ಪ್ರೀತಿಯ ಆಳ ಅಗಲ ಅಳೆಯಲು ಸಾಧ್ಯವೆ?

ನನಗಂತೂ ಚಿಂತಿಸಿ ಚಿಂತಿಸಿ ತಲೆ ಚಿಟ್ಟುಹಿಡಿದು ಹೋಗಿದೆ. ಪ್ರೀತಿಯನ್ನು ಅಳೆಯುವುದು ಅಥವಾ ತೂಗಿನೋಡುವುದು ಹೇಗೆ? ಅದರ ಆಳ ಅಗಲವನ್ನು ಅಕ್ಷರಗಳಲ್ಲಿ, ಅಂಕೆಸಂಖ್ಯೆಗಳಲ್ಲಿ, ಎಕ್ಸ್ ಎಲ್ ಶೀಟಿನಲ್ಲಿ ದಾಖಲಿಸುವುದು ಸಾಧ್ಯವೆ? ನಿಮಗೂ ಯಾವತ್ತಾದರೂ ಹೀಗೆಯೇ ಅನ್ನಿಸಿರಲೂಬಹುದು. ಬಾರೋಮೀಟರ್, ಲ್ಯಾಕ್ಟೋಮೀಟರ್ ಅಥವಾ ಆಟೋ ಮೀಟರುಗಳ ರೀತಿ, ಪ್ರೀತಿಯ ಮೀಟರ್ ಗೆ ಯಾರಾದರೂ ಒಂದು ಮಿಶಿನ್ನು, ಒಂದು ಮೋಟಾರು, ಒಂದು ಪ್ರೊಗ್ರಾಂ, ಒಂದು ತಕ್ಕಡಿಯನ್ನು ಕಂಡುಹಿಡಿದಿದ್ದಾರೆಯೇ? ಅಮೆರಿಕಾದಂತಹ ತಾಂತ್ರಿಕವಾಗಿ ಮುಂದುವರೆದ ದೇಶದಲ್ಲೂ ಸಿಗುವಂಥದ್ದು. ದಟ್ಸ್ ಕನ್ನಡ ಓದುಗರಿಗೆ ತಿಳಿದಿದ್ದರೆ, ಎಲ್ಲಾದರೂ ಓದಿದ ನೆನಪಿದ್ದರೆ, ಅನುಭವವಿದ್ದರೆ ದಯಮಾಡಿ ಒಂದು ಸಾಲು ಉತ್ತರ ಬರೆಯುವುದು.
ಆಧುನಿಕ ಪ್ರಪಂಚದಲ್ಲಿ ಮನುಷ್ಯರು ಐಹಿಕವಾದ ವಸ್ತು, ಪದಾರ್ಥಗಳ ನೆರವಿನಿಂದ ಪ್ರೀತಿಯನ್ನು ಅಳೆಯುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಎಷ್ಟು ಹೊತ್ತು ಜತೆಗೆ ಕಾಲ ಕಳೆದೆವು, ಎಷ್ಟು ಗ್ರೀಟಿಂಗ್ ಕಾರ್ಡ್ ಕಳಿಸಿದೆವು, ಎಸ್ಎಂಎಸ್ ನಲ್ಲಿ ಏನೇನು ನುಸುಳಿಹೋಯಿತು ಎಂಬ ಲೆಕ್ಕಾಚಾರದ ಜತೆಗೆ, ಜತೆಯಾಗಿ ಕುಳಿತು ಸವಿದ ಫಾರೆಸ್ಟ್ ಕೇಕುಗಳ ಲೆಕ್ಕ ಎಷ್ಟು? ಮುಂತಾದ ಸಂಗತಿಗಳು ಪ್ರೀತಿಯ ಕ್ಯಾಲ್ಕುಲೇಟರುಗಳಲ್ಲಿ ಕೀ ಆಗುವುದು ಸಾಮಾನ್ಯವಾಗಿದೆ.
ಇಂಥ ಯಾವುದೇ ಅಳತೆಗೋಲು, ಸ್ಕೇಲು ಇಲ್ಲದಿರುವಾಗ ಅವನು ಅಥವಾ ಅವಳು ತನ್ನನ್ನು ಎಷ್ಟು ಪ್ರೀತಿ ಮಾಡುತ್ತಿದ್ದಾನೆ(ಳೆ) ಎಂದು ಅರಿಯುವುದಾದರೂ ಹೇಗೆ? 'ಕಡಲಲ್ಲಿ ದೋಣಿ ಎಷ್ಟು ದೂರ ತೇಲಿದರೇನು ತಿಳಿಯಿತೇನು ಅದರ ಆಳವ' ಎಂಬ ಕವಿವಾಣಿಯನ್ನು ಗುನುಗಿಕೊಂಡು ಕುಳಿತುಬಿಟ್ಟರೆ ಪ್ರೀತಿ ಪ್ರೇಮದ ಲೆಕ್ಕಾಚಾರ ಇಡುವವರು ಯಾರು? ಸ್ವರ್ಗ ನರಕಗಳಂತೆ, ಪಾಪ ಪುಣ್ಯಗಳಂತೆ, ಪ್ರೀತಿ ಮತ್ತು ವಿರಹಗಳ ಲೆಕ್ಕಾಚಾರ ಇಲ್ಲೇ ಚುಕ್ತವಾಗಬೇಕಲ್ಲವೆ? ಇದಕ್ಕೆ ಒಂದು ಕೊನೆ ಬೇಕಾಗಿದೆ, ನೆರವಾಗಿ.












Click it and Unblock the Notifications