ದಸರಾದಲ್ಲಿ ಕನ್ನಡ ಚಿತ್ರರಂಗಕ್ಕೆ 'ಅಮೃತ ಸಿಂಚನ'
ಮೈಸೂರು, ಅ.6: ಕನ್ನಡ ವಾಕ್ಚಿತ್ರಕ್ಕೆ ಈಗ 75ರ ಹರೆಯ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ 75ರ ಸಂಭ್ರಮದ ಅಮೃತ ಸಿಂಚನ ಮಾಡುವ ಉದ್ದೇಶದಿಂದ ವಾರ್ತಾ ಇಲಾಖೆ 'ಅಮೃತ ಮಹೋತ್ಸವದ ಸಂಭ್ರಮದಲ್ಲಿ ಕನ್ನಡ ಚಿತ್ರರಂಗ' ಎಂಬ ವಿಷಯ ಸ್ತಬ್ಧಚಿತ್ರವನ್ನು ನಿರ್ಮಿಸಿದೆ.
ಭಾರತೀಯ ಚಿತ್ರರಂಗದೊಂದಿಗೆ ಸರಿಸಮವಾಗಿ ಹೆಜ್ಜೆ ಇಟ್ಟ ಕನ್ನಡ ಚಲನಚಿತ್ರರಂಗಕ್ಕೀಗ ಅಮೃತ ಮಹೋತ್ಸವದ ಸಂಭ್ರಮ. ಮೂಕಿ ಚಿತ್ರಗಳ ಪರಂಪರೆಯನ್ನು ತುಂಡರಿಸಿದ 'ಸತಿ ಸುಲೋಚನ' ಚಿತ್ರವು ಕನ್ನಡ ಚಿತ್ರರಂಗದಲ್ಲಿ ವಿನೂತನ ಭಾಷ್ಯ ಬರೆದಿತ್ತು. 1934ರಲ್ಲಿ ಬಿಡುಗಡೆಗೊಂಡು ಚಿತ್ರರಸಿಕರನ್ನು ತನ್ನ 'ಮಾತಿನ' ಮೋಡಿಯಿಂದ ಮರುಳು ಮಾಡಿತ್ತು. ಅಂದಿನಿಂದ ಆರಂಭವಾದ ವಾಕ್ಚಿತ್ರದ ಪಯಣ 75ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಈ 75 ವರ್ಷಗಳಲ್ಲಿ ಕನ್ನಡ ಚಲನಚಿತ್ರ ರಂಗವು ಅಭೂತಪೂರ್ವ ದಾಖಲೆಗಳನ್ನು ನಿರ್ಮಿಸಿದೆ.
'ಸ್ಯಾಂಡಲ್‌ವುಡ್' ಎಂದು ಗುರುತಿಸಿಕೊಳ್ಳುವ ಕನ್ನಡ ಚಿತ್ರರಂಗ ಇಡೀ ಭಾರತೀಯ ಚಲನಚಿತ್ರ ರಂಗದಲ್ಲೇ ವಾರ್ಷಿಕವಾಗಿ ಅತಿ ಹೆಚ್ಚು ಚಿತ್ರಗಳನ್ನು ನಿರ್ಮಿಸುವ ರಾಜ್ಯಗಳಲ್ಲಿ ಒಂದು ಎಂಬ ಕೀರ್ತಿಯನ್ನು ಹೊಂದಿದೆ. ಚಿತ್ರಗಳ ಸಂಖ್ಯೆಯಿಂದಷ್ಟೇ ಅಲ್ಲ. ಇಲ್ಲಿ ನಿರ್ಮಾಣವಾಗುವ ಗುಣಾತ್ಮಕ ಚಿತ್ರಗಳ ಸಂಖ್ಯೆಯೂ ಗಣನೀಯ. ಇದಕ್ಕೆ ನಿದರ್ಶನವೆನ್ನುವಂತೆ 'ಸಂಸ್ಕಾರ', 'ಘಟಶ್ರಾದ್ಧ', 'ಚೋಮನದುಡಿ', 'ತಬರನ ಕಥೆ', 'ತಾಯಿ ಸಾಹೇಬ', 'ದ್ವೀಪ' ಚಿತ್ರಗಳು ಸ್ವರ್ಣ ಕಮಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿವೆ. ಹಾಗೆಯೇ ಕನ್ನಡದ ಮೇರುನಟ ಡಾ. ರಾಜ್‌ಕುಮಾರ್ ಅವರಿಗೆ ಸಂದ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಕನ್ನಡ ಚಿತ್ರರಂಗಕ್ಕೆ ಇನ್ನೊಂದು ಗರಿ.
ಕಳೆದ ಏಳೂವರೆ ದಶಕಗಳ ಸುದೀರ್ಘ ಪಯಣದಲ್ಲಿ ಪ್ರತಿ ದಶಕದಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದ ಕನ್ನಡ ಚಿತ್ರರಂಗವು ರಾಜ್ಯದ ಭಾಷೆ, ಸಂಸ್ಕೃತಿ, ಕಲೆ, ಪರಂಪರೆಯನ್ನು ಶ್ರೀಮಂತಗೊಳಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ಪೌರಾಣಿಕ ಚಿತ್ರಗಳಿಂದ ಪ್ರಾರಂಭವಾಗಿ, ದಕ್ಷಿಣ ಭಾರತದಲ್ಲೇ ಮೊದಲ ಸಾಮಾಜಿಕ ಚಿತ್ರವನ್ನೂ ನಿರ್ಮಿಸಿದ ಕನ್ನಡ ಚಿತ್ರರಂಗ ಕಾಲಕಾಲದಲ್ಲಾಗುವ ಬದಲಾವಣೆಗಳಿಗೆ ಸೂಕ್ತವಾಗಿ ಸ್ಪಂದಿಸಿದೆ. 90ರ ದಶಕದಲ್ಲಿ ಕಪ್ಪು ಬಿಳುಪಿನ ಪೊರೆ ಕಳಚಿ ವರ್ಣಯುಗವನ್ನು ಪ್ರವೇಶಿಸಿತು.
70ರ ದಶಕದಲ್ಲಿ ಹೊಸ ಅಲೆಯ ಚಿತ್ರಗಳ ಮೂಲಕ ರಾಷ್ಟ್ರದ ಗಮನ ಸೆಳೆದ ಕನ್ನಡ ಚಲನ ಚಿತ್ರರಂಗಕ್ಕೆ ಪುಟ್ಟಣ್ಣ ಕಣಗಾಲ್, ಗಿರೀಶ್ ಕಾಸರವಳ್ಳಿ , ಸಿದ್ಧಲಿಂಗಯ್ಯ, ಹುಣಸೂರು ಕೃಷ್ಣಮೂರ್ತಿ, ಜಿ ವಿ ಅಯ್ಯರ್, ಗಿರೀಶ್ ಕಾರ್ನಾಡ್, ಬಿ ವಿ ಕಾರಂತ, ಪಿ ಲಂಕೇಶ್, ಬರಗೂರು ರಾಮಚಂದ್ರಪ್ಪ , ವಿ ಸೋಮಶೇಖರ್, ದೊರೈ ಭಗವಾನ್, ಅವರಂಥ ಅನೇಕ ದಿಗ್ಗಜರ ಕೊಡುಗೆ ಅನುಪಮ, ಕಾಸರವಳ್ಳಿಯವರು ಕನ್ನಡ ಚಿತ್ರರಂಗಕ್ಕೆ 4 ಸ್ವರ್ಣ ಕಮಲಗಳ ಕೊಡುಗೆಯಿತ್ತರೆ, ಬರಗೂರು ರಾಮಚಂದ್ರಪ್ಪನವರ 'ಶಾಂತಿ' ಗಿನ್ನೆಸ್ ದಾಖಲೆಯನ್ನೇ ಬರೆಯಿತು. ಗಿನ್ನೆಸ್ ದಾಖಲೆ ನಿರ್ಮಿಸಿದ ಮತ್ತೊಬ್ಬ ಎಳೆಯ ಪ್ರತಿಭೆ ಮಾಸ್ಟರ್ ಕಿಶನ್ ಸ್ಯಾಂಡಲ್‌ವುಡ್‌ನ ಕಂಪನ್ನು ಸಾಗರದಾಚೆಗೂ ತಲುಪಿಸಿದ್ದಾರೆ.
ಆಸ್ಟ್ರೇಲಿಯಾ, ಅಮೆರಿಕಾ, ಯು.ಕೆ ಗಳಲ್ಲಿಯೂ ಕನ್ನಡದ ಕಂಪು ಪಸರಿಸಲು ಇತ್ತೀಚಿನ ಚಿತ್ರಗಳು ಕಾರಣವಾಗಿವೆ. 'ಜೋಗಿ', 'ದುನಿಯಾ', 'ಮುಂಗಾರು ಮಳೆ' ಚಿತ್ರರಂಗದ ಹೊಸ ಶಕೆಗೆ ಮುನ್ನುಡಿ ಬರೆದಿವೆ. ಕಳೆದ 75 ವರ್ಷಗಳಲ್ಲಿ ಜನಮನ ಸೂರೆಗೊಂಡ ಕಲಾವಿದರು, ನಿರ್ದೇಶಕರು ಹಾಗೂ ತಂತ್ರಜ್ಞರನ್ನು ಸ್ಮರಿಸುವ ಯತ್ನದ ಫಲವೇ ಈ ಸ್ತಬ್ಧಚಿತ್ರ.
(ದಟ್ಸ್ ಕನ್ನಡ ಸಿನಿವಾರ್ತೆ)
ಗ್ಯಾಲರಿ : ಮೈಸೂರಲ್ಲಿ ಜನಪದ ಜಾತ್ರೆ
ದಸರಾ ಅರಳು ಕವಿಗೋಷ್ಠಿ ಕಾವ್ಯ ಸುಧೆ
ನಾದಲೋಕದಲ್ಲಿ ಮಿಂದೆದ್ದ ಮೈಸೂರು ಜನ
ದಸರಾ ಕ್ಕೆ ಸಾರಿಗೆ ಸಂಸ್ಥೆಯಿಂದ 910 ಬಸ್
ಸರ್ಕಾರದ ವಿರುದ್ಧ ದಂಗೆಯೆದ್ದ ಕ್ರೀಡಾ ತರಬೇತಿಗಾರರು












Click it and Unblock the Notifications