BBMP Jobs: ಪೌರ ಕಾರ್ಮಿಕರ ನೇಮಕಾತಿಗೆ ಹೊಸ ವ್ಯವಸ್ಥೆ ಶೀಘ್ರ
ಬೆಂಗಳೂರು ಮೇ 22: ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಯ ಮಾಹಿತಿಗಾಗಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಡ್ಯಾಶ್ ಬೋರ್ಡ್ ರಚಿಸುವ ಬೇಡಿಕೆ ಸಲ್ಲಿಕೆಯಾಗಿದೆ. ಪೌರ ಕಾರ್ಮಿಕರ ನೇಮಕಾತಿಗೆ ಸಂಬಂಧಿಸಿದಂತೆ ಸಿಂಧುತ್ವ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿದೆ. ಇದಕ್ಕೆ ಅಗತ್ಯ ಹೊಸ ವ್ಯವಸ್ಥೆಯನ್ನು ಶೀಘ್ರವೇ ಪೂರೈಕೆ ಮಾಡುವುದಾಗಿ ಸರ್ಕಾರ ತಿಳಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪೌರಕಾರ್ಮಿಕರ ನೇಮಕಾತಿ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿಯ ಮಾಹಿತಿಯನ್ನು ಪಡೆಯಲು ಒಂದು ಡ್ಯಾಶ್ ಬೋರ್ಡ್ ಅವಶ್ಯವಿದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸೇವಾ ಸಿಂಧು ಪೋರ್ಟಲ್ ನಲ್ಲಿ ನೇಮಕಾತಿ ಪ್ರಕ್ರಿಯೆಯ ಪ್ರಸ್ತುತ ಸ್ಥಿತಿ ಮಾಹಿತಿ ಪಡೆಯಲು ಡ್ಯಾಶ್ ಬೋರ್ಡ್ ಒದಗಿಸಿಕೊಡಲು ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ (EDCS) ನಿರ್ದೇಶಕರಿಗೆ ಕೋಡಲಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಈ ವ್ಯವಸ್ಥೆಯನ್ನು ಮಾಡಿಕೊಡಲಾಗುವುದೆಂದು ತಿಳಿಸಿದ್ದಾರೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

12,692 ಪೌರ ಕಾರ್ಮಿಕರ ನೇಮಕಾತಿ
ಒಟ್ಟು 12,692 ಪೌರಕಾರ್ಮಿಕರನ್ನು ನೇಮಕಾತಿ ಮಾಡಲಾಗುತ್ತಿದ್ದು, ಅದರಲ್ಲಿ 6,000 ಪೌರಕಾರ್ಮಿಕರು ಸಾಮಾನ್ಯ ವರ್ಗದಡಿ ನೇಮಕವಾಗುತ್ತಿದ್ದಾರೆ. ಉಳಿದ 6,692 ಪೌರ ಕಾರ್ಮಿಕರಲ್ಲಿ ಇದುವರೆಗೂ 700 ಪೌರಕಾರ್ಮಿಕರ ಸಿಂಧುತ್ವ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಲಾಗಿದೆ.
ಇದೆ ಮೇ ತಿಂಗಳಾಂತ್ಯದಲ್ಲಿ 5,000 ಪೌರಕಾರ್ಮಿಕರ ಸಿಂಧುತ್ವ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಲು ಪಾಲಿಕೆಯು ಗುರಿ ಹೊಂದಿದೆ. ಈ ಮೇಲ್ಕಂಡ ವಿಷಯದಲ್ಲಿ ತಿಳಿಸಿರುವಂತೆ ಡ್ಯಾಶ್ ಬೋರ್ಡ್ ಒದಗಿಸಿದ ನಂತರ ಆದಷ್ಟು ಬೇಗ ಸಿಂಧುತ್ವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ಅವರು ತಿಳಿಸಿದ್ದಾರೆ.
ಮಾಸ್ಟರ್ ತರಬೇತಿದಾರ ನೇಮಕ
ಬಿಬಿಎಂಪಿ ವ್ಯಾಪ್ತಿಯಲ್ಲಿನ ಒಳಮಿಸಲಾತಿ ಸಮೀಕ್ಷೆ ಸಂಬಂಧ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕಾಗಿ ಮಾಸ್ಟರ್ ತರಬೇತಿದಾರರನ್ನು ನೇಮಿಸಲಾಗಿದೆ. ನ್ಯಾಯಮೂರ್ತಿಗಳಾದ ಎಚ್.ಎನ್.ನಾಗಮೋಹನ್ ದಾಸ್, ಏಕ ಸದಸ್ಯ ಆಯೋಗದ ವರದಿಯಂತೆ ಪರಿಶಿಷ್ಟ ಜಾತಿಯ/ಉಪ ಜಾತಿಗಳ ಒಳ ಮೀಸಲಾತಿ ಕುರಿತು ಸಮೀಕ್ಷೆಯು ಚಾಲ್ತಿಯಲ್ಲಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿನ ಒಳಮೀಸಲಾತಿ ಸಮೀಕ್ಷೆ ಸಂಬಂಧ ಸಾರ್ವಜನಿಕರ ಸಮಸ್ಯೆ ಪರಿಹಾರಕ್ಕಾಗಿ ಮಾಸ್ಟರ್ ತರಬೇತಿದಾರರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಅವರನ್ನು ಕೇಂದ್ರ ಕಛೇರಿಯ ಕಂಟ್ರೋಲ್ ರೂಮ್‌ನಲ್ಲಿ ಕಾರ್ಯನಿರ್ವಹಿಸಲು ನಿಯೋಜಿಸಿ ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ಅವರು ಆದೇಶಿಸಿದ್ದಾರೆ.
ಸಾರ್ವಜನಿಕರು ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷೆಯ ಬಗ್ಗೆ ಯಾವುದೇ ಮಾಹಿತಿ ಬೇಕಾದಲ್ಲಿ ಬಿಬಿಎಂಪಿ ಸಹಾಯವಾಣಿ ಸಂಖ್ಯೆ 1533 ಕ್ಕೆ ಕರೆ ಮಾಡಿದ್ದಲ್ಲಿ ಪಾಲಿಕೆ ವತಿಯಿಂದ ನೇಮಿಸಿರುವ ಮಾಸ್ಟರ್ ತರಬೇತಿದಾರರು ಮಾಹಿತಿ ನೀಡಲಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳುವಂತೆ ಬಿಬಿಎಂಪಿಯು ಮನವಿ ಮಾಡಿದೆ.












Click it and Unblock the Notifications