Infographics: ಕರ್ನಾಟಕದಲ್ಲಿ ಜುಲೈ 18ರವರೆಗೂ ಮಳೆಯಪ್ಪಾ ಮಳೆ
ಬೆಂಗಳೂರು, ಜುಲೈ 16: ಕರ್ನಾಟಕದ ಮಲೆನಾಡು ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಅತಿಭಾರಿ ಮಳೆಯಾಗಿದೆ. ಮುಂದಿನ ಜುಲೈ 18ರವರೆಗೂ ರಾಜ್ಯದಲ್ಲಿ ಮಳೆ ಹೆಚ್ಚಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡಿನಲ್ಲಿ ನೈಋತ್ಯ ಮುಂಗಾರು ತೀವ್ರವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಚುರುಕುಗೊಂಡಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಯಿಲ್ಲ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಸಹ ಹಗುರವಾಗಿ ಮಳೆಯಾಗುವ ಸಾಧ್ಯತೆಯಿದೆ. ಕರ್ನಾಟಕದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜಲಾಶಯಗಳಲ್ಲಿ ನೀರಿನ ಪ್ರಮಾಣ ಏರಿಕೆಯಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಹೇಗಿದೆ ವಾತಾವರಣ?
ಮಳೆಯ ಕೋಪಕ್ಕೆ ಸಿಲಿಕಾನ್ ಸಿಟಿ ಜನರು ಕೂಡ ಮೆತ್ತಗಾಗಿ ಹೋಗಿದ್ದಾರೆ. ಹನಿ ಹನಿ ಮಳೆಯ ಹನಿಯ ಮಧ್ಯೆ ತಣ್ಣಗೆ ಬೀಸುವ ಗಾಳಿಯು ಜನರನ್ನು ಮನೆಗಳಿಂದ ಹೊರ ಬಾರದಂತೆ ಮಾಡಿ ಬಿಟ್ಟಿದೆ. ಶನಿವಾರ ಬೆಳಗ್ಗೆಯಿಂದಲೂ ನಗರದಲ್ಲಿ ಮೋಡ ಕವಿದ ವಾತಾವರಣವಿದೆ. ಆಗಾಗ ಮಳೆಯೂ ಸುರಿಯುತ್ತಿದ್ದು, ಗರಿಷ್ಠ ತಾಪಮಾಣ 27 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಆಗಿದೆ. ಮುಂದಿನ 48 ಗಂಟೆಗಳವರೆಗೂ ಬೆಂಗಳೂರಿನಲ್ಲಿ ಇದೇ ರೀತಿ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಕರುನಾಡಿನಲ್ಲಿ ಜುಲೈ 18ರವರೆಗೂ ವರುಣನದ್ದೇ ಖೇಲ್
ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿದೆ. ಈ ಹಿನ್ನೆಲೆ ಕರಾವಳಿ ಬಹುತೇಕ ಕಡೆ ಹಾಗೂ ಒಳನಾಡಿನ ಹಲವು ಕಡೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ರಾಜ್ಯದಲ್ಲಿ ಜುಲೈ 18ರವರೆಗೂ ಮಳೆ ಮುಂದುವರಿಯಲಿದೆ. ಇದರ ಹೊರತಾಗಿ ರಾಜ್ಯದ ಹವಾಮಾನದಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಗಳಿಲ್ಲ ಎಂದು ಭಾರತೀಯ ಹವಾಮಾನ (IMD) ಇಲಾಖೆ ಮುನ್ಸೂಚನೆ ನೀಡಿದೆ.

ಮುಂದಿನ 24 ಗಂಟೆಗಳಲ್ಲಿ ವಾತಾವರಣ?
ಕರ್ನಾಟಕದ ಕರಾವಳಿಯ ಎಲ್ಲಾ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಭಾರಿಯಿಂದ ಅತಿಭಾರೀ ಮಳೆಯಾಗುವ ನಿರೀಕ್ಷೆಯಿದೆ. ಒಂದೆರೆಡು ಕಡೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರ ಹೊರತಾಗಿಯೂ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗದ ಒಂದೆರೆಡು ಕೆಡಗಳಲ್ಲಿ ಭಾರಿಯಿಂದ ಅತಿಭಾರೀ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದ ಕರಾವಳಿ ತೀರ ಮಂಗಳೂರಿನಿಂದ ಕಾರವಾರದವರೆಗೂ ಜುಲೈ 17ರ ರಾತ್ರಿ 11.30ರ ತನಕ 3.5 ರಿಂದ 3.8 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳುವ ನಿರೀಕ್ಷೆಯಿದೆ. ಈ ಅಲೆಗಳ ಪ್ರಸ್ತುತ ವೇಗ 43 ರಿಂದ 54 ಕಿಲೋ ಮೀಟರ್ ಆಗಿದೆ. ಇದರ ಜೊತೆಗೆ ಕರಾವಳಿಯಲ್ಲಿ ಬಿರುಗಾಳಿಯ ವೇಗ ಪ್ರತಿ ಗಂಟೆಗೆ 40 ರಿಂದ 50 ಕಿಲೋ ಮೀಟರ್ ಆಗಿದ್ದು, ಅದು 60 ಕಿ.ಮೀ ತಲುಪುವ ಭೀತಿಯೂ ಇದೆ. ಹೀಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಕರ್ನಾಟಕದ ಪ್ರಮುಖ ನಗರಗಳ ತಾಪಮಾನ
ಬೆಂಗಳೂರಿನಲ್ಲಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ, 71ರಷ್ಟು ತೇವಾಂಶ ದಾಖಲಾಗಿದೆ. ಗಾಳಿಯ ವೇಗ ಗಂಟೆಗೆ 56 ಕಿ.ಮೀ ಆಗಿದೆ. ಬಾಗಲಕೋಟೆ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 67ರಷ್ಟು ತೇವಾಂಶ, ಮಂಗಳೂರು ಏರ್‌ಪೋರ್ಟ್‌ನಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 85ರಷ್ಟು ತೇವಾಂಶ, ಶಿವಮೊಗ್ಗದಲ್ಲಿ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70ರಷ್ಟು ತೇವಾಂಶ ಇದೆ. ಮೈಸೂರು 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 71 ತೇವಾಂಶ, ಬಳ್ಳಾರಿಯಲ್ಲಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 60ರಷ್ಟು ತೇವಾಂಶ ದಾಖಲಾಗಿದೆ.
ರಾಯಚೂರು 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 56ರಷ್ಟು ತೇವಾಂಶ, ಚಿತ್ರದುರ್ಗ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 73ರಷ್ಟು ತೇವಾಂಶ, ಕಲಬುರಗಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 57ರಷ್ಟು ತೇವಾಂಶ, ಚಿಕ್ಕಮಗಳೂರು 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 72ರಷ್ಟು ತೇವಾಂಶ ದಾಖಲಾಗಿದೆ.












Click it and Unblock the Notifications