ಯಾದಗಿರಿಯಲ್ಲಿ ಕೆಲಸ ಖಾಲಿ ಇದೆ; 8 ಹುದ್ದೆಗೆ ಅರ್ಜಿ ಹಾಕಿ
ಯಾದಗಿರಿ, ಮೇ 18 : ಯಾದಗಿರಿ ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ 8 ಬಿಎಫ್‌ಟಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಮೇ 30ರ ಸಂಜೆ 5.30ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ)ಯಡಿ ಯಾದಗಿರಿ ಜಿಲ್ಲೆಯಲ್ಲಿ 8 ಬಿಎಫ್‍ಟಿ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು 45 ವರ್ಷದ ಒಳಗಿನವರಾಗಿದ್ದು, ಮನರೇಗಾ ಯೋಜನೆಯಡಿ ಸಕ್ರಿಯ ಕೆಲಸಗಾರರಾಗಿರಬೇಕು. ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು. ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಅರ್ಜಿ ಹಾಕುವವರು ಈ ಅಧಿಸೂಚನೆಗೂ ಮುನ್ನ ಕಳೆದ ಎರಡು ವರ್ಷಗಳಲ್ಲಿ ಕನಿಷ್ಠ 25 ದಿನಗಳಿಗೆ ಕಡಿಮೆ ಇಲ್ಲದಷ್ಟು ಕೂಲಿಕಾರರಾಗಿ ಕೆಲಸ ಮಾಡಿರಬೇಕು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮೇ 30ರಂದು ಸಾಯಂಕಾಲ 5.30ರ ಒಳಗಾಗಿ ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಮನರೇಗಾ ಶಾಖೆಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಯ ಅಗತ್ಯವಿದ್ದರೆ 08473-253758 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.












Click it and Unblock the Notifications