ಮುಂದಿನ ವಾರ ರೈಲ್ವೆ ಪ್ರಯಾಣದರ ಹೆಚ್ಚಳ?
ಬೆಂಗಳೂರು ಸೆ.10 : ಅಯ್ಯೋ ಎಲ್ಲಾ ಬೆಲೆ ಏರಿಕೆ ಯಾಗುತ್ತಿದೆ ಎಂಬ ಗೂಣಗಾಟದ ನಡುವೆಯೇ ರೈಲು ಸರಕು ಸಾಗಣೆ ಮತ್ತು ಪ್ರಯಾಣದ ದರ ಹೆಚ್ಚಳದ ಶಾಕ್ ಎದುರಿಸಲು ಜನರು ಸಿದ್ಧರಾಗಬೇಕಿದೆ. ಮುಂದಿನ ವಾರ ರೈಲು ಪ್ರಯಾಣ ದರ ಹೆಚ್ಚಳವಾಗುವುದು ನಿಶ್ಚಿತವಾಗಿದೆ.
ಮುಂದಿನವಾರ ನವದೆಹಲಿಯಲ್ಲಿ ರೈಲ್ವೆ ಮಂಡಳಿ ಸಭೆ ನಡೆಯಲಿದ್ದು, ಸಭೆಯಲ್ಲಿ ಸರಕು ಸಾಗಣೆ ಮತ್ತು ರೈಲ್ವೆ ಪ್ರಯಾಣ ದರದ ಹೆಚ್ಚಳದ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ. ಆದರೆ, ಪ್ರಯಾಣ ದರ ಎಷ್ಟು ಹೆಚ್ಚಳವಾಗುತ್ತದೆ ಎಂದು ತಿಳಿದುಬಂದಿಲ್ಲ.

ಭಾನುವಾರ ಕರ್ನಾಟಕಕ್ಕೆ ಆಗಮಿಸಿದ್ದ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗುತ್ತಿವೆ ಸದ್ಯ, ರೈಲ್ವೆ ಪ್ರಯಾಣದರ ಹೆಚ್ಚು ಮಾಡಿದರೆ, ಸಾರ್ವಜನಿಕರಿಗೆ ಮತ್ತು ಇಲಾಖೆಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ದರ ಹೆಚ್ಚಳದ ಸುಳಿವು ನೀಡಿದ್ದಾರೆ.
ಕೆಲವು ದಿನಗಳಿಂದ ಡೀಸೆಲ್ ಬೆಲೆ ಹೆಚ್ಚಳವಾಗಿರುವುದು ಮತ್ತು ಬೆಲೆ ಮತ್ತಷ್ಟು ಹೆಚ್ಚಳವಾಗುವ ನಿರೀಕ್ಷೆ ಇರುವುದರಿಂದ ರೈಲ್ವೆ ಪ್ರಯಾಣ ದರ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ಮುಂದಿನವಾರದಿಂದ ರೈಲ್ವೆ ಸರಕು ಸಾಗಣೆ ದರ ಹೆಚ್ಚಳವಾಗಲಿದೆ. ಅದರ ಜೊತೆ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆಯೂ ಇದೆ.
ರೈಲ್ವೆ ಇಲಾಖೆ ಕೈಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲು ಕೋಟ್ಯಾಂತರ ರೂ.ಗಳ ಅನುದಾನದ ಅಗತ್ಯವಿದೆ. ಹಾಲಿ 268 ಯೋಜನೆಗಳನ್ನು ಪೂರ್ಣಗೊಳಿಸಲು ಇಲಾಖೆಗೆ 2 ಲಕ್ಷ ಕೋಟಿ ಬಂಡವಾಳದ ಅಗತ್ಯ ವಿದೆ.
ಆದ್ದರಿಂದ ರೈಲು ದರ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ರೈಲು ದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಆದರೆ, ಈಗ ಅವರೇ ದರ ಹೆಚ್ಚಳದ ಸುಳಿವು ನೀಡಿದ್ದಾರೆ.
ಮುಂದಿನ ವಾರ ಸರಕು ಸಾಗಣೆ ದರದೊಂದಿಗೆ ರೈಲ್ವೆ ಪ್ರಯಾಣದರವೂ ಹೆಚ್ಚಳವಾಗಲಿದೆ. ಆದರೆ, ಎಷ್ಟು ಹೆಚ್ಚಳವಾಗಲಿದೆ ಎಂಬುದು ಮಾತ್ರ ಸದ್ಯ ನಿಗೂಢವಾಗಿದೆ. ಬೆಲೆ ಏರಿಕೆಯ ಬಿಸಿ ಎದುರಿಸುತ್ತಿರುವ ಜನರು ರೈಲ್ವೆ ಪ್ರಯಾಣಕ್ಕೂ ಹೆಚ್ಚು ಹಣ ನೀಡಲು ಸಿದ್ದರಾಗಿರಿ.












Click it and Unblock the Notifications