ಕನ್ನಡಕ್ಕಾಗಿ ವೀರಮರಣವನ್ನಪ್ಪಿದ ಕಟ್ಟಾಳು ರಂಜಾನ್ ಸಾಹೇಬ್
ನಿಮಗೆ ಇಂದು ಕರುನಾಡನ್ನು ಮತ್ತೆ ಕಟ್ಟಲು ತನ್ನ ಬಿಸಿ ರಕ್ತವನ್ನು ತಾಯ್ನೆಲಕ್ಕೆ ಅರ್ಪಿಸಿದ ಮಹಾ ವೀರನ ಬಗ್ಗೆ ತಿಳಿಸುತ್ತೇನೆ. ಸ್ನೇಹಿತರೆ, ಕರ್ನಾಟಕದ ಏಕೀಕರಣ ಬರಿ ಪ್ರತಿಭಟನೆ ಚಳವಳಿಗಳಿಂದ ಆದಿದ್ದಲ್ಲ, ಅಲ್ಲಿ ಹರಿದಿದ್ದು ಬರಿ ನೀರಲ್ಲ ಬಿಸಿ ನೆತ್ತರ!
ಒಂದು ಕಾಲದಲ್ಲಿ ಇಡೀ ಜಂಭೂದ್ವೀಪದ ಒಡೆಯರಾಗಿದ್ದ ಕನ್ನಡಿಗರು. ಕಾಲ ಸರಿದಂತೆ ಕನ್ನಡಿಗರ ಕೊನೆಯ ಸಾಮ್ರಾಜ್ಯ ವಿಜಯನಗರ ಪತನವಾಯಿತು. ಹಲವು ಕುತಂತ್ರದ ನಂತರ ಕನ್ನಡ ದೇಶವು ಹಲವು ಸಾಮಂತರ ಹಾಗೂ ರಾಜರುಗಳ ನಡುವೆ ಹಂಚಿಹೋಗಿತ್ತು.
ನಂತರ ಭಾರತಕ್ಕೆ ಬಂದ ಬ್ರಿಟಿಷರ ಕಾಲದಲ್ಲಿ ಆಡಳಿತದ ಅನುಕೂಲಕ್ಕಾಗಿ 20 ವಿವಿಧ ಸಂಸ್ಥಾನಗಳಲ್ಲಿ ವಿಸ್ತರಣೆಗೊಂಡಿತ್ತು. ಇದರಲ್ಲಿ ಪ್ರಮುಖವಾಗಿ ಮೈಸೂರು ಸಂಸ್ಥಾನ, ನಿಜಾಮನ ಸಂಸ್ಥಾನ, ಬಾಂಬೆ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ ಹಾಗೂ ಕೊಡಗು ಪ್ರಾಂತ್ಯಗಳು ಪ್ರಮುಖವಾಗಿದ್ದವು.

ಗಮನಿಸಬೇಕಾದ ಅಂಶವೆಂದರೆ 2/3ನೇ ಭಾಗದಷ್ಟು ಕನ್ನಡಿಗರು ಮೈಸೂರು ಪ್ರಾಂತ್ಯದಿಂದ ಹೊರಗಿದ್ದರು. ಬಾಂಬೆ ಪ್ರಾಂತ್ಯದಲ್ಲಿ ಮರಾಠಿ ಆಡಳಿತ ಭಾಷೆಯಾಗಿತ್ತು, ಮದ್ರಾಸ್ ಪ್ರಾಂತ್ಯದಲ್ಲಿ ತಮಿಳು ಆಡಳಿತ ಭಾಷೆಯಾಗಿತ್ತು, ನಿಜಾಮರ ಆಡಳಿತದಲ್ಲಿ ಉರ್ದು ಭಾಷೆ.
ಹೀಗಾಗಿ ಕನ್ನಡಿಗರಿಗೆ ತಾವು ಅನಾಥರಾಗಿದ್ದೇವೆ, ತಮ್ಮ ಮೇಲೆ ಭಾಷೆಯ ಹೇರಿಕೆಯಾಗುತ್ತಿದೆ ಅನ್ನೋ ಭಾವನೆ ಜಾಗೃತವಾಗತೊಡಗಿತು. ಬೇರೆಯವರ ಹಂಗಿನಲ್ಲಿ ಪರಕೀಯರಂತೆ ಬಾಳುತ್ತಿದ್ದೇವೆ ಅನ್ನೋ ಭಾವನೆ ಮನೆಮಾಡಿತು.
ಆಗ ಕನ್ನಡಿಗರಿಗೆ ತಮ್ಮದೇ ಆದ ಒಂದು ರಾಜ್ಯವಿರಬೇಕು, ಅಲ್ಲಿ ಕನ್ನಡಿಗರಿಗೆ ಎಲ್ಲಾ ಹಕ್ಕುಗಳು ದೊರೆಯುವಂತಿರಬೇಕು ಅನ್ನೋ ಚರ್ಚೆಗಳು ನಡೆಯತೊಡಗಿದವು. ಇದುವೇ ಮುಂದೆ ಅಖಂಡ ಕರ್ನಾಟಕದ ಏಕೀಕರಣದ ಹೋರಾಟಕ್ಕೆ ನಾಂದಿಯಾಯಿತು.
ನಾಡಿನ ಹಿರಿಯ ಸಾಹಿತಿಗಳು, ಪತ್ರಕರ್ತರು, ಹಾಗೂ ಅನೇಕ ಮಹನೀಯರು ಈ ಚಳವಳಿಗೆ ಹೆಗಲುಕೊಟ್ಟರು. ಕರುನಾಡಿನ ಗತ ವೈಭವದ ಕಹಳೆಯನ್ನ ಮತ್ತೆ ಮರು ಮಾರ್ದನಿಸಲು ಅನೇಕ ಜನರ ಬಲಿದಾನವಾಯಿತು. ಅಂಥವರಲ್ಲಿ - ಈ ವ್ಯಕ್ತಿಯ ಬಲಿದಾನ ಬಹು ದೊಡ್ಡದು.
ಬಿಸಿಲು ನಾಡು ಬಳ್ಳಾರಿಯ ಧಗೆಯ ಧೂಳಿನ ಕಣಗಳಲ್ಲಿ ಹುಟ್ಟಿ, ಅದು ಮಿಂಚಾಗಿ ಕನ್ನಡ ವಿರೋಧಿಗಳಿಗೆ ಸಿಡಿಲಾಗಿ ಆಸ್ಫೋಟಿಸಿದ ಮತ್ತು ಕನ್ನಡಿಗರ ಎದೆಯಲ್ಲಿ ಎಂದೆಂದೂ ಅಮರರಾಗಿ ನಿಂತ ಮಹಾನ ವ್ಯಕ್ತಿ ಪಿಂಜಾರ್ ಪೈಲ್ವಾನ್ ರಂಜಾನ್ ಸಾಹೇಬ್.
ದೇಶ ಸ್ವತಂತ್ರವಾಗಿ ರಾಜ್ಯಗಳು ವಿಂಗಡಣೆ ಆಗುತ್ತಿರುವ ಸಮಯದಲ್ಲಿ ಆಲೂರು ವೆಂಕಟರಾಯರು ಹಚ್ಚಿದ ಕರುನಾಡಿನ ಸ್ವಾತಂತ್ರ್ಯದ ಕಿಡಿ ರಾಜ್ಯದೆಲ್ಲೆಡೆ ಕಾಳ್ಗಿಚ್ಚಿನಂತೆ ವ್ಯಾಪಿಸಿತ್ತು. ಇದಕ್ಕೆ ಮೊದಲ ವಿಜಯ ಪತಾಕೆ ಹಾರಿದ್ದು ಬಳ್ಳಾರಿಯಲ್ಲಿ.
ಬಳ್ಳಾರಿಯನ್ನ ಅಂದಿನ ಕೇಂದ್ರ ಸರ್ಕಾರ ಮೈಸೂರು ರಾಜ್ಯದಲ್ಲಿ ವಿಲೀನಗೊಳಿಸಿತು. ಇದರ ಹಿಂದೆ ಅನೇಕ ಕನ್ನಡಿಗರ ಹೋರಾಟದ ಶ್ರಮವಿತ್ತು. ಇದು ಕೆಲ ಕಿಡಿಗೇಡಿ ತೆಲುಗು ಭಾಷಿಕರಿಗೆ ಸಹಿಸಿಕೊಳ್ಳಲಾಗಲಿಲ್ಲ. ಬಳ್ಳಾರಿ ಆಂಧ್ರನಾಡಿನಲ್ಲಿ ಸೇರಿಸುವ ಬಯಕೆ ಅವರದಾಗಿತ್ತು. ಹೀಗಾಗಿ ವ್ಯಗ್ರಗೊಂಡ ಕೆಲ ತೆಲುಗು ದ್ರೋಹಿಗಳು ಬಳ್ಳಾರಿಯ ಹಲವೆಡೆ ಆಸಿಡ್ ಬಾಂಬ್ ಗಳನ್ನು ಕನ್ನಡ ಹೋರಾಟಗಾರರ ಮೇಲೆಸೆದರು.
ಇಂಥ ಸಮಯದಲ್ಲಿ ತಾಯ್ನೆಲದ ಸೇವೆಗಾಗಿ ಆ ಬಾಂಬಿಗೆ ಬೆದರದೆ ಎದೆಯೊಡ್ಡಿ ವೀರ ಮರಣವನ್ನು ಹೊಂದಿದವರು ನಮ್ಮ ರಂಜಾನ್ ಸಾಹೇಬ್ ಎಂಬ ಕನ್ನಡ ಪ್ರೇಮಿ. ಕೆಲವು ದುಷ್ಟರ ಸಂಚಿಗೆ ಸಿಕ್ಕಿ 30-09-1953ರ ರಾತ್ರಿ ಆಸಿಡ್ ಬಲ್ಬ್ ಗೆ ರಂಜಾನ್ ಬಲಿಯಾದದ್ದು ಅಳಿಯದ ಕಹಿ ನೆನಪು.
ರಾಜ್ಯೋತ್ಸವದ ಇಂತಹ ಸಂದರ್ಭದಲ್ಲಿ ಇವರನ್ನ ನೆನೆಯುವದು ನಮ್ಮ ಕರ್ತವ್ಯ. ಜೊತೆಗೆ, ಇಂದಿನ ಪೀಳಿಗೆಯ ಯುವಜನತೆಗೆ ಅಷ್ಟಾಗಿ ಗೊತ್ತಿಲ್ಲದ ಪೈಲ್ವಾನ್ ರಂಜಾನ್ ಸಾಹೇಬರು ಕನ್ನಡಿಗರ ಹೃದಯದಲ್ಲಿ ಅಜರಾಮರ ಎಂದು ಕೂಗಿ ಹೇಳುವ ಸಮಯವಾಗಿದೆ.
ಇಂತಹ ಅನೇಕ ವೀರರು ಕನ್ನಡ ನಾಡಿನ ಉಳಿವಿಗಾಗಿ ಪ್ರಾಣ ಬಲಿದಾನಗಳ ಮೂಲಕ ತಾಯ್ನೆಲದ ಋಣವನ್ನು ತೀರಿಸಿ, ಕರ್ನಾಟಕದ ಏಕೀಕರಣದಲ್ಲಿ ಪಾಲುದಾರರಾಗಿದ್ದಾರೆ. ಆದರೆ ಇಂದಿನ ದಿನಗಳಲ್ಲಿ ತಮ್ಮ ಸ್ವಾರ್ಥ ಲಾಭಗಳಿಗೋಸ್ಕರ ಕರುನಾಡಿನ ಹಿರಿಮೆಯನ್ನರಿಯದೆ ಕುರುಡರು ಕನ್ನಡ ನಾಡನ್ನು ಒಡೆಯಲು ಸಂಚು ಮಾಡುತ್ತಿದ್ದಾರೆ.
ಗೆಳೆಯರೇ ಇಂತ ಸಂಚುಕೋರರನ್ನು ಸದೆಬಡಿಯೋಣ, ಕನ್ನಡ ನಾಡು ಕನ್ನಡಿಗರು, ಕರ್ನಾಟಕ ಇಂದು ಮುಂದು ಎಂದೆಂದೂ ಒಂದೇ ಎಂದು ಜಗತ್ತಿನ ದಶ ದಿಕ್ಕುಗಳಲ್ಲಿ ಹೆಮ್ಮೆಯಿಂದ ಘರ್ಜಿಸೋಣ. ತಾಯಿ ಕನ್ನಡಾಂಬೆಯ ಕೀರ್ತಿ ಪತಾಕೆಯನ್ನು ಮುಗಿಲು ಮುಟ್ಟುವ ಹಾಗೆ ಮಾಡೋಣ.












Click it and Unblock the Notifications