ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಕ್ತದೊತ್ತಡ ಮಿದುಳಿಗೆ ಕೊಡಲಿ ಪೆಟ್ಟು ನೀಡೀತು, ಹುಷಾರ್!

By ಡಾ. ವಿನೋದ ಕುಲಕರ್ಣಿ, ಹುಬ್ಬಳ್ಳಿ
|
Google Oneindia Kannada News

ನಿಯಂತ್ರಣದಲ್ಲಿರದ ನಿಮ್ಮ ರಕ್ತದ ಒತ್ತಡ, ನಿಮ್ಮ ಮನೋ ಒತ್ತಡಕ್ಕೇನೇ ಬುನಾದಿ ಹಾಕಬಲ್ಲದು. ಮೇ 17ರಂದು ಇಡೀ ವಿಶ್ವ ಬ್ಲಡ್ ಪ್ರಶರ್ ದಿನಾಚರಣೆಯನ್ನು ಆಚರಿಸುತ್ತದೆ. ಈ ಆಚರಣೆ ಯಾವುದೇ ಒಂದು ವ್ಯಕ್ತಿಗೆ, ಸಮಾಜಕ್ಕೆ, ದೇಶಕ್ಕೆ ಮಾತ್ರ ಸೀಮೀತವಾಗಿಲ್ಲ. ಇದು ಇಡೀ ವಿಶ್ವಕ್ಕೇನೇ ಸಂಬಂಧಪಟ್ಟದ್ದಾಗಿದೆ.

ನಮ್ಮ ದೇಹದಲ್ಲಿ, ಯಾವತ್ತೂ ಎಡಬಿಡದೇ, ತನ್ನದೇ ಆದ ಹರಿತ, ಒನಪು, ಒಯ್ಯಾರದಿಂದ, ನಿರಂತರವಾಗಿ, ದಿನದ 24 ಗಂಟೆಯೂ ಹರಿಯುತ್ತಿರುವುದು ನಮ್ಮ ರಕ್ತ. ಹರಿಯಬೇಕಾದರೆ ಒತ್ತಡ ಇರಲೇಬೇಕಲ್ಲವೇ? ಅದಕ್ಕೇನೇ ವಿಜ್ಞಾನಿಗಳು ಇಟ್ಟ ಹೆಸರು ಬ್ಲಡ್ ಪ್ರೆಶರ್ ಅಥವಾ ರಕ್ತದ ಒತ್ತಡ ಎಂಬುದಾಗಿ.

ಈ ವರುಷದ ವಿಶ್ವ ಬ್ಲಡ್ ಪ್ರೆಶರ್ ದಿನಾಚರಣೆಯ (ಇದಕ್ಕೆ ವಿಶ್ವ ಹೈಪರ್ಟೆನ್ಷನ್ ದಿನಾಚರಣೆಯೆಂದೂ ಸಂಬೋಧಿಸುವರು) ಧ್ಯೇಯ ಹೀಗಿದೆ. ನಿಮ್ಮ ನಂಬರ್ಗಳನ್ನು ಅರಿತುಕೊಳ್ಳಿ. ಈ ನಂಬರ್ ಎಂದರೇನು? ಇದು ಆಧಾರ ಕಾರ್ಡ ನಂಬರೇ? ಪ್ಯಾನ್ ಕಾರ್ಡ ನಂಬರೇ? ಊಹೂಂ; ಅದು ಅಲ್ಲವೇ ಅಲ್ಲ. ನಿಮ್ಮ ನಂಬರ್ ಅಂದರೆ ನಿಮ್ಮ ರಕ್ತದ ಒತ್ತಡದ ನಂಬರಗಳು. World Hypertension Leagueರ (ವಿಶ್ವ ಹೈಪರ್ ಟೆನ್ಷನ್ ಲೀಗ್) ರ ಪ್ರಕಾರ, ಎಲ್ಲಾ ಸಾಮಾನ್ಯ ಜನರಲ್ಲಿ, ನಮ್ಮ ರಕ್ತದ ಒತ್ತಡ 140/90-ರ ಕೆಳಗೆ ಇರಬೇಕಂತೆ. [ಆರೋಗ್ಯ ಭಾಗ್ಯ ಕಾಪಾಡಿಕೊಳ್ಳಲು 6 ಸರಳ ಸೂತ್ರಗಳು]

World Hypertension Day : Keep your blood pressure in control

ಇನ್ನು ಅಸಾಮಾನ್ಯರು ಯಾರಿವರು? ಇವರನ್ನು ವಿಶೇಷ ಜನರು? ಎಂದೂ ಕರೆಯಬಹುದು. ಅವರೇ ಈ ಸಿಹಿ ಜನರು, (ಸಕ್ಕರೆ ರೋಗವುಳ್ಳವರು!) ಹಾಗೂ ದೀರ್ಘ ಕಾಲದ ಕಿಡ್ನಿ ಕಾಯಿಲೆಯಿಂದ ಬಳಲುತ್ತಿರುವವರು. ಇವರಲ್ಲಿ ಬಿ.ಪಿ 130/80ರ ಕೆಳಗೆ ಇರಬೇಕಂತೆ. ವಿಶ್ವ ಹೈಪರ್ಟೆನ್ಷನ್ ದಿನಾಚರಣೆಯ ಬಗ್ಗೆ ಜಾಗ್ರತೆ ಮೂಡಿಸಲು, ಜಗತ್ತಿನ ಸುಪ್ರಸಿದ್ಧ ನಯಾಗಾರ ಜಲಪಾತವನ್ನು, ಮೇ 16ರಂದು ರಾತ್ರಿ 10 ಗಂಟೆಗೆ, 15 ನಿಮಿಷಗಳ ಕಾಲ, ಕೆಂಪು ಹಾಗೂ ನೀಲಿ ವರ್ಣಗಳಲ್ಲಿ ಸಿಂಗರಿಸುವರು. ಪ್ರಾಯಶಃ, ಕೆಂಪುವರ್ಣ ಎಲ್ಲೆ ಮೀರಿದ ಬ್ಲಡ್ ಪ್ರೆಶರ್ನಿಂದ ಸಂಭವಿಸಬಲ್ಲ, ಅಪಾಯಗಳ ಮುನ್ಸೂಚನೆ!

ಸುಮಾರು ಜನರಲ್ಲಿ, ಈ ಬ್ಲಡ್ ಪ್ರೆಶರ್ ರೋಗ ಯಾವುದೇ ವಿಶೇಷ ಕಾರಣವಿಲ್ಲದೇನೇ ಬರಬಹುದು. ಇದಕ್ಕೆ ಪ್ರೈಮರಿ ಹೈಪರ್ ಟೆನ್ಷನ್ ಎನ್ನುವರು. ಇನ್ನು, ಹಲವು ಕಾಯಿಲೆಗಳಿಂದಲೂ, ರಕ್ತದ ಒತ್ತಡ ಬರಬಹುದು. ಉದಾ: ಕಿಡ್ನಿ ರೋಗಗಳು, ಅಡ್ರಿನಲ್ ಗ್ರಂಥಿಯ ವಿಪರೀತ ಚಟುವಟಿಕೆ, ನಿದ್ರಾ ಉಸಿರುಗಟ್ಟುವಿಕೆ ರೋಗ, ಟ್ಯೂಮರ್ಗಳು, ಥೈರಾಯ್ಡ್ ಗ್ರಂಥಿಯ ಏರುಪೇರು, ಅಯೋರ್ಟಿಕ್ ಕೋಯಾರ್ಕಟೇಶನ್ ಕಾಯಿಲೆ, ಗರ್ಭಾವಸ್ಥೆ, ಮಿತಿ ಮೀರಿದ ಮದ್ಯಪಾನ, ಜಂಕ್ ಆಹಾರದ ಸೇವನೆ, ಮೊದಲಾದವುಗಳು. [ಎಲ್ಲರ ಕಾಡುತ್ತಿರುವ ಸಕ್ಕರೆ ರೋಗ ಒದ್ದೋಡಿಸುವುದು ಹೇಗೆ?]

ಕಂಡುಹಿಡಿಯುವುದು ಹೇಗೆ? : ಬ್ಲಡ್ ಪ್ರೆಶರ್ ಕಾಯಿಲೆ, ಒಂದು ಮನೋದೈಹಿಕ ರೋಗವೆಂದು ಬಹಳಷ್ಟು ಜನರು ಅರಿತಿರಲಾರರು. ನಮ್ಮ ಮನೋ ಒತ್ತಡ, ನಮ್ಮ ಎಲ್ಲೆ ಮೀರಿದ ದುರಾಸೆ, ನಮ್ಮ ಆತಂಕ, ಖಿನ್ನತೆ, ಆಕಾಂಕ್ಷೆ ಹೌದು! ಇವೆಲ್ಲವೂ, ನಮ್ಮ ದೇಹದ ಗ್ರಂಥಿಗಳ ಮೇಲೆ ವಿಪರೀತ ಪರಿಣಾಮ ಬೀರಿ, ನಮಗರಿವಿಲ್ಲದಂತೆ ಬಿ.ಪಿ. ಕಾಯಿಲೆ ತಂದೊಡ್ಡಿಯಾವು. ಅನೇಕ ಬಾರಿ ರೋಗಿಗಳಿಗೆ ತಲೆ ಸುತ್ತುವದು, ಮುಂಜಾನೆಯ ತಲೆ ನೋವು, ದೃಷ್ಟಿದೋಷ, ಇವುಗಳಿಂದಲೇ, ಹೌದು, ನಮಗೆ ಬಿ.ಪಿ. ತಗುಲಿದೆ ಎಂದು ನಿರ್ಧರಿಸಬಹುದು.

ಇನ್ನು, ಒಂದು ಅಪಾಯಕಾರಿಯಾದ ಸಂಗತಿ ಎಂದರೆ, ಈ ಬಿ.ಪಿ. ರೋಗ ಒಂದು ತರಹದ ಸೈಲೆಂಟ್ ಕಿಲ್ಲರ್ ಅಥವಾ ಮೌನ ಕೊಲೆಗಾರ. ಹಠಾರ್ ಸಾವು, ಹಠಾತ್ ಹೃದಯಾಘಾತ, ಸಡನ್ ಆಗಿ ಕಾಣಿಸಿಕೊಳ್ಳುವ ತೀವ್ರ ತರಹದ ಮೆದುಳಿನ ರಕ್ತ ಸ್ರಾವ-ಇವೆಲ್ಲವೂ ಮೊಟ್ಟ ಮೊದಲಿಗೆ ಕಂಡು ಬಂದಾಗ, ಈ ರೋಗಿ ಬಿ.ಪಿ.ಯಿಂದ ಬಳಲುತ್ತಿರುವನು ಎಂಬುದಾಗಿ ಕಂಡು ಬರುವದು. ಆದರೆ ಆವಾಗ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ. ಅವಘಡ ಸಂಭವಿಸಿ ಬಿಟ್ಟಿರುತ್ತದೆ. ಆದ್ದರಿಂದಲೇ, ಎಲ್ಲರೂ ನಿಯಮಿತವಾಗಿ ತಿಂಗಳಿಗೊಮ್ಮೆಯಾದರೂ, ನಿಮ್ಮ ಕುಟುಂಬ ವೈದ್ಯರ ಬಳಿ ರಕ್ತದ ಒತ್ತಡವನ್ನು ಪರೀಕ್ಷೆ ಮಾಡಿಸಿಕೊಳ್ಳಲೇಬೇಕು. ಇದರಿಂದ ತೀವ್ರ ತರಗತಿಯಲ್ಲಿ ರೋಗ ನಿಧಾನ ಮಾಡಬಹುದು. ಹಾಗೂ ಮುಂದೆ ಸಂಭವಿಸಬಹುದಾದ ಅಪಾಯಗಳನ್ನು ತಡೆಗಟ್ಟಬಹುದು.

ಯಾವ ಅಂಗಾಂಗಗಳಿಗೆ ಅಪಾಯ? : ನಿಯಂತ್ರಣದಲ್ಲಿರದ ಬಿ.ಪಿ, ಹೃದಯ, ಕಣ್ಣು ಹಾಗೂ ಕಿಡ್ನಿಗಳಿಗೆ ಅಪಾಯ ತರಬಲ್ಲದು. ಅನೇಕರಲ್ಲಿ ರಕ್ತದ ಒತ್ತಡ ನಿಯಂತ್ರಣದಲ್ಲಿರದಿದ್ದರೆ, ಈ ಅಂಗಾಂಗಗಳು ಬಲಿಯಾಗುವದು ಒಂದು ಕಟ್ಟಿಟ್ಟ ಬುತ್ತಿ, ಎಂದರೆ, ಉತ್ಪ್ರೇಕ್ಷೆ ಆಗುವದಿಲ್ಲ. [ನೀವು ಸಿಗರೇಟು ಯಾಕೆ ಬಿಡಬೇಕು, ಇಲ್ಲಿವೆ 10 ಕಾರಣ]

ಬಿ.ಪಿ. ಹಾಗೂ ಖಿನ್ನತೆ : ಮೊಟ್ಟ ಮೊದಲು, ಕುಟುಂಬ ವೈದ್ಯರು, ನಿನಗೆ ಬಿ.ಪಿ ತಗುಲಿದೆ ಎಂದು ಹೇಳಿದಾಗ, ಇದೊಂದು ತರಹದ ಸಿಡಿಲಿನಂತೆ ಅಬ್ಬರಿಸಿ, ರೋಗಿಯು ಖಿನ್ನತೆಗೆ ಒಳಗಾಗಿದ್ದ ಅನೇಕ ನಿದರ್ಶನಗಳನ್ನೂ, ನಾನು ಕಂಡಿದ್ದೇನೆ. ಆದುದರಿಂದಲೇ ಅನುಭವಿ ವೈದ್ಯರು ಹೇಗೆ ಮಾತನಾಡಬೇಕು, ಹೇಗೆ ರೋಗವನ್ನು ತಿಳಿಸಬೇಕೆಂಬ ಕಲೆಯನ್ನು ಕರಗತ ಮಾಡಿಕೊಂಡಿರುವರು. ವೈದ್ಯಕೀಯ ಜಗತ್ತು, ಎಷ್ಟರ ಮಟ್ಟಿಗೆ ವೈಜ್ಞಾನಿಕವೋ, (ಪ್ರಾಯಶಃ ಹಲವು ಬಾರಿ ಜಾಸ್ತಿ ಕೂಡಾ!) ಹಾಗೆಯೇ, ಕಲಾತ್ಮಕವೂ ಕೂಡಾ! ಸುಮಾರು 3 ದಶಕಗಳ ಹಿಂದೆ ಬಿ.ಪಿ. ನಿಯಂತ್ರಣದಲ್ಲಿಡಲು ಎರಡು ಪ್ರಖ್ಯಾತ ಔಷಧಿಗಳಾದ ರೆಸರ್ಪಿನ್ ಹಾಗೂ ಅಲ್ಡೋಮೆಟ್ಗಳನ್ನು ಬಳಸುತ್ತಿದ್ದರು. ಆದರೆ, ಅನೇಕರಲ್ಲಿ, ಈ ಔಷಧಿಗಳು ಖಿನ್ನತೆ ಹಾಗೂ ಆತ್ಮಹತ್ಯೆಯ ವಿಚಾರಗಳಿಗೆ ಎಡೆ ಮಾಡಿಕೊಟ್ಟಿದ್ದಕ್ಕೆ ಇವುಗಳ ಬಳಕೆ ಈಗ ನಿಷಿದ್ಧ.

ನಿಯಂತ್ರಣದಲ್ಲಿರದ ಬಿ.ಪಿ ರೋಗದಿಂದ, ಮೆದುಳಿಗೆ ಸ್ಟ್ರೋಕ್ ಆಗಿ, ತದನಂತರ ಈ ರೋಗಿಗಳು ಡೆಮೆನ್ಷಿಯಾ ಎಂಬ ಮನೋವ್ಯಾಧಿಯಿಂದ ಬಳಲಬಲ್ಲರು. ಈ ರೋಗದಲ್ಲಿ, ರೋಗಿಯು ತನ್ನ ನೆನಪಿನ ಶಕ್ತಿ, ತನ್ನ ಜ್ಞಾನ ಬಂಢಾರ, ತನ್ನ ಗಣಿತ ಲೋಕ, ಎಲ್ಲವನ್ನೂ ಕಳೆದುಕೊಳ್ಳವನು. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಬಲ್ಲವರು, ನಿಮ್ಮ ಮನೋವೈದ್ಯರು ಮಾತ್ರ. ಮನೋವೈದ್ಯರೆಂದರೆ ಬರೀ ಮತಿಭ್ರಾಂತಿ ರೋಗಿಗಳಿಗೆ ಮಾತ್ರ ಸೀಮೀತ ಅಲ್ಲವೇ ಅಲ್ಲ.

ಬಿ.ಪಿ.ಯಿಂದ ಉದ್ಭವಿಸಬಲ್ಲ ಖಿನ್ನತೆ, ಆತಂಕ, ತಲೆ ಸುತ್ತುವಿಕೆ, ನಿದ್ರಾಹೀನತೆ, ಅರಳು ಮರಳು, ವಿಸ್ಮರಣೆ, ಆತ್ಮಹತ್ಯೆಯ ವಿಚಾರಗಳು, ಡಿಮೆನ್ಷಿಯಾ ಕಾಯಿಲೆಗೆ, ನಿಮ್ಮ ಮನೋವೈದ್ಯರ ಸಲಹೆ ಹಾಗೂ ಚಿಕಿತ್ಸೆ ರಾಮಬಾಣವಾಗಿ ಪರಿವರ್ತನೆ ಹೊಂದಬಲ್ಲದು. ನೆನಪಿಡಿ, ನಿಯಂತ್ರಣದಲ್ಲಿರದ, ನಿಮ್ಮ ರಕ್ತದ ಒತ್ತಡ, ನಿಮ್ಮ ಮನೋ ಒತ್ತಡಕ್ಕೆ ನಾಂದಿ ಹಾಡೀತು. ನಿಮ್ಮ ಮನ ಹಾಗೂ ಮೆದುಳಿಗೇನೇ ಕೊಡಲಿಪೆಟ್ಟು ನೀಡೀತು!

English summary
Special story by Dr Vinod Kulkarni from Hubballi on World Hypertension Day 2016. He says, hypertension is on the rise in India due to various reasons. He also alerts about this silent killer. Everyone should get his health checked to keep blood pressure in control.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X