ಯಾದಗಿರಿಯಲ್ಲಿ ಕೆಲಸ ಖಾಲಿ ಇದೆ; ಏಪ್ರಿಲ್ 10ರೊಳಗೆ ಅರ್ಜಿ ಹಾಕಿ
ಯಾದಗಿರಿ, ಮಾರ್ಚ್ 29: ಯಾದಗಿರಿ ಜಿಲ್ಲೆಯಲ್ಲಿ 'ಗ್ರಾಮ ಕಾಯಕ ಮಿತ್ರ' ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 10ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಡಿ 2020-21ನೇ ಸಾಲಿನಲ್ಲಿ 'ಗ್ರಾಮ ಕಾಯಕಮಿತ್ರ' ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಗೌರವಧನದ ಆಧಾರದಲ್ಲಿ ಹುದ್ದೆ ಭರ್ತಿ ಮಾಡುತ್ತಿದ್ದು, ಅರ್ಹ ಮಹಿಳೆಯರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಶರ್ಮಾ ಈ ಕುರಿತು ಪ್ರಕಟಣೆಯನ್ನು ಹೊರಡಿಸಿದ್ದಾರೆ. ಜಿಲ್ಲೆಯ ಒಟ್ಟು 79 ಗ್ರಾಮ ಪಂಚಾಯತಿಗಳಲ್ಲಿ 'ಗ್ರಾಮ ಕಾಯಕ ಮಿತ್ರ' ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಅರ್ಜಿಗಳನ್ನು ಸಲ್ಲಿಸುವ ಮಹಿಳಾ ಅಭ್ಯರ್ಥಿಗಳು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಕಳೆದ ಜನವರಿ 1 ರಿಂದ ಅನ್ವಯಿಸುವಂತೆ ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮನರೆಗಾ ಯೋಜನೆಯಡಿ ಕ್ರಿಯಾಶೀಲ ಉದ್ಯೋಗ (ಜಾಬ್) ಕಾರ್ಡ್ ಹೊಂದಿರುವಬೇಕು.
ಕಳೆದ ಮೂರು ವರ್ಷಗಳಲ್ಲಿ ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೆಲಸಗಾರರಾಗಿ ಕೆಲಸ ನಿರ್ವಹಿಸಿರಬೇಕು. ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸಿಸುವ 45 ವರ್ಷದೊಳಗಿನ ಅರ್ಹರು ಅರ್ಜಿಯನ್ನು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಬೇಕು.
ಅರ್ಜಿಗಳನ್ನು ಸಲ್ಲಿಸಲು 2021ರ ಏಪ್ರಿಲ್ 10 ಕೊನೆಯ ದಿನವಾಗಿದೆ. ಆಯ್ಕೆಯಾದ ಕಾಯಕ ಮಿತ್ರರಿಗೆ ಮಾಸಿಕ 6,000 ರೂ. ಮತ್ತು ಕಾರ್ಯನಿರ್ವಹಣೆ ಆಧಾರದ ಮೇಲೆ 5,000 ಪ್ರೋತ್ಸಾಹಧನ ನೀಡಲಾಗುವದು.
ಆಸಕ್ತರು ಹೆಚ್ಚಿನ ಮಾಹಿತಿಗೆ ಆಯಾ ಗ್ರಾಮ ಪಂಚಾಯತಿ ಕಚೇರಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications