KAS Recruitment: 384 ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ, ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿ
ಬೆಂಗಳೂರು, ಜುಲೈ 06: ಕರ್ನಾಟಕ ಲೋಕಸೇವಾ ಆಯೋಗದ 384 ಗೆಜೆಟೆಡ್ ಪ್ರೊಬೇಷನರಿ (ಕೆಎಎಸ್) ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಘೋಷಣೆ ಮಾಡಿದೆ. ಕೆಲವು ದಿನಗಳ ಹಿಂದೆ ಪರೀಕ್ಷೆಯನ್ನು ಮುಂದೂಡಲಾಗಿತ್ತು, ಈಗ ಹೊಸ ವೇಳಾಪಟ್ಟಿಯನ್ನು ಘೋಷಣೆ ಮಾಡಿದೆ.
ಈ ಕುರಿತು ಕೆಪಿಎಸ್‌ಸಿ ಕಾರ್ಯದರ್ಶಿ ಡಾ. ರಾಕೇಶ್ ಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ. 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 25/8/2024ರ ಭಾನುವಾರ ಪರೀಕ್ಷೆಗಳು ನಡೆಯಲಿವೆ.

ವೇಳಾಪಟ್ಟಿಯ ಮಾಹಿತಿ ಪ್ರಕಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ಪತ್ರಿಕೆ-1 ಮತ್ತು ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2 ಪರೀಕ್ಷೆಗಳು ನಡೆಯಲಿವೆ. ನೇಮಕಾತಿಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಿರುವ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ಆರಂಭಿಸಬಹುದು.
ಈ ಮೊದಲು ಕೆಪಿಎಸ್‌ಸಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ 'ಎ' ಮತ್ತು 'ಬಿ' ವೃಂದದ ಒಟ್ಟು 384 ಹುದ್ದೆಗಳಿಗೆ ದಿನಾಂಕ 21/07/2024ರಂದು ಪೂರ್ವಭಾವಿ ಪರೀಕ್ಷೆಯನ್ನು ನಡೆಸುವುದಾಗಿ ಹೇಳಿತ್ತು. ಆದರೆ ಬಳಿಕ ದಿನಾಂಕ 25/08/2024ರಂದು ಪರೀಕ್ಷೆ ಮರು ನಿಗದಿಪಡಿಸಿತ್ತು. ಈಗ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಸರ್ಕಾರದ ಆದೇಶದ ಹಿನ್ನಲೆಯಲ್ಲಿ ದಿನಾಂಕ 21/06/2024ರಲ್ಲಿ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಸಹ ಮುಂದೂಡಲಾಗಿತ್ತು.
ಕೆಪಿಎಸ್‌ಸಿ ಗ್ರೂಪ್ 'ಎ' ವೃಂದದ 159, ಗ್ರೂಪ್ 'ಬಿ' ವೃಂದದ 225 ಸೇರಿ ಒಟ್ಟು 384 ಗೆಜೆಟೆಡ್ ಪ್ರೋಬೆಷನರ್ಸ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಈ ಹುದ್ದೆಗಳಿಗೆ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಕೆ ಮಾಡಿದ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಗಳನ್ನು ಬರೆಯಬೇಕಿದೆ.
ಈ ಸ್ಪರ್ಧಾತ್ಮಕ ಪರೀಕ್ಷೆಯು ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್‌ಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ) ನಿಯಮ 1997ರ ಷೆಡ್ಯೂಲ್ 2ರಲ್ಲಿ ತಿಳಿಸಿರುವಂತೆ ಎರಡು ಹಂತಗಳನ್ನು ಒಳಗೊಂಡಿರುತ್ತದೆ. ಪೂರ್ವಭಾವಿ ಪರೀಕ್ಷೆಯನ್ನು (Preliminary Examination) ಮುಖ್ಯ ಪರೀಕ್ಷೆಗೆ (Main Examination) ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ನಡೆಸಲಾಗುತ್ತದೆ.
ಮುಖ್ಯ ಪರೀಕ್ಷೆಯನ್ನು ಮತ್ತು ವ್ಯಕ್ತಿತ್ವ ಪರೀಕ್ಷೆಯನ್ನು ವಿವಿಧ ಸೇವೆಗಳು ಮತ್ತು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಲುವಾಗಿ ನಡೆಸಲಾಗುವುದು, ಹೆಚ್ಚಿನ ವಿವರಗಳಿಗೆ ನಿಯಮಗಳನ್ನು ನೋಡಲು ಸೂಚಿಸಿದೆ. ಈ ನಿಯಮಗಳು ಆಯೋಗದವೆಬ್‌ಸೈಟ್ http://kpsc.kar.nic.inನಲ್ಲಿ ಲಭ್ಯವಿರುತ್ತದೆ.
ಪೂರ್ವಭಾವಿ ಪರೀಕ್ಷೆ ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕಾತಿ) (9ನೇ ತಿದ್ದುಪಡಿ) ನಿಯಮಗಳು, 2011 ಪೂರ್ವಭಾವಿ ಪರೀಕ್ಷೆಯು ವಸ್ತುನಿಷ್ಠ ಬಹು ಆಯ್ಕೆ) ಮಾದರಿಯ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ.












Click it and Unblock the Notifications