ಬಳಿಗೆ ಬಾರೆನ್ನವಳೆ ಮನಬಿಚ್ಚಿ ಮಾತಾಡು
ಕೆ. ಎಸ್. ನರಸಿಂಹ ಸ್ವಾಮಿ
ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಯಿಂದ
ಬರುವ ಕಂಪಿನ ಹೆಸರು ಪ್ರೇಮವೆಂದು
ನೀಲಾಂತರಿಕ್ಷದಲ್ಲಿ ಹೊಳೆವ ನಕ್ಷತ್ರಗಳ
ಕಣ್ಣ ಸನ್ನೆಯ ಹೆಸರು ಪ್ರೇಮವೆಂದು
ಹಸಿರು ಬಯಲಿಗೆ ಇಳಿದ ಬಿಳಿ ಬಿಳಿಯ ಹಕ್ಕಿಗಳ
ದೂರದಿಂಪಿನ ಹೆಸರು ಪ್ರೇಮವೆಂದು
ಮಾಲಗಣ್ಣಿನ ಹೆಣ್ಣೆ ನಿನ್ ತುಟಿಯಿಕ್ಕೆಲದ
ಮಂದಹಾಸದ ಹೆಸರು ಪ್ರೇಮವೆಂದು
ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು
ಮಿಡಿದ ಹೃದಯದ ಹೆಸರು ಪ್ರೇಮವೆಂದು
ಬಳಿಗೆ ಬಾರೆನ್ನವಳೆ ಮನಬಿಚ್ಚಿ ಮಾತಾಡು
ನಾನದನೆ ಕರೆಯುವೆನು ಪ್ರೇಮವೆಂದು
ಬಾರೆನ್ನ ಮನದನ್ನೆ , ಬರಲಿ ಹತ್ತಿರ ಕೆನ್ನೆ
ಮುತ್ತಿನಲಿ ಒಂದಾಗಲಿ ಎರಡು ಜೀವ
ಬಾಳಿನೇರಿಳಿತಕ್ಕೆ ಮುಗಿವಿರದ ಪಯಣಕ್ಕೆ
ಶುಭವ ಕೋರಲಿ ತುಂಬಿ ಧನ್ಯ ಭಾವ












Click it and Unblock the Notifications