ಸ್ವಪ್ನದಲಿ ಬರೆದ ಪ್ರೇಮ ಪತ್ರ ಜೇಬಲ್ಲೇ ಉಳಿಯಿತು!

By: ರಾಘವೇಂದ್ರ ಸಿವಿ
Subscribe to Oneindia Kannada

"ಓ ಮೇಘವೇ ಮೇಘವೇ ಹೋಗಿ ಬಾ
ಈ ಓಲೆಯ ಅವಳಿಗೆ ನೀಡಿ ಬಾ
ನಾ ಹೋಗಲು ಮಾತಾಡಲು ಈ ನಾಚಿಕೆ ಅಂಜಿಕೆ ಮುಂದಿದೆ"

ಎಂದು ಹಂಸಲೇಖರ ಈ ಸಾಲನ್ನು ಗುನುಗುತ್ತ, ನನ್ನೊಳಗೇನೋ ಸಂಚಲನ ಮೂಡಿಸಿದ್ದ ನಿನ್ನ ಆ ಮುಗುಳ್ನಗೆ ಅದಕ್ಕೆ ಮುತ್ತಿಕ್ಕುತ್ತಿದ್ದ ಆ ಮುಂಗುರುಳು ಅದನ್ನು ನೇವರಿಸುವ ಮುದ್ದಾದ ಬೆರಳುಗಳ ಹಿಡಿದು, ಇಳಿಸಂಜೆಯ ಸಾನಿಧ್ಯದಲ್ಲಿ, ಹೆಜ್ಜೆಗೊಂದು ಹೆಜ್ಜೆ ಬೆಸೆಯುತ್ತ ಸಾಗುತ್ತಿರುವ ಕಲ್ಪನೆಯಲ್ಲಿ ಜೊತೆ ಇದ್ದದ್ದು ಮಾತ್ರ ಆಗಾಗ ಅಣಕಿಸುತ್ತಿದ್ದ ಅಕ್ಷರಗಳು, ನೀಲಿ ಶಾಯಿ, ಬೇಡವಾದ ಸಾಲುಗಳು, ಇನ್ನು ಕಣ್ಬಿಡದ ಭಾವನೆಗಳು ಮತ್ತು ಆ ಪಾರ್ಕಿನ ಮೂಲೆಯಲ್ಲಿ ನನ್ನ ದಾರಿಯನ್ನೇ ಎದುರುನೋಡುತ್ತಿದ್ದ ಬಿಳಿಬಣ್ಣ ಧರಿಸಿದ್ದ ಒಂಟಿ ಬೆಂಚು.

ಪ್ರತಿರಾತ್ರಿ ಕನಸಿನಲ್ಲಿ ನೀ ಒಮ್ಮೆ ನನ್ನ ಇಣುಕಿ ನೋಡುವಾಕ್ಷಣ ನಿಜಕ್ಕೂ ನಾನೊಬ್ಬ ಸ್ತಬ್ಧವಾಗಿ ನಿಂತ ಶಬ್ದದಂತೆ, ಇನ್ನು ಮೂಡದ ವಾಕ್ಯದಂತೆ, ಕಾಣದ ಕವಿತೆಯಂತೆ, ಗೇಲಿಮಾಡುವ ನೋಟದಂತೆ, ರಾಜಿಯಾಗದ ಹುಸಿ ಮುನಿಸಂತೆ ಹೀಗೆಲ್ಲಾ ಅಂದುಕೊಂಡ ಹುಂಬತನಕ್ಕೆ ಈ ಲೋಕವೊಂದು "ಪ್ರೇಮಿ" ಎಂಬ ನಾಮಫಲಕವನ್ನು ಹೃದಯಕ್ಕೆ ನೇತು ಹಾಕಿದೆ. [ಲೈಫ್ ಎಂಜಾಯ್ ಮಾಡೋಕೆ, ವೈಫ್ ಜಗಳ ಆಡೋಕೆ!]

The last love letter left in my pocket only

ನಿನ್ನನ್ನು ತಲುಪಬೇಕಿದ್ದ ಹೂನೋಟ ಸಿಹಿ ಸಂಕಟದ ಸಂಕೋಚದಲ್ಲಿ ಮರೆಯಲ್ಲಿ ಅವಿತಿರಲು ಗುಲಾಬಿ ಹಿಡಿದು, ಮಂಡಿಯೂರಿ ಪ್ರದರ್ಶನಕಿಟ್ಟ ಬೊಂಬೆಯಂತೆ ನನ್ನ ಪ್ರೇಮವನ್ನು ನಿನ್ನಲ್ಲಿ ನಿವೇದಿಸಲಾರೆ ಎನ್ನುವಷ್ಟರಲ್ಲಿ ಕಂಬನಿ ಜಾರಿತು, ಕತ್ತಲೆ ಒರೆಸಿತು ಸ್ವಪ್ನದಲ್ಲಿ ಸಂಚರಿಸುತ್ತ ಬರೆದ ಪ್ರೇಮ ಪತ್ರ ಜೇಬಲ್ಲೆ ಉಳಿಯಿತು..

ಅಪೂರ್ಣವಾದ ಅಪಾರ ಕವಿತೆಗಳಲ್ಲಿ
ಶತಮಾನಗಳಿಂದ ಕಾಯುತ್ತಿರುವ
ಜೀವಂತ ಭಾವನೆಗಳು ಒಮ್ಮೆಲೆ
ಎದೆಗೆ ಒದ್ದು ಮಾಡಿದ ಘಾಸಿ,
ಇರಬಹುದು ಅವಳ ನೆನಪುಗಳ ಬಹುಮಾನ [ಅಕ್ಷರಗಳ ಖಜಾನೆ ಖಾಲಿ, ನಿಲ್ಲದು ನಿನ್ನ ವರ್ಣಿಸುವ ಖಯಾಲಿ]

ನನ್ನ ಮನಸ್ಸಿನ ಮೊರೆತ ಅವಳ ತಲುಪುವ
ಸಮಯ ಬೀಸುವ ಬಿರುಗಾಳಿಯಲ್ಲಿ
ಕಳೆದುಹೋಗುವ ಭೀತಿ
ತೇಲಿ ಬಂದ ಮೂಕ ರಾಗಕೇ
ವಿರಹ ವಿನಿಮಯದಂಜಿಕೆ
ಕಾವ್ಯವು ಅಂತರಂಗದಿ ಹರಿವ ಗುಪ್ತಗಾಮಿನಿ [ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ]

ಧೂಳ್ಹಿಡಿದ ಡೈರಿಯೊಂದು ಮೂಲೆಯಲ್ಲಿ ಮರುಗುತಿದೆ,
ಅದೇ ಹಳೆಯ ಕವಿತೆಗಳು ಉಸಿರುಗಟ್ಟಿ ಸಾಯುತಿವೆ
ಆದರೆ ಅವಳ ಆಗಮನ ಬಿಡಬಹುದು ನಿಟ್ಟುಸಿರು
ಉಳಿಯಬಹುದು ಕವಿತೆಗಳು ಮತ್ತು
ಕವಿತೆಯೊಳಗಿನ ನನ್ನ ಅನನ್ಯ ಪ್ರೀತಿ

ಸುಪ್ತ ಸಾಗರದಿ ಸದ್ದಿಲ್ಲದೆ
ಅಲೆಗೊಂದು ಅಲೆಯು ಸೇರುವ ಆ ಕ್ಷಣ
ನನ್ನೊಳಗಿನ ಪ್ರೇಮಿಯ ಮರುಹುಟ್ಟಿಗೆ
ಸಂಜೆಯೊಂದೆ ಜೀವಂತ ಸಾಕ್ಷಿ..

ಇರುವಾಗ ನಿನ್ನ ನೆನಪುಗಳು ನನ್ನ ಸುತ್ತ
ನಿಜ ನಾನಿನ್ನೂ ಜೀವಂತ, ಪ್ರೀತಿಯಲ್ಲಿ ಶ್ರೀಮಂತ.

ಇಂತಿ ನಿನ್ನ ಪ್ರೇಮಿ...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Darling, I am madly in love with you. I look at you and see the rest of my life in front of my eyes. But, I never dared to say I Love You. The last love letter which I wrote to you in my dream left in my pocket only. If you too love me, please come and collect.
Please Wait while comments are loading...