ಅಕ್ರಮ ಸಂಬಂಧ ಮಾರಣಾಂತಿಕವಾದರೆ ಮಾತ್ರ ಕ್ರೌರ್ಯ

'ಪತಿರಾಯ ಬೇರೆ ಮಹಿಳೆಯೊಂದಿಗೆ ವಿವಾಹೇತರ ಅಕ್ರಮ ಸಂಬಂಧ ಇರಿಸಿಕೊಂಡರೆ ಅದು ಅಂಗೀಕಾರ. ಆದರೆ ಅದರಿಂದ ನೊಂದ ಪತ್ನಿ ಆತ್ಮಹತ್ಯೆಗೆ ಮುಂದಾದಲ್ಲಿ ಮಾತ್ರ ಪತಿಯ ವಿವಾಹೇತರ ಸಂಬಂಧ ಅಪರಾಧಿಕವಾಗುತ್ತದೆ' ಎಂಬಂತೆ ಸುಪ್ರೀಂ ತೀರ್ಪು ನೀಡಿದೆ.
'ಪತಿಯು ವಿವಾಹೇತರ ಅಕ್ರಮ ಸಂಬಂಧ ಹೊಂದಿರುವ ಮಾತ್ರಕ್ಕೆ, ವೈವಾಹಿಕ ಜವಾಬ್ದಾರಿ ಹೊರಲು ಆತ ವಿಫಲನಾಗಿದ್ದಾನೆ ಎಂದು ಕಾರಣ ನೀಡಿ ಅದನ್ನು ಕ್ರೌರ್ಯ ಎಂದು ಪರಿಗಣಿಸಲು ಸಾಧ್ಯವಾಗಲಾರದು' ಎಂದು ಸುಪ್ರೀಂ ಕೋರ್ಟ್ ಸೋಮವಾರ ತೀರ್ಪು ನೀಡಿದೆ.
'ಸತ್ಯಾಂಶಗಳ ಆಧಾರದಲ್ಲಿ, ವಿವಾಹೇತರ ಸಂಬಂಧವು ಪತ್ನಿಯನ್ನು ಆತ್ಮಹತ್ಯೆ ಮಾಡುವಂತೆ ಪ್ರಚೋದಿಸುವಂತಹ ರೀತಿಯಲ್ಲಿ ಇರಲಿಲ್ಲ ಮತ್ತು ಸಾಮಾನ್ಯ ಪರಿಸ್ಥಿತಿಗಳಲ್ಲಿ ಪತ್ನಿಯನ್ನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸುವಂತಹ ರೀತಿಯಲ್ಲಿಯೂ ಆತ ನಡೆದುಕೊಂಡಿರಲಿಲ್ಲ. ಅಷ್ಟೇ ಅಲ್ಲ ಹಾಗೆ ಮಾಡುವ ಉದ್ದೇಶವೂ ಆತನಿಗಿರಲಿಲ್ಲ' ಎಂದು ಕೋರ್ಟ್ ಷರಾ ಬರೆದಿದೆ.
'ಆದರೆ ಪತ್ನಿಗೆ ನೀಡುವ ಕಿರುಕುಳವು ಆಕೆಯನ್ನು ಆತ್ಮಹತ್ಯೆಗೆ ತಳ್ಳುವಂತೆ ಮಾಡುವ ರೀತಿಯಲ್ಲಿದ್ದರೆ ಮಾತ್ರ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ಅಡಿಯಲ್ಲಿ ಅದನ್ನು ಪರಿಗಣಿಸಬಹುದಾಗಿದೆ' ಎಂದು ನ್ಯಾಯಪೀಠ ತಿಳಿಸಿದೆ.
'ವೈವಾಹಿಕ ಬದುಕಿನಲ್ಲಿ ಪತಿ ಇನ್ನೊಬ್ಬ ಮಹಿಳೆಯೊಂದಿಗೆ ಅನ್ಯೋನ್ಯತೆ ಹೊಂದಿದ್ದು, ತನ್ನ ವೈವಾಹಿಕ ಜವಾಬ್ದಾರಿ ನಿಭಾಯಿಸಲು ವಿಫಲನಾದಲ್ಲಿ, ಅದನ್ನು ಕ್ರೌರ್ಯವೆಂದು ಪರಿಗಣಿಸಲಾಗುವುದಿಲ್ಲ' ಎಂದು ನ್ಯಾಯಮೂರ್ತಿಗಳಾದ ಕೆಎಸ್ ರಾಧಾಕೃಷ್ಣ ಮತ್ತು ಪಿಸಿ ಘೋಷ್ ಅವರ ನ್ಯಾಯಪೀಠವು ತಿಳಿಸಿದೆ.
ವ್ಯಕ್ತಿಯೊಬ್ಬರು ತಮ್ಮ ಕಚೇರಿಯಲ್ಲಿ ವಿವಾಹೇತರ ಸಂಬಂಧ ಹೊಂದಿದ್ದರಿಂದಾಗಿ ಆತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪದಲ್ಲಿ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್ ಎರಡರಿಂದಲೂ ಅಪರಾಧ ಸಾಬೀತಾಗಿದ್ದ ವ್ಯಕ್ತಿಗೆ ಸುಪ್ರೀಂ ಕೋರ್ಟಿನ ಈ ತೀರ್ಪು ನಿರಾಳತೆ ತಂದಿದೆ.
ಏನಾಗಿತ್ತೆಂದರೆ, ಪತಿಯು ತನ್ನ ಸಹೋದ್ಯೋಗಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಅನುಮಾನಿಸಿದ ಪತ್ನಿ, ಆತ್ಮಹತ್ಯೆಗೆ ಶರಣಾಗಿದ್ದರು. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ. ಪತ್ನಿಯ ಆತ್ಮಹತ್ಯೆಗೆ ಆತನ ಕ್ರೌರ್ಯವೇ ಕಾರಣವೆಂದು ತಿಳಿದು ವಿಚಾರಣಾ ನ್ಯಾಯಾಲಯ ಮತ್ತು ಗುಜರಾತ್ ಹೈಕೋರ್ಟ್ ಆತನಿಗೆ ಸೆಕ್ಷನ್ 498ಎ ಅನ್ವಯ ಶಿಕ್ಷೆ ವಿಧಿಸಿತ್ತು.
'ಕಿರುಕುಳವು ದೈಹಿಕ ಹಲ್ಲೆಯೇ ಆಗಿರಬೇಕಾಗಿಲ್ಲ ಮತ್ತು ಮಾನಸಿಕ ಕಿರುಕುಳವೂ ಐಪಿಸಿಯ 498ಎ ಸೆಕ್ಷನ್ ವ್ಯಾಪ್ತಿಗೆ ಬರುತ್ತದೆ. ಆದರೆ ಮಾನಸಿಕ ಕ್ರೌರ್ಯವು ವ್ಯಕ್ತಿಯಿಂದ ವ್ಯಕ್ತಿಗೆ, ಅದರ ತೀವ್ರತೆ ಮತ್ತು ಅದನ್ನು ಸಹಿಸಿಕೊಳ್ಳುವ ಮನಸ್ಥಿತಿಗೆ ತಕ್ಕಂತೆ ಬದಲಾಗುತ್ತದೆ. ಕೆಲವರು ಧೈರ್ಯದಿಂದ ನಿಭಾಯಿಸಿದರೆ, ಕೆಲವರು ಮೌನವಾಗಿಯೇ ಸಹಿಸಿಕೊಳ್ಳುತ್ತಾರೆ, ಇದನ್ನು ಸಹಿಸಲು ಸಾಧ್ಯವಾಗದ ಕೆಲವರು ಮತ್ತು ದುರ್ಬಲ ಮನಸ್ಸಿನವರು ತಮ್ಮ ಜೀವನವನ್ನೇ ಕೊನೆಗಾಣಿಸುವ ಕುರಿತು ಯೋಚಿಸುತ್ತಾರೆ' ಎಂದು ನ್ಯಾಯಪೀಠ ತಿಳಿಸಿದೆ!
'ಮೃತ ಪತ್ನಿಗೆ ಒಮ್ಮೆ ಅಬಾರ್ಷನ್ ಆಗಿತ್ತು. ಮತ್ತೊಮ್ಮೆ, ಹುಟ್ಟಿದ ಹೆಣ್ಣುಮಗುವೊಂದು ಕೆಲವೇ ದಿನಗಳಲ್ಲಿ ಮೃತಪಟ್ಟಿತು. ಆಕೆಗೆ ಆತ್ಮಹತ್ಯೆ ಮಾಡಿಕೊಂಡ ಮಹಿಳೆಗೆ ಗಂಡನ ಬಗ್ಗೆ ತನ್ನದೆಂಬ ಅತೀವ ಬಿಗಿಪಟ್ಟು ಇತ್ತು. ಅದರಿಂದ ಹೊರಬರಲಾರದೆ ಆಕೆ ಸಾವನ್ನಪ್ಪಿದಳು' ಎಂದೂ ಕೋರ್ಟ್ ವ್ಯಾಖ್ಯಾನಿಸಿದೆ.












Click it and Unblock the Notifications