ಹದಿನೈದು ವರ್ಷ ತುಂಬಿದ ವಾಹನಗಳ ಮರು ನವೀಕರಣ ಶುಲ್ಕ ಎಂಟು ಪಟ್ಟು ಹೆಚ್ಚಳ!

ಬೆಂಗಳೂರು, ಅ. 06: ಪರಿಸರ ಮಾಲಿನ್ಯ ನಿಯಂತ್ರಣ ಮಾಡುವ ಹೆಸರಿನಲ್ಲಿ ಕೇಂದ್ರ ಸರ್ಕಾರ ಪರಿಚಯಿಸಿರುವ 'ಗುಜರಿ ನೀತಿ' ಹಳೇ ವಾಹನ ಮಾಲೀಕರ ಜೇಬಿಗೆ ನೇರ ಕೈ ಹಾಕಿದೆ. ಹದಿನೈದು ವರ್ಷ ಮೇಲ್ಪಟ್ಟ ವಾಹನ ನೋಂದಣಿ ಮಾಡಬೇಕಾದರೆ, ಈಗಿರುವ ನೋಂದಣಿ ಶುಲ್ಕದ ಎಂಟು ಪಟ್ಟು ಪಾವತಿ ಮಾಡಬೇಕು! 2022 ಏಪ್ರಿಲ್ ನಿಂದ ಈ ನೀತಿ ಎಲ್ಲಾ ವಾಹನಗಳಿಗೂ ಅನ್ವಯವಾಗಲಿದೆ.

ಈ ಸಂಬಂಧ ಕೇಂದ್ರ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವಾಲಯ ಹಳೇ ವಾಹನಗಳ ನೋಂದಣಿ ಶುಲ್ಕ ಪರಿಷ್ಕರಿಸಿ ಅಧಿಕೃತ ಆದೇಶ ಹೊರಡಿಸಿದೆ. ರಾಷ್ಟ್ರೀಯ ಗುಜರಿ ನೀತಿಯ ಭಾಗವಾಗಿ ಹಳೇ ವಾಹನಗಳ ಸಂಹಾರಕ್ಕಾಗಿ ಇಂತಹದ್ದೊಂದು ಕಠಿಣ ನಿಯಮ ರೂಪಿಸಿದೆ. ಹದಿನೈದು ವರ್ಷ ಮೇಲ್ಪಟ್ಟ ವಾಹನಗಳನ್ನು ಶಾಶ್ವತವಾಗಿ ಗುಜರಿಗೆ ಹಾಕುವ ಹಾದಿಯನ್ನು ಕೇಂದ್ರ ಸಾರಿಗೆ ಮಂತ್ರಾಲಯ ಈ ರೀತಿ ಕಂಡುಕೊಂಡಿದೆ.

ಈ ಪರಿಷ್ಕೃತ ಆದೇಶದ ಪ್ರಕಾರ ಹದಿನೈದು ವರ್ಷ ಮೇಲ್ಪಟ್ಟ ಯಾವುದೇ ವಾಹನದ ಪ್ರಸ್ತುತ ಚಾಲ್ತಿಯಲ್ಲಿರುವ ನೋಂದಣಿ ಶುಲ್ಕಕ್ಕೆ ಹೋಲಿಸಿದರೆ ಎಂಟು ಪಟ್ಟು ಹೆಚ್ಚಳವಾಗಲಿದೆ. ಪ್ರಸ್ತತ ಹದಿನೈದು ವರ್ಷ ಮೇಲ್ಪಟ್ಟ ಕಾರಿನ ಮರು ನೋಂದಣಿ ಶುಲ್ಕ 600 ರೂ. ಇದ್ದು, ಗುಜರಿ ನೀತಿಯಿಂದಾಗಿ ಇದರ ಮೊತ್ತ ಐದು ಸಾವಿರ ರೂ.ಗೆ ಹೆಚ್ಚಳವಾಗಲಿದೆ. ಹಳೇ ದ್ವಿಚಕ್ರ ವಾಹನಗಳಿಗೂ ಈ ನಿಯಮ ಅನ್ವಯವಾಗಲಿದ್ದು, 300 ರೂ. ಬದಲಿಗೆ ಒಂದು ಸಾವಿರ ರೂ. ಪಾವತಿ ಮಾಡಬೇಕಾಗುತ್ತದೆ.

From Apr 2022, pay eight times more for renewing 15-year-old cars

ಇದೇ ರೀತಿ ಫಿಟ್ನೆಸ್ ಸರ್ಟಿಫಿಕೇಟ್ ಮೌಲ್ಯದಲ್ಲಿ ಕೂಡ ಭಾರೀ ಹೆಚ್ಚಳ ಮಾಡಲಾಗಿದೆ. ಇಲ್ಲಿಯವರೆಗೂ ಯಾವುದೇ ಒಂದು ಟ್ರಕ್ ಫಿಟ್ನೆಸ್ ಸರ್ಟಿಫಿಕೇಟ್ ಮರು ನವೀಕರಣಕ್ಕಾಗಿ 1500 ರೂ.ಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪಾವತಿ ಮಾಡಬೇಕಿತ್ತು. ಪರಿಷ್ಕೃತ ಗುಜರಿ ನೀತಿ ಜಾರಿಯಿಂದಾಗಿ ಈ ಮೊತ್ತ 12,500 ರೂ.ಗೆ ಹೆಚ್ಚಳ ಆಗಲಿದೆ. ಮಧ್ಯಮ ಗಾತ್ರದ ಸಾಗಣೆ ಮತ್ತು ಸಾರ್ವಜನಿಕ ಬಳಕೆ ವಾಹನಗಳ ಫಿಟ್ನೆಸ್ ಸರ್ಟಿಫಿಕೇಟ್ ಮರು ನವೀಕರಣ ಶುಲ್ಕ ಹತ್ತು ಸಾವಿರ ರೂ. ಆಗಲಿದೆ. ಹೊರ ದೇಶಗಳಿಂದ ಭಾರತಕ್ಕೆ ರಫ್ತು ಮಾಡುವ ಬೈಕ್ ಅಥವಾ ಕಾರುಗಳ ಮರು ನೋಂದಣಿ ಶುಲ್ಕ 40 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ.

2022 ಏಪ್ರಿಲ್ ನಿಂದ ನಿಯಮ ಜಾರಿ: ಕೇಂದ್ರ ಸಾರಿಗೆ ಮಂತ್ರಾಲಯದ ಅಧಿಕೃತ ಸೂಚನೆ ಪ್ರಕಾರ ಇದು 2022 ಏಪ್ರಿಲ್ ನಿಂದ ಪರಿಷ್ಕೃತ ಮರು ನವೀಕರಣ ಶುಲ್ಕ ಹಾಗೂ ಫಿಟ್ನೆಸ್ ಸರ್ಟಿಫಿಕೇಟ್ ಮರು ನವೀಕರಣದ ಪರಿಷ್ಕೃತ ಶುಲ್ಕಗಳು ಜಾರಿಗೆ ಬರಲಿವೆ. ಕೇಂದ್ರ ಮೋಟಾರು ವಾಹನ ಕಾಯ್ದೆಗೆ 23 ನೇ ತಿದ್ದುಪಡಿ ಮಾಡಲಾಗಿದೆ. ಫಿಟ್ನೆಸ್ ಸರ್ಟಿಫಿಕೇಟ್, ಹದಿನೈದು ವರ್ಷ ತುಂಬಿದ ವಾಹನಗಳ ಮರು ನೋಂದಣಿ ಮಾಡುವ ದಿನಾಂಕ ಮುಂದೂಡಿದರೆ ಪ್ರತಿ ದಿನವೂ 50 ರೂ. ದಂಡ ಬೀಳಲಿದೆ. ಇದರ ಜತೆಗೆ ಸ್ಮಾರ್ಟ್ ಕಾರ್ಡ್ ನೀಡುವ ಶುಲ್ಕ 200 ರೂ. ಹೆಚ್ಚುವರಿಯಗಿ ನೀಡಬೇಕಾಗುತ್ತದೆ. ರಾಷ್ಟ್ರೀಯ ಗುಜರಿ ನೀತಿ ಅದಾಗಲೇ ಹಳೇ ವಾಹನ ಮಾಲೀಕರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಒಂದೆಡೆ ನಿರಂತರ ಹೆಚ್ಚುತ್ತಿರುವ ಇಂಧನ ಬೆಲೆ, ಅದನ್ನು ಸರಿದೂಗಿಸಿದರೂ ಹೊಸ ಗುಜರಿ ನೀತಿಯಲ್ಲಿ ಪ್ರಸ್ತಾಪಿಸಿರುವ ನಿಯಮಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹಳೇ ವಾಹನ ಮಾಲೀಕರು ಅನಿವಾರ್ಯವಾಗಿ ಬಿಡಿಗಾಸಿಗೆ ಹಳೇ ಗಾಡಿ ಮಾರುವುದೇ ವಾಸಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಗುಜರಿ ನೀತಿಗೆ ಚಾಲನೆ ನೀಡಿದರು. ಹಳೇ ವಾಹನಗಳನ್ನು ಗುಜರಿಗೆ ಹಾಕುವ ಮೂಲಕ ಪರಿಸರ ಮಾಲಿನ್ಯ ತಡೆಯುವುದು, ಜತೆಗೆ ಆಟೋ ಮೊಬೈಲ್ ಕ್ಷೇತ್ರದ ಪ್ರಗತಿಗೆ ನಾಂದಿ ಹಾಡುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ತರಲಾಗುತ್ತಿದೆ. ಹದಿನೈದು ವರ್ಷ ಮೇಲ್ಪಟ್ಟ ವಾಹನಗಳನ್ನು ಗುಜರಿಗೆ ಹಾಕಿಸಿ ಹೊಸ ವಾಹನ ಖರೀದಿ ಮಾಡುವುದೇ ಯೋಜನೆಯ ಮೂಲ ಉದ್ದೇಶ. ಈ ಯೋಜನೆಯ ಭಾಗವಾಗಿ ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆ 2023 ಏಪ್ರಿಲ್ ನಿಂದ ಜಾರಿಗೆ ಬರಲಿದೆ. ಸ್ವಂತ ವಾಹನಗಳ ಫಿಟ್ನೆಸ್ ಪರೀಕ್ಷೆ 2024 ಜೂನ್ ನಿಂದ ಜಾರಿಗೆ ಬರಲಿದೆ.

From Apr 2022, pay eight times more for renewing 15-year-old cars

ಗುಜರಿ ನೀತಿ ಪ್ರಕಾರ ಪರಿಷ್ಕೃತ ಮರು ನವೀಕರಣ ಶುಲ್ಕ

ವಾಹನ ಹಳೆ ಶುಲ್ಕ ಪರಿಷ್ಕೃತ ಶುಲ್ಕ
ಬೈಕ್ 300 1000
ತ್ರಿಚಕ್ರ ವಾಹನ 600 2500
ಕಾರು /ಜೀಪು 600 5000
ರಫ್ತಾದ ವಾಹನ 5000 40,000

ವಾಹನಗಳ ಪರಿಷ್ಕೃತ FC ಶುಲ್ಕ

ವಾಹನ ಹಳೆ ಶುಲ್ಕ ಪರಿಷ್ಕೃತ ಶುಲ್ಕ
ಬೈಕ್ 500 1000
ತ್ರಿಚಕ್ರ ವಾಹನ 1000 3500
ಟ್ಯಾಕ್ಸಿಡರ್ಮಿ 1000 7000
ಜನ ಪ್ರಯಾಣ ಮಿನಿ ವಾಹನ 1300 10,000
ಜನ ಪ್ರಯಾಣ ದೊಡ್ಡ ವಾಹನ 1500 12,500

ಏನಿದು ಗುಜರಿ ನೀತಿ:

ದೇಶದಲ್ಲಿ ವರ್ಷಗಳಿಂದ ಚಾಲನೆಯಲ್ಲಿರುವ ಹಳೇ ವಾಹನಗಳನ್ನುನಾಶ ಪಡಿಸುವುದು. ಈ ಮೂಲಕ ಪರಿಸರ ಸಂರಕ್ಷಣೆ ಮಾಡವುದು. ಆಟೋ ಮೊಬೈಲ್ ಕ್ಷೇತ್ರದ ಪ್ರಗತಿಗೆ ಅವಕಾಶ ಕೊಡುವ ಜತೆಗೆ ರಸ್ತೆ ಸುರಕ್ಷತೆ ಕಾಪಾಡುವುದು ಈ ಯೋಜನೆಯ ಉದ್ದೇಶ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಈ ಗುಜರಿ ನೀತಿಯಿದೆ. ಭಾರತದಲ್ಲಿ ಇದೇ ಮೊದಲ ಭಾರಿಗೆ ಈ ರೀತಿಯ ಹೊಸ ನೀತಿ ಜಾರಿಗೆ ತರಲಾಗಿದೆ. ದೇಶದ ರಸ್ತೆಗಳಲ್ಲಿ ಸಂಚರಿಸುತ್ತಿವ ವಾಣಿಜ್ಯ ವಾಹನಗಳು ಹದಿನೈದು ವರ್ಷದ ಬಳಿಕ ಅವುಗಳ ಅರ್ಹತೆ ಬಗ್ಗೆ ತಪಾಸಣೆ ನಡೆಸಿ ಗುಜರಿಗೆ ಹಾಕುವುದು. ವಾಹನ ಖರೀದಿಸಿದ ಎಂಟು ವರ್ಷದ ಬಳಿಕ ಹದಿನೈದು ವರ್ಷದ ವರೆಗೂ ವಾಣಿಜ್ಯ ವಾಹನಗಳಿಗೆ ರಸ್ತೆ ತೆರಿಗೆಯ ಶೇ. 10 ರಿಂದ 15 ಪರ್ಸೆಟ್ ಗ್ರಿನ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಮತ್ತು ಸ್ವಂತಕ್ಕೆ ಬಳಸುವ ವೈಟ್ ಬೋರ್ಡ್ ವಾಹನಗಳಿಗೆ ಹದಿನೈದು ವರ್ಷದ ಬಳಿಕ ಶೇ. 50 ರಷ್ಟು ಗ್ರಿನ್ ಟ್ಯಾಕ್ಸ್ ವಿಧಿಸುವ ಪ್ರಸ್ತಾವನೆ ಹೊಂದಿದೆ. ಈ ಮೂಲಕ ಹಳೇ ವಾಹನಗಳನ್ನು ಮಾಲೀಕರು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕುವಂತಹ ವಾತಾವರಣ ನಿರ್ಮಿಸುವ ಉದ್ದೇಶದೊಂದಿಗೆ ಈ ಯೋಜನೆ ಜಾರಿಗೆ ತರಲಾಗಿದೆ. ಹೊಸದಾಗಿ ಖರೀದಿಸುವ ವಾಹನವು ನೋಂದಣಿಯಾದ ದಿನದಿಂದ ಹದಿನೈದು ವರ್ಷ ಮಾತ್ರ ಚಾಲನೆಗೆ ಅವಕಾಶ ನೀಡಲಾಗುತ್ತದೆ. ಆನಂತರ ಗುಜರಿಗೆ ಹಾಕಬೇಕು. ಸರ್ಕಾರಿ ವಾಹನಗಳು ಕೂಡ ಈ ಯೋಜನೆ ವ್ಯಾಪ್ತಿಗೆ ಒಳಪಡಲಿವೆ. ಈ ಯೋಜನೆ 2022 ಏಪ್ರಿಲ್ 1 ರಿಂದ ವಾಣಿಜ್ಯ ವಾಹನಗಳಿಗೆ ಅನ್ವಯವಾಗಲಿದೆ. 2023 ಏಪ್ರಿಲ್ ನಿಂದ ವೈಟ್ ಬೋರ್ಡ್ ಸ್ವಂತ ವಾಹನಗಳಿಗೆ ಅನ್ವಯವಾಗಲಿದೆ.

From Apr 2022, pay eight times more for renewing 15-year-old cars

ಗುಜರಿ ನೀತಿ ಪ್ರಕಾರ ವಾಹನ ಪರೀಕ್ಷೆ ಹೇಗೆ ?

2023 ರಿಂದ ಹಳೇ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ

ಖರೀದಿಸಿದ ಹದಿನೈದು ವರ್ಷದ ಬಳಿಕ ವಾಣಿಜ್ಯ ವಾಹನಗಳಿಗೆ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ಸ್ವಂತ ವಾಹನಗಳಿಗೆ 20 ವರ್ಷದ ಬಳಿಕ ಫಿಟ್ನೆಸ್ ಪರೀಕ್ಷೆ ನಡೆಸಲಾಗುತ್ತದೆ. ವಾಹನ ತಪಾಸಣೆಗೆಂದೇ ಪ್ರತಿ ನೂರು ಕಿ.ಮೀ. ದೂರದಲ್ಲಿ ಆಟೋ ಮೇಟೆಟ್ ಫಿಟ್ನೆಸ್ ಸೆಂಟರ್ ತೆರೆಯಲಾಗುತ್ತದೆ. ಸರ್ಕಾರ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ತೆರೆಯುವ ಈ ಫಿಟ್ನೆಸ್ ಸೆಂಟರ್ ನಲ್ಲಿ ಅಂತಾರಾಷ್ಟ್ರೀಯ ಮಾನದಂಡ ಇಟ್ಟುಕೊಂಡು ವಾಹನಗಳ ತಪಾಸಣೆ ಮಾಡಲಾಗುತ್ತೆ. ಈ ಫಿಟ್ನೆಸ್ ಸೆಂಟರ್ ನಲ್ಲಿ ಬ್ರೇಕ್ ಸಿಸ್ಟಮ್, ಮಾಲಿನ್ಯದ ಪ್ರಮಾಣ, ವಾಹನ ಚಾಲನೆಯ ಸುರಕ್ಷತೆ ಮಾನದಂಡ ಇಟ್ಟುಕೊಂಡು ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ 26 ಸ್ವಯಂ ಚಾಲಿತ ಪರೀಕ್ಷಾ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ ನೀಡಲಾಗಿದೆ. ಈಗಾಗಲೇ ಏಳು ಕೇಂದ್ರಗಳು ಕಾರ್ಯ ನಿರ್ವಹಣೆಗೆ ಸಜ್ಜಾಗಿವೆ. ಮೊದಲ ಹಂತದಲ್ಲಿ 75 ಕೇಂದ್ರ ಸ್ಥಾಪನೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ 450 ರಿಂದ 500 ಕೇಂದ್ರಗಳನ್ನು ದೇಶದಲ್ಲಿ ಸ್ಥಾಪನೆ ಮಾಡಲಾಗುತ್ತದೆ. 2022 ಏಪ್ರಿಲ್ 1 ರಿಂದ ಸರ್ಕಾರದ ವಾಹನಗಳ ತಪಾಸಣೆ ನಡೆಸಲಾಗುತ್ತದೆ. 2023 ಏಪ್ರಿಲ್ ನಿಂದ ಗೂಡ್ಸ್ ವಾಹನಗಳ ತಪಾಸಣೆ ಅರಂಭವಾಗಲಿದೆ. ಸ್ವಂತ ವಾಹನಗಳ ತಪಾಸಣೆ 2024 ಜೂನ್ ನಿಂದ ಪ್ರಾರಂಭವಾಗಲಿದೆ. ಹೀಗೆ ಹಂತ ಹಂತವಾಗಿ ದೇಶದ ಎಲ್ಲಾ ವಾಹನಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೇಂದ್ರ ಸಾರಿಗೆ ಮಂತ್ರಾಲಯದ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 10 ಮಿಲಿಯನ್ ವಾಹನ ( 1 ಕೋಟಿ ) ತುರ್ತು ಗುಜರಿಗೆ ಸೇರಲಿವೆ. ವಾಣಿಜ್ಯ ವಾಹನಗಳ ಫಿಟ್ನೆಸ್ ಪರೀಕ್ಷೆ 2023 ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+