KPSC; 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ, ಅರ್ಜಿ ಸಲ್ಲಿಕೆ ದಿನಾಂಕ ಪ್ರಕಟ
ಬೆಂಗಳೂರು, ಜುಲೈ 07: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 384 ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ನೇಮಕಾತಿಯನ್ನು ನಡೆಸುತ್ತಿದೆ. ನೇಮಕಾತಿಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡುವ ಅಂತಿಮ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಈಗಾಗಲೇ ಈ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ದಿನಾಂಕ ಸಹ ಪ್ರಕಟಿಸಲಾಗಿದೆ.
ಈ ಕುರಿತು ಡಾ. ರಾಕೇಶ್ ಕುಮಾರ್ ಕೆ. ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಆದೇಶ ದಿನಾಂಕ 21/06/2024ರನ್ವಯ ಆಯೋಗವು 2023-243ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಗೆ ಸಂಬಂಧಿಸಿದಂತೆ ಪ್ರಕಟಿಸಲಾದ ಅಧಿಸೂಚನೆ ದಿನಾಂಕ 26/02/2024ಕ್ಕೆ ತಿದ್ದುಪಡಿ ಅಧಿಸೂಚನೆಯನ್ನು ದಿನಾಂಕ 06/07/2024ಅನ್ನು ಪ್ರಕಟಿಸಲಾಗಿದೆ ಎಂದು ಹೇಳಿದ್ದಾರೆ.

2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಗೆ ಅರ್ಜಿ ಸಲ್ಲಿಸಲು ದಿನಾಂಕ 06/07/2024 ರಿಂದ 21/07/2024ರವರೆಗೆ ವಿಶೇಷ ಅವಕಾಶವನ್ನು ಕಲ್ಪಿಸಲಾಗಿರುತ್ತದೆ ಹಾಗೂ ಸದರಿ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯನ್ನು ದಿನಾಂಕ 25/08/2024ರಂದು ನಡೆಸಲು ಮರು ನಿಗದಿಪಡಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ವಿಶೇಷ ಸೂಚನೆ: ಗೆಜೆಟೆಡ್ ಪ್ರೊಬೇಷನರ್ 2017-18ನೇ ಸಾಲಿನ ಅಭ್ಯರ್ಥಿಗಳು ಈಗಾಗಲೇ ಕೆ.ಪಿ.ಎಸ್.ಸಿ. ಉದ್ಯೋಗ ಸಾಫ್ಟ್‌ವೇರ್‌ನಲ್ಲಿ (https://kpsconline.karnataka.gov.in) OTR ಅನ್ನು ರಚಿಸಿದ್ದರೆ, ಅವರು ನೇರವಾಗಿ ಲಾಗ್‌ಇನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳು ಈ ಮೊದಲು OTRಅನ್ನು ರಚಿಸಿರದಿದ್ದರೆ ಅವರು ಕೆ.ಪಿ.ಎಸ್.ಸಿ. ಉದ್ಯೋಗ ಸಾಫ್ಟ್‌ವೇರ್‌ನಲ್ಲಿ OTR ಅನ್ನು ರಚಿಸಿ, ನಂತರ ಅರ್ಜಿ ಸಲ್ಲಿಸಬಹುದು ಎಂದು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗಿದೆ.
ಕೆಪಿಎಸ್‌ಸಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆದರೆ ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ನಮಗೂ ಅವಕಾಶ ಮಾಡಿಕೊಡಬೇಕು ಎಂದು 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳು ಸಹ ಮನವಿ ಮಾಡಿದ್ದರು.
ಸರ್ಕಾರ ಈ ಮನವಿಗೆ ಒಪ್ಪಿಗೆ ನೀಡಿತ್ತು. 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡಲಾದೆ.
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ದಿನಾಂಕ 06/07/2024 ರಿಂದ 21/07/2024ರವರೆಗೆ ಅರ್ಜಿ ಸಲ್ಲಿಕೆ ಮಾಡಲು ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ಈ ಹಿನ್ನಲೆಯಲ್ಲಿ ಈ ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಸಹ ಮುಂದೂಡಿಕೆ ಮಾಡಲಾಗಿದೆ.
ಈ ಮೊದಲು ದಿನಾಂಕ 21/07/2024ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸುವುದಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಈಗ ಅರ್ಜಿ ಸಲ್ಲಿಕೆಗೆ ಹೆಚ್ಚುವರಿ ಅವಕಾಶ ನೀಡಿರುವುದರಿಂದ ದಿನಾಂಕ 25/08/2024ರಂದು ಪರೀಕ್ಷೆ ನಡೆಸಲಾಗುತ್ತದೆ, ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ.
2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ವಿಶೇಷ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಕೆ ದಿನಾಂಕವನ್ನು ಪುನಃ ವಿಸ್ತರಣೆ ಮಾಡುವುದಿಲ್ಲ.












Click it and Unblock the Notifications