ಐರ್ಲೆಂಡ್ ಪ್ರವಾಸ: ವೈಭವ್ ಸೂರ್ಯವಂಶಿ ಬಗ್ಗೆ ದಿಗ್ಗಜರಿಂದ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ಮಹತ್ವದ ಸಂದೇಶ
Vaibhav Sooryavanshi: ಶ್ರೀಲಂಕಾದ ದಂಬುಲ್ಲಾದಲ್ಲಿ ಏಕದಿನ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ 'ಎ' ವಿರುದ್ಧ ಭಾರತ 'ಎ' ತಂಡ ಭರ್ಜರಿಯಾಗಿ ಗೆಲುವು ಸಾಧಿಸಿ ಟ್ರೋಫಿ ಮುಡಿಗೇರಿಸಿಕೊಂಡಿತು. ಇದಕ್ಕೆ ಪ್ರಮುಖ ಕಾರಣಕರ್ತರಾದವರಲ್ಲಿ 15 ವರ್ಷದ ವಯಭವ್ ಸೂರ್ಯವಂಶಿ ಕೂಡ ಒಬ್ಬರಾಗಿದ್ದಾರೆ. ಇದೀಗ ಇವರನ್ನು ಮುಂಬರು ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಆಡಿಸಬೇಕು ಎನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ.
ಭಾರತ ಮತ್ತು ಐರ್ಲೆಂಡ್ ತಂಡಗಳ ನಡುವೆ ಜೂನ್ 26 ಮತ್ತು ಜೂನ್ 28ರಂದು ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಈ ಸರಣಿಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಭಾರೀ ಕುತೂಹಲದಿಂದ ಕಾಯುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ದೇಶಿ ಕ್ರಿಕೆಟ್‌ನಲ್ಲಿ ದಾಖಲೆಗಳ ಸುನಾಮಿ ಸೃಷ್ಟಿಸಿರುವ ಯುವ ಆಟಗಾರ ವೈಭವ್ ಸೂರ್ಯವಂಶಿ ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಸಾಧ್ಯತೆ ಇರುವುದೇ ಆಗಿದೆ.

ವೈಭವ್‌ಗೆ ದಿಗ್ಗಜರಿಂದ ಸಂಪೂರ್ಣ ಬೆಂಬಲ
ಈ ಹಿನ್ನೆಲೆಯಲ್ಲಿ ವೈಭವ್ ಸೂರ್ಯವಂಶಿ ಅವರನ್ನು ಆಡುವ 11ರ ಬಳಗಕ್ಕೆ ಹೇಗೆ ಸೇರಿಸಿಕೊಳ್ಳುವ ಬಗ್ಗೆ ಮಾಜಿ ಕ್ರಿಕೆಟಿಗರು ಮತ್ತು ಮಾಜಿ ಆಯ್ಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಕಿರಣ್ ಮೋರೆ ಅವರು ಟಾಕ್ ಶೋನಲ್ಲಿ ಮಾತನಾಡುವ ವೇಳೆ ವೈಭವ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.
ಕಿರಣ್ ಮೋರೆ ಹೇಳಿದ್ದೇನು?
'ನಾನೇನಾದರೂ ಟೀಮ್ ಇಂಡಿಯಾದ ನಾಯಕ ಅಥವಾ ಆಯ್ಕೆ ಸಮಿತಿಯ ಅಧ್ಯಕ್ಷನಾಗಿದ್ದರೆ, ಐರ್ಲೆಂಡ್ ಸರಣಿಯಲ್ಲಿ ವೈಭವ್ ಸೂರ್ಯವಂಶಿಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ನೀಡುತ್ತಿದ್ದೆ. ಆತನೇನೂ ಸಾಮಾನ್ಯ ಆಟಗಾರನಲ್ಲ, ಅದ್ಭುತ ಪ್ರತಿಭೆ. ನಮ್ಮ ದೇಶದಲ್ಲಿ ಮೊದಲು ಕಪಿಲ್ ದೇವ್, ಸುನಿಲ್ ಗವಾಸ್ಕರ್ ಬಂದರು. ಆಮೇಲೆ ಸಚಿನ್ ತೆಂಡೂಲ್ಕರ್, ತದನಂತರ ವಿರಾಟ್ ಕೊಹ್ಲಿ ಬಂದರು. ಈಗ ಮತ್ತೆ ಅಂತಹದ್ದೇ ಸಾಮರ್ಥ್ಯ ಹೊಂದಿರುವ ಆಟಗಾರ ನಮಗೆ ವೈಭವ್ ರೂಪದಲ್ಲಿ ಸಿಕ್ಕಿದ್ದಾನೆ,' ಎಂದು ಮುಕ್ತಕಂಠದಿಂದ ಶ್ಲಾಘಿಸಿದರು.
ವೈಭವ್‌ಗೆ ಓಪನರ್ ಆಗಿ ಅವಕಾಶ ನೀಡಲು ತಂಡದ ಹಿರಿಯ ಆಟಗಾರರೊಂದಿಗೆ ಚರ್ಚಿಸಬೇಕು ಎಂದು ಕಿರಣ್ ಮೋರೆ ಸಲಹೆ ನೀಡಿದ್ದಾರೆ. 'ನಾಯಕ ಮತ್ತು ಕೋಚ್ ಇಬ್ಬರೂ ಸೇರಿ ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ಅವರೊಂದಿಗೆ ಮಾತನಾಡಬೇಕು. ಅವರನ್ನು ಬೆಂಚ್ ಮೇಲೆ ಕೂರಿಸಿದ ತಕ್ಷಣ ಅವರ ಸ್ಥಾನಕ್ಕೇನೂ ಧಕ್ಕೆ ಬರುವುದಿಲ್ಲ. ಕೇವಲ ವೈಭವ್ ಅವರಂತಹ ಅಪರೂಪದ ಪ್ರತಿಭೆಯನ್ನು ಪರೀಕ್ಷಿಸಲು ಮಾತ್ರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು,' ಎಂದು ಹೇಳಿದರು.
'ಈ ರೀತಿಯ ಸಂವಹನ ನಡೆಸಿ ವೈಭವ್ ಸೂರ್ಯವಂಶಿ ಅವರನ್ನು ಖಂಡಿತವಾಗಿಯೂ ಪ್ಲೇಯಿಂಗ್ 11ಗೆ ಕರೆತರಬೇಕು. ಆತ ರಾತ್ರಿ ಬೆಳಗಾಗುವುದರೊಳಗೆ ಅದ್ಭುತಗಳನ್ನೇ ಮಾಡದೇ ಇರಬಹುದು, ಆದರೆ ಭವಿಷ್ಯದಲ್ಲಿ ಒಬ್ಬ ಶ್ರೇಷ್ಠ ಲೆಜೆಂಡ್ ಆಗಿ ಬೆಳೆಯುವ ಎಲ್ಲಾ ಲಕ್ಷಣಗಳು ಆತನಲ್ಲಿವೆ,' ಎಂದು ಕಿರಣ್ ಮೋರೆ ಅವರು ಸ್ಪಷ್ಟಪಡಿಸಿದ್ದಾರೆ.
ವೈಭವ್‌ಗೆ ದಿಗ್ಗಜರಿಂದ ಬೆಂಬಲ
ಕಿರಣ್ ಮೋರೆ ಅವರ ಅಭಿಪ್ರಾಯಕ್ಕೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸಬಾ ಕರೀಮ್ ಕೂಡ ಬೆಂಬಲ ಸೂಚಿಸಿದ್ದಾರೆ. ಇದೇ ವೇಳೆ ಅವರು ಈ ಹಿಂದೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 'ಸಚಿನ್ ತೆಂಡೂಲ್ಕರ್ ಮೊದಲ ಬಾರಿಗೆ ಭಾರತ ತಂಡಕ್ಕೆ ಬಂದಾಗ ಅವರಿಗೆ ನಿರ್ದಿಷ್ಟ ಸ್ಥಾನವಿರಲಿಲ್ಲ. ಆದರೆ ಅವರಲ್ಲಿದ್ದ ಅದ್ಭುತ ಪ್ರತಿಭೆಯನ್ನು ಗುರುತಿಸಿದ ಅಂದಿನ ಮ್ಯಾನೇಜ್‌ಮೆಂಟ್, ಆಗಿನ ದೊಡ್ಡ ಆಟಗಾರರನ್ನು ಪಕ್ಕಕ್ಕಿಟ್ಟು ಸಚಿನ್ ಅವರನ್ನು ತಂಡಕ್ಕೆ ಕರೆತಂದಿತು,' ಎಂದು ಹೇಳಿದರು.
'ಬಳಿಕ ಸಚಿನ್ ತೆಂಡೂಲ್ಕರ್ ಅವರನ್ನು ನೇರವಾಗಿ ಅಂತಿಮ ಹನ್ನೊಂದರ ಬಳಗಕ್ಕೆ ಸೇರಿಸಿ ಆಡಿಸಲಾಯಿತು. ವೈಭವ್ ಸೂರ್ಯವಂಶಿ ವಿಷಯದಲ್ಲೂ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಸರಿಯಾಗಿ ಇದೇ ಫಾರ್ಮುಲಾ ಬಳಸಬೇಕು,' ಎಂದು ಸಬಾ ಕರೀಮ್ ತಿಳಿಸಿದರು. ಇದೇ ವೇಳೆ ಲೆಜೆಂಡರಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ವೈಭವ್ ಸೂರ್ಯವಂಶಿ ಐರ್ಲೆಂಡ್ ಪ್ರವಾಸದಲ್ಲಿ ಕಣಕ್ಕಿಳಿಯುವುದು ಖಚಿತ ಎಂದು ಲೈವ್ ಕಾಮೆಂಟರಿ ವೇಳೆ ಮೊದಲೇ ಭವಿಷ್ಯ ನುಡಿದಿದ್ದಾರೆ.
'ವೈಭವ್ ಸೂರ್ಯವಂಶಿ ಅವರನ್ನು ಓಪನರ್ ಆಗಿ ಕಳುಹಿಸಿ, ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರಿಗೆ ಲೀಗ್ ಪಂದ್ಯಗಳಲ್ಲಿ ಅದಲು-ಬದಲು ಮಾಡುವುದರ ಮೂಲಕ ತಲಾ ಒಂದೊಂದು ಪಂದ್ಯದಲ್ಲಿ ವಿಶ್ರಾಂತಿ ನೀಡಲು ಟೀಮ್ ಮ್ಯಾನೇಜ್‌ಮೆಂಟ್ ಯೋಜನೆ ರೂಪಿಸುತ್ತಿದೆ,' ಎಂದು ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಹಿರಿಯ ಆಟಗಾರರ ಬೆಂಬಲದಂತೆ ಈ ಯುವ ಆಟಗಾನಿಗೆ ಅವಕಾಶ ಸಿಕ್ಕರೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಯಾವ ರೀತಿ ಪ್ರದರ್ಶನ ತೋರುತ್ತಾರೆ ಎಂದು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications