ಭಾರತೀಯ ರೈಲ್ವೆ ಇಲಾಖೆಯಲ್ಲಿ ಬರೋಬ್ಬರಿ 2.74 ಲಕ್ಷ ಉದ್ಯೋಗ ಖಾಲಿ
ಅಹಮದಾಬಾದ್, ಜೂನ್ 29: ಭಾರತೀಯ ರೈಲ್ವೇಯಲ್ಲಿ ಸುಮಾರು 2.74 ಲಕ್ಷ ಹುದ್ದೆಗಳು ಜೂನ್ 2023 ರ ಹೊತ್ತಿಗೆ ಖಾಲಿಯಾಗಿವೆ. ಅವುಗಳಲ್ಲಿ 1.7 ಲಕ್ಷಕ್ಕೂ ಹೆಚ್ಚು ಸುರಕ್ಷತಾ ವರ್ಗದಲ್ಲಿವೆ ಎಂದು ಆರ್‌ಟಿಐ ಅರ್ಜಿಯೊಂದಕ್ಕೆ ಸಿಕ್ಕಿರುವ ಮಾಹಿತಿ ಬಹಿರಂಗಪಡಿಸಿದೆ.
ಕೇಂದ್ರ ಸರ್ಕಾರಿ, ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಬಯಸುತ್ತಿರುವ ಲಕ್ಷಾಂತರ ಆಕಾಂಕ್ಷಿಗಳಿಗೆ ಇದು ಸಿಹಿಸುದ್ದಿಯಾಗಿದೆ. ಮಧ್ಯಪ್ರದೇಶ ಮೂಲದ ಆರ್‌ಟಿಐ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರು ಸಲ್ಲಿಸಿದ ಪ್ರಶ್ನೆಗೆ ಉತ್ತರಿಸಿದ ರೈಲ್ವೇ 1 ಹಂತ ಸೇರಿದಂತೆ ಗ್ರೂಪ್ ಸಿಯಲ್ಲಿ 2,74,580 ಹುದ್ದೆಗಳು ಖಾಲಿ ಇವೆ ಎಂದು ಹೇಳಿದೆ.

ರೈಲ್ವೆ ಇಲಾಖೆಯ ಸುರಕ್ಷತಾ ವಿಭಾಗದಲ್ಲಿ ಒಟ್ಟು 1,77,924 ಹುದ್ದೆಗಳು ಖಾಲಿ ಇದೆ ಎಂದು ತಿಳಿದು ಬಂದಿದೆ. 01.06.2023 (ತಾತ್ಕಾಲಿಕ) ನಂತೆ ಭಾರತೀಯ ರೈಲ್ವೆಯಲ್ಲಿ ಗ್ರೂಪ್-ಸಿ (ಲೆವೆಲ್-1 ಸೇರಿದಂತೆ) ಖಾಲಿ ಇರುವ ಒಟ್ಟು ನಾನ್-ಗೆಜೆಟೆಡ್ ಹುದ್ದೆಗಳ ಸಂಖ್ಯೆ 2,74,580 ಎಂದು ಸಚಿವಾಲಯವು ಪ್ರತಿಕ್ರಿಯೆಯಾಗಿ ತಿಳಿಸಿದೆ.
"01.06.2023 ರಂತೆ ಈ ಕಚೇರಿಯಲ್ಲಿ ಲಭ್ಯವಿರುವಂತೆ (ತಾತ್ಕಾಲಿಕ) ಭಾರತೀಯ ರೈಲ್ವೇಯಲ್ಲಿ ಗ್ರೂಪ್-ಸಿ (ಲೆವೆಲ್-1 ಸೇರಿದಂತೆ) ಸುರಕ್ಷತಾ ವರ್ಗದಲ್ಲಿ ಮಂಜೂರಾದ ರೋಲ್ ಮತ್ತು ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ 982037, 804113 & 177924 ಎಂದು RTI ಅರ್ಜಿಗೆ ಉತ್ತರ ಹೇಳಿದೆ. ಡಿಸೆಂಬರ್ 2022 ರಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆಯಲ್ಲಿ 3.12 ಲಕ್ಷ ಗೆಜೆಟೆಡ್ ಅಲ್ಲದ ಹುದ್ದೆಗಳು ಖಾಲಿ ಇವೆ ಎಂದು ಸಂಸತ್ತಿಗೆ ತಿಳಿಸಿದ್ದರು.
ಮಂಗಳವಾರ ಮುಂಜಾನೆ ಪ್ರಧಾನಿ ಮೋದಿ ಅವರು ಪ್ರವಾಸಿ ಪಟ್ಟಣಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ನಗರಗಳನ್ನು ಸಂಪರ್ಕಿಸುವ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದ್ದರು. ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶಕ್ಕೆ ವರ್ಷಾಂತ್ಯದ ವೇಳೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಮೋದಿ ಅವರು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ದೇಶದ ವಿವಿಧ ಐದು ರೈಲುಗಳಿಗೆ ಏಕಕಾಲಿಕ್ಕೆ ಚಾಲನೆ ನೀಡಿದರು.
ಈ ವೇಳೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ಮಧ್ಯಪ್ರದೇಶದ ರಾಜ್ಯಪಾಲ ಮಂಗುಭಾಯ್ ಪಟೇಲ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.












Click it and Unblock the Notifications