BDA Recruitment: ಬಿಡಿಎ ನೇಮಕಾತಿ, ಹುದ್ದೆ ಮತ್ತು ವೇತನ ವಿವರ
ಬೆಂಗಳೂರು, ನವೆಂಬರ್ 03: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೇಮಕಾತಿಯೊಂದಕ್ಕೆ ತಯಾರಿಯನ್ನು ನಡೆಸಿದೆ. ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿಗೆ ವಿರೋಧವೂ ವ್ಯಕ್ತವಾಗುತ್ತಿದೆ. ಸಹಾಯಕ ಇಂಜಿನಿಯರ್ ಸೇರಿದಂತೆ ಒಟ್ಟು 345 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ಬಿಡಿಎ ಮುಂದಾಗಿದೆ.
28 ಸಹಾಯಕ ಇಂಜಿನಿಯರ್ ಸೇರಿದಂತೆ ಒಟ್ಟು 345 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಬಿಡಿಎ ತಯಾರಿ ನಡೆಸಿದೆ. ಬಿಡಿಎ ನೇಮಕಾತಿ ನಿಯಮಗಳಂತೆ ಗುತ್ತಿಗೆ ಅಥವ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಕಾಯಂ ನೇಮಕಾತಿ ಪ್ರಕ್ರಿಯೆಗೆ ಹಲವು ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ.

ಸಹಾಯಕ ಇಂಜಿನಿಯರ್, ವಕೀಲರು, ಹಣಕಾಸು ವಿಭಾಗದ ಸಲಹೆಗಾರ, ಕಿರಿಯ ಸಲಹೆಗಾರ, ಪ್ರಥಮ ದರ್ಜೆ ಸಹಾಯಕ, ಮಾರುಕಟ್ಟೆ ಸಹಾಯಕ, ಸೆಕ್ಯುರಿಟಿ ಸೂಪರ್ ವೈಸರ್, ಸೆಕ್ಯುರಿಟಿ ಗಾರ್ಡ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ವೇತನ ವಿವರಗಳು: 28 ಸಹಾಯಕ ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಹುದ್ದೆಗೆ 45 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ. ವಕೀಲರ ಹುದ್ದೆ 7, ಕಂದಾಯ ವಿಷಯಗಳ ಸಲಹೆಗಾರ 1, ಹಣಕಾಸು ವಿಭಾಗದ ಹಿರಿಯ ಸಲಹೆಗಾರ ಗ್ರೇಡ್-1, 2 ಇಬ್ಬರು, ಕಿರಿಯ ಸಲಹೆಗಾರ ಗ್ರೇಡ್ - 1, 2 ಇಬ್ಬರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಸಲಹೆಗಾರ, ಕಿರಿಯ ಸಲಹೆಗಾರ ತಲಾ 1 ಹುದ್ದೆ, 9 ಪ್ರಥಮ ದರ್ಜೆ ಸಹಾಯಕ ಹುದ್ದೆ, 2 ಮಾರುಕಟ್ಟೆ ಸಹಾಯಕ ಹುದ್ದೆ, 9 ಸೆಕ್ಯುರಿಟಿ ಸೂಪರ್ವ ವೈಸರ್, 219 ಸೆಕ್ಯುರಿಟಿ ಗಾರ್ಡ್, ಸೆಕ್ಯುರಿಟಿ ದಳದ ಚಾಲಕ 7, ಡಿ ಗುಂಪಿನ 56 ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲು ಬಿಡಿಎ ತೀರ್ಮಾನಿಸಿದೆ.
ಗುತ್ತಿಗೆ ಆಧಾರದ ನೇಮಕಾತಿಗೆ ಬಿಡಿಎ ಪ್ರತಿವರ್ಷ 9.91 ಕೋಟಿ ರೂ.ಗಳನ್ನು ಖರ್ಚು ಮಾಡಲಿದೆ. ಭದ್ರತಾ ಸಿಬ್ಬಂದಿ ಮತ್ತು ಡಿ ಗುಂಪಿನ ಹುದ್ದೆಗಳಿಗೆ ಮಾತ್ರ ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳಿವೆ. ಅಧಿಕಾರಿ ಮತ್ತು ಸಿಬ್ಬಂದಿಯನ್ನು ಒದಗಿಸುವ ಸಂಸ್ಥೆ ಪ್ರತಿ ಹುದ್ದೆಗೆ ತಿಂಗಳಿಗೆ 479 ರೂ. ಸೇವಾ ಶುಲ್ಕವಾಗಿ ಪಡೆಯಲಿದೆ.
ಸಹಾಯಕ ಇಂಜಿನಿಯರ್ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಬಾರದು ಎಂದು ಒತ್ತಾಯಿಸಲಾಗುತ್ತಿದೆ. ಯಾವುದೇ ಕಾಮಗಾರಿಯಲ್ಲಿ ಲೋಪ ಉಂಟಾದರೆ ಗುತ್ತಿಗೆ ಆಧಾರದ ಮೇಲೆ ನೇಮಗೊಂಡ ಇಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯನೇಮಕ ಮಾಡಬಾರದು ಎಂದು ಆಗ್ರಹಿಸಲಾಗಿದೆ.
ಕಾಯಂ ನೇಮಕಾತಿ ಮಾಡಿಕೊಳ್ಳಲು ಹಲವು ಪ್ರಕ್ರಿಯೆಗಳಿವೆ. ಅಲ್ಲದೇ ಪ್ರಾಧಿಕಾರ ಇಂತಹ ಸಿಬ್ಬಂದಿಗೆ ಹಲವು ಸೌಲಭ್ಯಗಳನ್ನು ನೀಡಬೇಕಾಗುತ್ತದೆ. ಆದರಿಂದ ಮುಕ್ತಿ ಪಡೆಯಲು ಪ್ರಾಧಿಕಾರ ಗುತ್ತಿಗೆ, ಹೊರ ಗುತ್ತಿಗೆಯ ಮೊರೆ ಹೋಗುತ್ತದೆ. ಸರ್ಕಾರದ ವಿವಿಧ ಇಲಾಖೆಗಳಲ್ಲಿಯೂ ಈ ಮಾದರಿ ನೇಮಕಾತಿ ನಡೆಯುತ್ತಿದೆ.












Click it and Unblock the Notifications