ಪ್ರಾಧಿಕಾರದಿಂದ ಖಾಯಂಗೊಳಿಸಲಾಗುತ್ತದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 750 ರೂಪಾಯಿ ಮತ್ತು ಎಸ್ಸಿ, ಎಸ್ಟಿ, ಪ್ರವರ್ಗ 1, ಮಾಜಿ ಸೈನಿಕ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ 500 ರೂಪಾಯಿ ಶುಲ್ಕ ಪಾವತಿಸಬೇಕಾಗಿದೆ.












Click it and Unblock the Notifications