ಕಲಬುರಗಿ; ಕೆಲಸ ಖಾಲಿ ಇದೆ, ಏ. 12ರೊಳಗೆ ಅರ್ಜಿ ಹಾಕಿ
ಕಲಬುರಗಿ, ಏಪ್ರಿಲ್ 01; ಕಲಬುರಗಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ 'ಗ್ರಾಮ ಕಾಯಕ ಮಿತ್ರ' ಹುದ್ದೆಗಳ ಭರ್ತಿಗೆ ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಮಾತ್ರ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ 2021ರ ಏಪ್ರಿಲ್ 12.
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ 'ಗ್ರಾಮ ಕಾಯಕ ಮಿತ್ರ' ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಮಹಿಳಾ ಅಭ್ಯರ್ಥಿಗಳ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ.
ಅಭ್ಯರ್ಥಿಯು ದಿನಾಂಕ 1/1/2021ಕ್ಕೆ ಅನ್ವಯಿಸುವಂತೆ ತಾವು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಕ್ರಿಯಾಶೀಲ ಜಾಬ್ ಕಾರ್ಡ್ ಹೊಂದಿರಬೇಕು. ವಯೋಮಿತಿ 1/1/2021ಕ್ಕೆ ಅನ್ವಯಿಸುವಂತೆ 45 ವರ್ಷ.

ಅರ್ಜಿ ಸಲ್ಲಿಸುವವರು ಚೆನ್ನಾಗಿ ಓದು ಮತ್ತು ಬರಹ ಬಲ್ಲವರಾಗಿರಬೇಕು. ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ಕಳೆದ ಮೂರು ವರ್ಷಗಳಲ್ಲಿ (2018-19, 2019-20 ಮತ್ತು 2020-21) ಕನಿಷ್ಠ ಎರಡು ವರ್ಷಗಳು ಈ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು.
2020-21ನೇ ಸಾಲಿನಲ್ಲಿ 20 ಸಾವಿರ ಮಾನವ ದಿನಗಳ ಸೃಜನೆ ಮಾಡಿದ ಗ್ರಾಮ ಪಂಚಾಯತಗಳಲ್ಲಿ ಮಾತ್ರ 'ಗ್ರಾಮ ಕಾಯಕ ಮಿತ್ರ'ರನ್ನು ನೇಮಕ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 6,000 ರೂ.ಗಳ ಗೌರವಧನ ನೀಡಲಾಗುತ್ತದೆ. ಕಾರ್ಯನಿರ್ವಹಣೆಯನ್ನು ಆಧರಿಸಿ 5,000 ರೂ.ಗಳ ವರೆಗೆ ಪ್ರೋತ್ಸಾಹ ಧನ ಪಡೆಯಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಣಗಳನ್ನು ಹೊಂದಿರಬೇಕು. ಈ ಹುದ್ದೆಯನ್ನು ಒಂದು ವರ್ಷದ ಅವಧಿಗೆ ಆಯ್ಕೆ ಮಾಡಲಾಗುವುದು.
ನಂತರ ಗ್ರಾಮ ಪಂಚಾಯಿತಿಗಳ ಮಾನವ ದಿನಗಳ ಸೃಜನೆ, ದಾಖಲಾತಿಗಳ ನಿರ್ವಹಣೆ ಸೇರಿದಂತೆ ನಿಗದಿಪಡಿಸಲಾದ ಜವಾಬ್ದಾರಿಗಳಿಗೆ ಅನುಗುಣವಾಗಿ ಅವರ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಿ, ಮುಂದುವರಿಸುವ ಅಥವಾ ತೆಗೆದು ಹಾಕುವ ಬಗ್ಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ತೀರ್ಮಾನ ಕೈಗೊಳ್ಳಲಿದೆ.
ಅರ್ಹ ಅಭ್ಯರ್ಥಿಗಳು ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತಿಗಳಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ 2021ರ ಏಪ್ರಿಲ್ 12. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ತಮ್ಮ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ಒನ್ ಇಂಡಿಯಾ ಕನ್ನಡ ಟೆಲಿಗ್ರಾಂ ಚಾನಲ್ ಸೇರಿ












Click it and Unblock the Notifications