Agniveer recruitment; ಉಡುಪಿಯಲ್ಲಿ ಜುಲೈ 17ರಿಂದ ರ್‍ಯಾಲಿ
ಉಡುಪಿ, ಜುಲೈ 13; ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಭಾರತೀಯ ಸೇನೆಯ ಅಗ್ನಿಪಥ್ ಸೇನಾ ನೇಮಕಾತಿ ರ್‍ಯಾಲಿ ಜುಲೈ 17 ರಿಂದ 25ರ ತನಕ ನಡೆಯಲಿದೆ. ಪ್ರತಿದಿನ ಸುಮಾರು 1000 ಮಂದಿ ಅಭ್ಯರ್ಥಿಗಳು ಆಗಮಿಸುವ ನಿರೀಕ್ಷೆ ಇದೆ.
ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ್‍ಯಾಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಎಲ್ಲ ರೀತಿಯ ಅಗತ್ಯ ಸಿದ್ಧತೆಗಳನ್ನು ಕೈಗೊಂಡು, ಅಭ್ಯರ್ಥಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ. ಎನ್. ಸೂಚನೆ ನೀಡಿದ್ದಾರೆ.

ಮಣಿಪಾಲದ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇನಾ ನೇಮಕಾತಿ ರ್‍ಯಾಲಿ ಕುರಿತು ವೀಣಾ ವಿ. ಎನ್. ಸಭೆಯನ್ನು ನಡೆಸಿದರು. ರ್‍ಯಾಲಿಗೆ ಕೈಗೊಳ್ಳಬೇಕಾದ ಸಿದ್ಧತೆಗಳ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಿ, ಹಲವು ಸೂಚನೆಗಳನ್ನು ಕೊಟ್ಟರು.
ಎಷ್ಟು ಜನರ ನೋಂದಣಿ; ಈ ಸೇನಾ ನೇಮಕಾತಿ ರ್‍ಯಾಲಿಗೆ ಈಗಾಗಲೇ ಆನ್‌ಲೈನ್ ಮೂಲಕ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಬಾಗಲಕೋಟೆ, ವಿಜಯಪುರ, ಧಾರವಾಡ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಗದಗ, ಹಾವೇರಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ರ್‍ಯಾಲಿಗೆ ಇದುವರೆಗೆ 6,800ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.
ನೇಮಕಾತಿ ರ್‍ಯಾಲಿಗೆ ಪ್ರತಿದಿನ ಸುಮಾರು 1000 ಮಂದಿ ಆಗಮಿಸಲಿದ್ದು, ಇವರಿಗೆ ಮೂಲಭೂತ ಅವಶ್ಯಕತೆಯಾಗಿ ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕ್ರೀಡಾಂಗಣದ ಸುತ್ತಲೂ ಸ್ಚಚ್ಛತೆಯನ್ನು ಕಾಪಾಡಬೇಕು. ಸಾಕಷ್ಟು ಸಂಖ್ಯೆಯ ಮೊಬೈಲ್ ಶೌಚಾಲಯಗಳ ವ್ಯವಸ್ಥೆಯನ್ನು ಮಾಡಬೇಕು. ಪ್ರತಿದಿನ ಈ ಬಗ್ಗೆ ಪರಿಶೀಲಿಸುವಂತೆ ಉಡುಪಿ ನಗರಸಭೆಯ ಪೌರಾಯುಕ್ತರಿಗೆ ಸೂಚನೆ ಕೊಡಲಾಗಿದೆ.
ರ್‍ಯಾಲಿಗೆ ಆಗಮಿಸುವ ಅಭ್ಯರ್ಥಿಗಳಲ್ಲಿ ನೂಕು ನುಗ್ಗಲು ಉಂಟಾಗದಂತೆ ಹಾಗೂ ವಾಹನಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗದಂತೆ ಮತ್ತು ರಾತ್ರಿ ವೇಳೆಯಲ್ಲಿ ರಸ್ತೆ ಬದಿಗಳಲ್ಲಿ ಅಭ್ಯರ್ಥಿಗಳು ಮಲಗದಂತೆ, ಕ್ರೀಡಾಂಗಣ ಸುತ್ತಮುತ್ತ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸುವಂತೆ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ.
ಮೆಸ್ಕಾಂ ರ್‍ಯಾಲಿ ನಡೆಯುವ ಕ್ರೀಡಾಂಗಣಕ್ಕೆ ನಿರಂತರ ವಿದ್ಯುತ್ ಸರಬರಾಜು ಮಾಡಬೇಕು ಮತ್ತು ಅಪಾಯಕಾರಿ ಮರದ ಕೊಂಬೆಗಳು ಮತ್ತು ವಿದ್ಯುತ್ ತಂತಿಗಳಿದ್ದಲ್ಲಿ ಸೂಕ್ತ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು. ಬಿಎಸ್‌ಎನ್‌ಎಲ್ ವತಿಯಿಂದ ಸೇನಾ ಕಾರ್ಯಗಳನ್ನು ನಿರ್ವಹಿಸಲು ಇಂಟರ್ನೆಟ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ಕೊಡಲಾಗಿದೆ.
ನೇಮಕಾತಿ ರ್‍ಯಾಲಿ ಸಂದರ್ಭದಲ್ಲಿ ಭಾಗವಹಿಸುವ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳ ನೈಜತೆಯನ್ನು ಪರಿಶೀಲನೆ ನಡೆಸಲು ಶಿಕ್ಷಣ ಇಲಾಖೆಯ ಸಿಬ್ಬಂದಿಗಳನ್ನು ನಿಯೋಜಿಸಬೇಕು. ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮತ್ತು ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳ ತುರ್ತು ಆರೋಗ್ಯ ಸಹಾಯಕ್ಕಾಗಿ ಆಂಬುಲೆನ್ಸ್ ಒಳಗೊಂಡ ವೈದ್ಯಕೀಯ ಸಿಬ್ಬಂದಿಗಳನ್ನು ನಿಯೋಜಿಸುವಂತೆ ಸೂಚಿಸಲಾಗಿದೆ.
ಈ ನೇಮಕಾತಿ ರ್‍ಯಾಲಿಗೆ ಸಂಬಂಧಿಸಿದಂತೆ ಏಪ್ರಿಲ್ 17 ರಿಂದ ನೋಂದಣಿ ನಡೆಯುತ್ತಿದೆ. ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್‌ಮೆನ್, ಅಗ್ನಿವೀರ್ ಕ್ಲಕ್/ ಸ್ಟೋರ್ ಕೀಪರ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ ಪತ್ರಗಳನ್ನು ಈ ಮೇಲ್ ಮೂಲಕ ಕಳುಹಿಸಲಾಗಿದೆ.












Click it and Unblock the Notifications