'ನಾಲ್ಕೈದು ವರ್ಷಗಳಲ್ಲಿ ಐಟಿ ವಲಯದಲ್ಲಿ 25 ಲಕ್ಷ ಉದ್ಯೋಗ ಸೃಷ್ಟಿ’
ನವದೆಹಲಿ, ಮೇ 24 : ಮುಂದಿನ ಮೂರು ವರ್ಷಗಳಲ್ಲಿ 1.75 ಲಕ್ಷದಿಂದ 2 ಲಕ್ಷ ಐ.ಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಹೆಡ್ ಹಂಟರ್ಸ್ ಇಂಡಿಯಾ ಸಂಸ್ಥೆ ಹೇಳಿಕೆಯನ್ನು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಅವರು ತಳ್ಳಿ ಹಾಕಿದ್ದಾರೆ.
ದೇಶಿ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ದಿಮೆಯು ಮುಂದಿನ ನಾಲ್ಕೈದು ವರ್ಷಗಳಲ್ಲಿ 20 ರಿಂದ 25 ಲಕ್ಷದಷ್ಟು ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. ದೇಶಿ ಐ.ಟಿ ಉದ್ದಿಮೆ ಸದೃಢವಾಗಿದ್ದು, ಡಿಜಿಟಲ್ ಆರ್ಥಿಕತೆಯಲ್ಲಿ ಈ ಉದ್ದಿಮೆಯು ಅಪಾರ ಬೆಳವಣಿಗೆ ದಾಖಲಿಸಲಿದೆ ಎಂದು ರವಿ ಶಂಕರ್ ಪ್ರಸಾದ್ ಹೇಳಿದರು.[ಐ.ಟಿ ಉದ್ಯೋಗಿಗಳಿಗೆ ಶಾಕ್ ನೀಡಿದ ಹೆಡ್ ಹಂಟರ್ಸ್ ಸಂಸ್ಥೆ]

ದೇಶಿ ಐ.ಟಿ ಸಂಸ್ಥೆಗಳು 80 ದೇಶಗಳ 200 ನಗರಗಳಲ್ಲಿ ತಮ್ಮ ವಹಿವಾಟು ವಿಸ್ತರಿಸಿವೆ. 40 ಲಕ್ಷ ಜನರಿಗೆ ನೇರ ಮತ್ತು 1.3 ಕೋಟಿ ಜನರಿಗೆ ಪರೋಕ್ಷವಾಗಿ ಉದ್ಯೋಗ ಅವಕಾಶ ಕಲ್ಪಿಸಿವೆ.
ದಿನೇ-ದಿನೇ ಉದ್ಯಮದ ವಹಿವಾಟು ವಿಸ್ತರಣೆಯಾಗುತ್ತಿದೆ. ಐದು ವರ್ಷಗಳಲ್ಲಿ 25 ಲಕ್ಷದವರೆಗೆ ಹೊಸ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವುದರ ಕುರಿತು ಸಾಫ್ಟ್‌ವೇರ್ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟ (ನಾಸ್ಕಾಂ) ಅಂದಾಜು ಮಾಡಿದೆ' ಎಂದರು.












Click it and Unblock the Notifications