Infographics: ರಾಜ್ಯದಲ್ಲಿ ಸೆ.12ರವರೆಗೂ ವರುಣನ ನರ್ತನ
ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರಿನಲ್ಲಿ ಈಗಾಗಿರುವ ಮಳೆಗೆ ಜನರು ಕಕ್ಕಾಬಿಕ್ಕಿ ಆಗಿದ್ದಾರೆ. ಇದರ ಮಧ್ಯೆ ಇನ್ನೂ ಎರಡು ದಿನ ನಗರವಷ್ಟೇ ಅಲ್ಲದ ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರ್ನಾಟಕದ ನೈಋತ್ಯ ಮುಂಗಾರು ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಚುರುಕಾಗಾದಿದ್ದು, ಸೆಪ್ಟೆಂಬರ್ 12ರವರೆಗೂ ಹಲವೆಡೆ ಧಾರಾಕಾರ ಮಳೆಯಾಗಲಿದೆ. ಉಡುಪಿ, ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಕರಾವಳಿ ಬಹುತೇಕ ಕಡೆಗಳಲ್ಲಿ ಹಾಗೂ ಒಳನಾಡಿನ ಹಲವು ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (IMD) ತಿಳಿಸಿದೆ.
ಬಂಗಾಳಕೊಲ್ಲಿ ಸಮುದ್ರ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಸಮುದ್ರ ಮಟ್ಟದಿಂದ ಸುಮಾರು 6 ಕಿ.ಮೀ. ಎತ್ತರವಿರುವ ಈ ವಾಯುಭಾರ ಕುಸಿತವು ಆಂಧ್ರ ಪ್ರದೇಶದ ಉತ್ತರ ಕರಾವಳಿ, ಒಡಿಶಾ ದಕ್ಷಿಣ ಕರಾವಳಿ ಮಾರ್ಗವಾಗಿ ಸಾಗಲಿದೆ. ಇದೇ ಭಾಗದಲ್ಲಿ ಸಮುದ್ರ ಮೇಲ್ಮೈ ಸುಳಿಗಾಳಿ ಸಹ ವ್ಯಾಪಿಸುತ್ತಿದೆ. ಇನ್ನೂ ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸಹ ಸುಳಿಗಾಳಿ ಎದ್ದಿದ್ದು, ಅದು ರಾಜ್ಯದ ಉತ್ತರ ಒಳನಾಡಿನತ್ತ ಬೀಸುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಮಳೆಯಿಂದ ಕೂಡಿದ ವಾತಾವರಣ
ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಮೋಡ ಕವಿಡ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಗರದ ಕೆಲವು ಕಡೆಗಳಲ್ಲಿ ಒಂದೆರೆಡು ಬಾರಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಇದರ ಹೊರತಾಗಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಅದೇ ರೀತಿ ಮುಂದಿನ 48 ಗಂಟೆಗಳಲ್ಲಿ ಸಿಲಿಕಾನ್ ಸಿಟಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಇದೇ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ವಾತಾವರಣ?
ಕರ್ನಾಟಕದ ಕರಾವಳಿಯ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಇದರ ಹೊರತಾಗಿ ಉತ್ತರ ಒಳನಾಡಿನ ಒಂದೆರೆಡು ಕಡೆಯಲ್ಲಿ ಮಳೆ ಆಗಲಿದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇರುವುದಿಲ್ಲ.

ಕರಾವಳಿಯಲ್ಲಿ ಮೀನುಗಾರರಿಗೆ ಎಚ್ಚರಿಕೆ
ಮುಂದಿನ 48 ಗಂಟೆಗಳಲ್ಲಿ ಕರಾವಳಿ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಕಲಬುರಗಿ, ಯಾದಗಿರಿಯಲ್ಲಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಯ ಒಂದೆರೆಡು ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಲಿದೆ.

ಕರ್ನಾಟಕದ ಪ್ರಮುಖ ನಗರಗಳ ತಾಪಮಾನ
ಬೆಂಗಳೂರಿನಲ್ಲಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ, 73ರಷ್ಟು ತೇವಾಂಶ ದಾಖಲಾಗಿದೆ. ಗಾಳಿಯ ವೇಗ ಗಂಟೆಗೆ 51 ಕಿ.ಮೀ ಆಗಿದೆ. ಬಾಗಲಕೋಟೆ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 74ರಷ್ಟು ತೇವಾಂಶ, ಮಂಗಳೂರು ಏರ್‌ಪೋರ್ಟ್‌ನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 77ರಷ್ಟು ತೇವಾಂಶ, ಶಿವಮೊಗ್ಗದಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 75ರಷ್ಟು ತೇವಾಂಶ ಇದೆ. ಮೈಸೂರು 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 67 ತೇವಾಂಶ, ಬಳ್ಳಾರಿಯಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73ರಷ್ಟು ತೇವಾಂಶ ದಾಖಲಾಗಿದೆ.
ರಾಯಚೂರು 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 69ರಷ್ಟು ತೇವಾಂಶ, ಚಿತ್ರದುರ್ಗ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 77ರಷ್ಟು ತೇವಾಂಶ, ಕಲಬುರಗಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 84ರಷ್ಟು ತೇವಾಂಶ, ಚಿಕ್ಕಮಗಳೂರು 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 83ರಷ್ಟು ತೇವಾಂಶ ದಾಖಲಾಗಿದೆ.












Click it and Unblock the Notifications