ಪ್ರಜೆಗಳನ್ನು ನೋಡಲು ಬಲಿ ಚಕ್ರವರ್ತಿ ಬರ್ತಾನಂತೆ!

By: ಬಿ.ಎಂ.ಲವಕುಮಾರ್
Subscribe to Oneindia Kannada

ಮನೆಯ ಮುಂದೆ ಸುಂದರ ಹೂವಿನ ರಂಗೋಲಿ(ಪೂಕಳಂ)ಯಿಟ್ಟು, ಅದರ ನಡುವೆ ಹಣತೆ ಹಚ್ಚಿ, ಮನೆಯಲ್ಲಿ ಭಕ್ಷ್ಯ-ಭೋಜನ ತಯಾರಿಸಿ ಕೇರಳಿಗರು ರಾಜ ಬಲಿ ಚಕ್ರವರ್ತಿಯನ್ನು ಕಾಯುತ್ತಿದ್ದಾರೆ.

ಅಚ್ಚರಿಯಾಗಬಹುದಲ್ಲವೆ, ಆದರೂ ಸತ್ಯ. ಕೇರಳದ ಜನಕ್ಕೆ ಆ ನಂಬಿಕೆ ಈಗಲೂ ಇದೆ. ಅದಕ್ಕಾಗಿಯೇ ಜನರು ಓಣಂ ಹಬ್ಬವನ್ನು ಆಚರಿಸುತ್ತಾರೆ. ಕೇವಲ ಕೇರಳದಲ್ಲಿ ಮಾತ್ರವಲ್ಲ ಎಲ್ಲೆಲ್ಲಿ ಮಲಯಾಳಿಗರು ವಾಸವಿದ್ದಾರೋ ಅಲ್ಲೆಲ್ಲ ಆಚರಿಸಲಾಗುತ್ತದೆ.[ಕೊಡವ ಕುಟುಂಬದಿಂದ ಸಂಭ್ರಮವ ಕೈಲ್ ಮುಹೂರ್ತ ಆಚರಣೆ]

Onam

ಹಾಗೆ ನೋಡಿದರೆ ಓಣಂ ಕೇರಳದ ನಾಡಹಬ್ಬವೂ ಹೌದು. ಕೃಷಿ ಹಿನ್ನೆಲೆಯಲ್ಲಿ ಆಚರಿಸುವ ಈ ಹಬ್ಬ ಮಳೆ-ಗಾಳಿಗೆ ದುಡಿದು ಬೆಂಡಾದ ಜೀವಗಳಿಗೆ ಸಂತಸ ಸಂಭ್ರಮವನ್ನು ನೀಡುವ ಹಬ್ಬ. ಮುಂಗಾರು ಆರಂಭದಿಂದ ಇಲ್ಲಿಯವರೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು ಅದನ್ನು ಮುಗಿಸಿ, ನೆಮ್ಮದಿಯಿಂದ ಕೂರುವ ಕಾಲ ಇದಾಗಿದೆ.

ಸಿಂಹ ಮಾಸ ಕೇರಳದವರ ಪಾಲಿಗೆ ಚಿನ್ನದ ಮಾಸ. ಈ ಕಾಲದಲ್ಲಿಯೇ ಓಣಂ ಹಬ್ಬ ಬರುತ್ತದೆ. ಈ ಮಾಸದ ಹಸ್ತ ನಕ್ಷತ್ರದಿಂದ ಹತ್ತು ದಿನಗಳ ಕಾಲ ಓಣಂ ಆಚರಣೆಯಲ್ಲಿರುತ್ತದೆ. ಆದರೂ ಶ್ರವಣ ನಕ್ಷತ್ರದ ದಿನ ಬಹುಮುಖ್ಯವಾಗಿದ್ದು, ಇದೇ ತಿರು ಓಣಂ. ಈ ಬಾರಿ ಸೆಪ್ಟೆಂಬರ್ 14ರಂದು ತಿರುಓಣಂ ನಡೆಯಲಿದೆ.[ಸಿಎನ್ ಸಿಯಿಂದ ಮಡಿಕೇರಿಯಲ್ಲಿ ಕೈಲ್ ಪೋಳ್ದ್]

Onam

ಕ್ರಿ.ಶ. 861ರ ರವಿವರ್ಮನ ಕಾಲದ ತಾಮ್ರದ ಶಾಸನದಲ್ಲಿ ಓಣಂ ಕುರಿತಂತೆ ಉಲ್ಲೇಖಗಳಿವೆ ಎಂದು ಹೇಳಲಾಗಿದೆ. ಓಣಂ ಆಚರಣೆ ಹೇಗೆ ಜಾರಿಗೆ ಬಂತು, ಕೇರಳಿಗರೇಕೆ ಬಲಿಚಕ್ರವರ್ತಿಯನ್ನು ಇಂದಿಗೂ ಕಾಯುತ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಎಂಬಂತೆ ಪುರಾಣದ ಕಥೆಯೂ ಇದೆ.

ಬಲಿ ಚಕ್ರವರ್ತಿ ರಾಕ್ಷಸನಾಗಿದ್ದರೂ ಪ್ರಜೆಗಳ ಬಗ್ಗೆ ಕಾಳಜಿವುಳ್ಳವನೂ, ವಾತ್ಸಲ್ಯವುಳ್ಳವನೂ, ಧರ್ಮಿಷ್ಟನೂ, ಮಹಾದಾನಿಯೂ ಹಾಗೂ ಮಹಾ ಪರಾಕ್ರಮಿಯೂ ಆಗಿದ್ದ. ತನ್ನ ಪರಾಕ್ರಮದಿಂದ ಜಗತ್ತನ್ನೇ ಸುತ್ತುವ ದೇವ ವಾಹನವನ್ನು ಪಡೆದಿದ್ದ. ಆದರೆ ಬಲಿಗೆ ದೇವತೆಗಳ ಮೇಲೆ ಯುದ್ಧ ಸಾರಿ, ಅವರನ್ನು ಬಗ್ಗುಪಡೆಯುವ ಹಂಬಲ ಉಂಟಾಗಿತ್ತು. ಇಂದ್ರ ಪದವಿಯನ್ನು ಪಡೆದೇ ತೀರಬೇಕೆಂಬ ದುರಾಸೆಯೂ ಮೂಡಿತ್ತು.[ವಿದ್ಯಾರ್ಥಿಗಳ ಕಲಾಸ್ಪರ್ಶದ 'ಮರುಹುಟ್ಟು ಗಣೇಶ']

Onam

ಹೀಗಾಗಿ ಮಹಾ ಯಾಗ ಮಾಡಲು ಮುಂದಾದ ಬಲಿ ಚಕ್ರವರ್ತಿ, ಈ ವಿಷಯ ದೇವತೆಗಳ ಕಿವಿಗೆ ಬಿತ್ತು. ಇನ್ನು ನಮಗೆ ಉಳಿಗಾಲವಿಲ್ಲ ಹೇಗಾದರೂ ಮಾಡಿ ನಮ್ಮನ್ನು ಕಾಪಾಡು ಎಂದು ವಿಷ್ಣುವಿನ ಮೊರೆ ಹೋದರು. ಬಲಿಯನ್ನು ಉಪಾಯದಿಂದ ಸಂಹರಿಸುವ ತಂತ್ರ ರೂಪಿಸಿದ ವಿಷ್ಣು, ವಾಮನ ರೂಪದಲ್ಲಿ ಬಲಿ ಬಳಿಗೆ ಬರುತ್ತಾನೆ.

ನನಗೆ ತಪಸ್ಸು ಮಾಡಲು ಮೂರು ಅಡಿ ಜಾಗ ಬೇಕೆಂದು ಕೇಳುತ್ತಾನೆ. ಬಲಿ ಚಕ್ರವರ್ತಿಗೆ ವಾಮನನನ್ನು ಕಂಡು ಕನಿಕರ ಉಂಟಾಗಿ, ಜಾಗ ಕೊಡಲು ಒಪ್ಪಿಗೆ ನೀಡುತ್ತಾನೆ. ರಾಕ್ಷಸಗುರು ಶುಕ್ರಾಚಾರ್ಯರಿಗೆ ವಾಮನ ರೂಪದಲ್ಲಿ ಬಂದಾತ ವಿಷ್ಣು ಎಂದು ಗೊತ್ತಾಗುತ್ತದೆ. ಹಾಗಾಗಿ ಆತನಿಗೆ ದಾನವಾಗಿ ಜಾಗವನ್ನು ನೀಡದಂತೆ ಬಲಿ ಚಕ್ರವರ್ತಿಯಲ್ಲಿ ಭಿನ್ನವಿಸಿಕೊಳ್ಳುತ್ತಾರೆ.[ಬೆಂಗಳೂರಲ್ಲಿ ವಿಟ್ಲಪಿಂಡಿ ಉತ್ಸವದ ಸಂಭ್ರಮ ಹೇಗಿತ್ತು?]

onam

ಆದರೆ, ಈಗಾಗಲೇ ದಾನ ನೀಡುವುದಾಗಿ ಮಾತು ಕೊಟ್ಟ ಮೇಲೆ ಅದಕ್ಕೆ ತಪ್ಪುವಾತ ನಾನಲ್ಲ. ವಾಮನನನ್ನು ಹಿಂದಕ್ಕೆ ಕಳುಹಿಸಲಾರೆ ಎಂದು ತಪಸ್ಸಿಗೆ ಸ್ಥಳ ನೀಡುತ್ತಾನೆ. ಇದೇ ಸಂದರ್ಭಕ್ಕಾಗಿ ಕಾಯುತ್ತಿದ್ದ ವಿಷ್ಣು ತ್ರಿವಿಕ್ರಮನಾಗಿ ಆಕಾಶದೆತ್ತರ ಬೆಳೆಯುತ್ತಾನೆ. ಅಲ್ಲದೆ ಒಂದು ಪಾದದಿಂದ ಭೂಮಿಯನ್ನು, ಇನ್ನೊಂದು ಪಾದದಿಂದ ಆಕಾಶವನ್ನು ಅಳೆದು, ಇನ್ನೊಂದು ಪಾದವನ್ನು ಎಲ್ಲಿ ಇಡಲಿ ಎಂದು ಕೇಳುತ್ತಾನೆ.

ಬಲಿ ಚಕ್ರವರ್ತಿ ತನ್ನ ಶಿರವನ್ನು ತೋರಿಸುತ್ತಾನೆ. ಅದರಂತೆ ಪಾದವನ್ನಿಡುತ್ತಿದ್ದಂತೆಯೇ ಬಲಿ ಪಾತಾಳ ಸೇರುತ್ತಾನೆ. ಆದರೆ ಪಾತಾಳ ಸೇರುವ ಮೊದಲು ವರ್ಷಕ್ಕೊಮ್ಮೆ ಪ್ರಜೆಗಳನ್ನು ನೋಡಲು ಅನುಮತಿಯನ್ನು ಕೋರುತ್ತಾನೆ. ಅದಕ್ಕೆ ವಿಷ್ಣು ಒಪ್ಪಿಗೆ ನೀಡುತ್ತಾನೆ. ಆ ಪ್ರಕಾರ ಇಂದಿಗೂ ತಿರುಓಣಂ ದಿನ ಬಲಿಚಕ್ರವರ್ತಿ ಪ್ರಜೆಗಳನ್ನು ನೋಡಲು ಬರುತ್ತಾನೆ ಎಂಬ ನಂಬಿಕೆ ಕೇರಳಿಗರದ್ದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kerala people are waiting to welcome King Bali on the occasion of Onam. King Bali well known for his charity and other great qualities, he pull to patala by Lord Vishnu. He requested Vishnu, want to see his people once in a year. God accepted.
Please Wait while comments are loading...