ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾದಲೋಕದಲ್ಲಿ ಮಿಂದೆದ್ದ ಮೈಸೂರು ಜನ

By Staff
|
Google Oneindia Kannada News

*ವರದಿ: ಪ್ರಮೋದ್, ಮೈಸೂರು

Kailash Kher Show in Yuva Dasaraಮೈಸೂರು ಅ.4: ನವರಾತ್ರಿಯ ರಂಗಿಗೆ ಇಂಬು ನೀಡುವಂತೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನೇ ದಿನೇ ಸಾರ್ವಜನಿಕರನ್ನು ಆಕರ್ಷಿಸುತ್ತಿದ್ದು, ನಗರದ ಕಲಾಮಂದಿರ, ರಂಗಾಯಣ, ಅರಮನೆ ಆವರಣ, ಮಹಾರಾಜ ಕಾಲೇಜು ಮೈದಾನ, ಜಗನ್ಮೋಹನ ಅರಮನೆ ಹಾಗೂ ವಸ್ತು ಪ್ರದರ್ಶನ ಮೈದಾನ ಪ್ರವಾಸಿಗರ ಆಕರ್ಷಣೀಯ ತಾಣಗಳಾಗಿ ಪರಿಣಮಿಸಿವೆ. ಇನ್ನು ಸಾಹಸ ಪ್ರಿಯರನ್ನು ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಗಳು ಸೆಳೆದಿವೆ.

ಕಲಾ ಮಂದಿರ: ನಗರದ ಕಲಾ ಮಂದಿರದಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಚೆನ್ನೈನ ಎಂಜಿನಿಯರ್ ಸಹೋದರಿಯರೆಂದು ಖ್ಯಾತರಾದ ಕೆ.ರಾಧಿಕಾ ಹಾಗೂ ಜೋತ್ಸ್ನಾ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದೂಷಿ ಇಂದಿರಾ ವೈದ್ಯನಾಥನ್ ಹಾಗೂ ಬಾಂಬೆ ಸಹೋದರಿಯರಿಂದ ಸಂಗೀತ ಕಲಿತು ಜಯಾ ಟಿವಿ ರಾಗಮಾಲಿಕೆಯಲ್ಲಿ ಶಾಸ್ತ್ರೀಯ ಸಂಗೀತ ನಡೆಸಿಕೊಡುವ ಮೂಲಕ ಖ್ಯಾತರಾಗಿರುವ ಈ ಸಹೋದರಿಯರ ಸಂಗೀತ ಕಚೇರಿ ದಸರಾ ಸಂಗೀತಾಸಕ್ತರ ಗಮನ ಸೆಳೆಯಿತು.

ನಂತರ ಖ್ಯಾತ ಹಿನ್ನಲೆ ಗಾಯಕ ರಮೇಶ್‌ಚಂದ್ರ ಹಾಗೂ ತಂಡದ ಕಲಾವಿದರು ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಕೊನೆಯಲ್ಲಿ ಬೆಂಗಳೂರಿನ ಗೌರಿ ನಾಗರಾಜ್ ತಂಡದವರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಛಾಯಾಚಿತ್ರ ಪ್ರದರ್ಶನ: ಕಲಾಮಂದಿರದಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಬಂದ ಸಾರ್ವಜನಿಕರಿಗೆ ಬೋನಸ್ ಎಂಬಂತೆ ಅಲ್ಲಿನ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಹಿರಿಯ ಐಎಫ್‌ಎಸ್ ಅಧಿಕಾರಿ ಎಂ.ಎನ್. ಜಯಕುಮಾರ್ ಹವ್ಯಾಸವಾಗಿ ತೆಗೆದ ಅಪರೂಪದ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ನೋಡುವ ಅವಕಾಶ ಲಭ್ಯವಾಯಿತು. ಪ್ರದರ್ಶನದಲ್ಲಿ ಗುಜರಾತ್‌ನ ವೇಲಾವರದ ಅಭಯಾರಣ್ಯದಲ್ಲಿ ತೆಗೆದ ಬಿಳಿ ಕೃಷ್ಣಮೃಗ, ಅಸ್ಸಾಂನ ಕಾಂಝಿರಂಗದಲ್ಲಿ ತೆಗೆದ ಒಕ್ಕೊಂಬಿನ ಖಡ್ಗಮೃಗ, ಕಬಿನಿ ಹಿನ್ನೀರಿನಲ್ಲಿ ಕಂಡ ಒಂಟಿ ಸಲಗ, ರಾಜಸ್ಥಾನದ ರಣಥಂಬೋರ್ ಕೋಟೆಯ ಎದುರು ವಿರಾಜಮಾನನಾದ ಹುಲಿರಾಯನ ಚಿತ್ರ, ಹಂಪಿಯ ಬಂಡೆಯೊಂದರ ಮೇಲೆ ಗೂಡು ಕಟ್ಟುವುದರಲ್ಲಿ ನಿರತವಾದ ಕೆಂಪು ಅವದಾರ್ ಪಕ್ಷಿ, ಗಿರ್ ಅರಣ್ಯ ಪ್ರದೇಶದಲ್ಲಿ ಸರಸದಲ್ಲಿ ತೊಡಗಿದ್ದ ಏಷ್ಯಾದ ಸಿಂಹಗಳು ಸೇರಿದಂತೆ ಪ್ರದರ್ಶನಕ್ಕೆ ಇಡಲಾಗಿದ್ದ ನೂರಾರು ವನ್ಯಜೀವಿಗಳ ಛಾಯಾಚಿತ್ರಗಳು ವೀಕ್ಷಕರನ್ನು ಮನ ಸೆರೆಹಿಡಿದವು.

ರಂಗಾಯಣ: ಮೈಸೂರಿನ ನಾಟಕ ಕಾಶಿ ರಂಗಾಯಣದಲ್ಲಿ ನಡೆಯುತ್ತಿರುವ ಬಿ.ವಿ.ಕಾರಂತ ನವರಾತ್ರಿ ರಂಗೋತ್ಸವದ ಅಂಗವಾಗಿ ಗುರುವಾರ ರಂಗಪ್ರಿಯರಿಗೆ ಪಿ.ಲಂಕೇಶ್ ಅವರ ಗ್ರೀಕ್ ಅನುವಾದಿತ ನಾಟಕ ಅಂತಿಗೊನೆ ನೋಡುವ ಅವಕಾಶ ದೊರೆಯಿತು. ಗ್ರೀಕ್ ದೊರೆ ಈಡಿಪಸ್‌ನ ಕುರಿತಾದ ಈ ನಾಟಕವನ್ನು ರಂಗಾಯಣ ಪ್ರತಿಭೆ ಎಸ್.ರಾಮು ನಿರ್ದೇಶಿಸಿದ್ದು, ಇಲ್ಲಿನ ಜೆಎಸ್‌ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಮನೋಜ್ಞವಾಗಿ ಅಭಿನಯಿಸಿದರು. ನಾಟಕದ ಆರಂಭಕ್ಕೆ ಮುನ್ನ ನಮ್ಮೊಳಗಿನ ಜಾನಪದ ಕಥೆಗಳ ಕಣಜ ಎಂದು ಪ್ರಸಿದ್ಧರಾಗಿರುವ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿಯ ಈರಬಡಪ್ಪ ಅವರನ್ನು ರಂಗಾಯಣದ ವತಿಯಿಂದ ಸನ್ಮಾನಿಸಲಾಯಿತು. ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಸಮಾರಂಭದ ಆಶಯ ಕುರಿತು ಮಾತನಾಡಿದರು.

ಬೊಂಬೆಮನೆ: ರಂಗಾಯಣದ ಮಗ್ಗುಲಿನಲ್ಲಿರುವ ಶ್ರೀರಂಗ ಮಹಲ್‌ನಲ್ಲಿ ನಗರದ ಗಾಯತ್ರಿ ಶಂಕರ್ ಅವರ ಬೊಂಬೆಗಳ ಪ್ರದರ್ಶನ ವೀಕ್ಷಕರಿಗೆ ಮತ್ತೊಂದು ಬೋನಸ್ ಎಂಬಂತಾಗಿದೆ. ಮಕ್ಕಳು ಹಾಗೂ ಮಹಿಳೆಯರ ಆಕರ್ಷಣೆಯಾಗಿ ಬದಲಾಗಿರುವ ಬೊಂಬೆ ಮನೆಯಲ್ಲಿ ಕೈಲಾಸ ಪರ್ವತದಲ್ಲಿ ಶಿವ-ಪಾರ್ವತಿ ಹಾಗೂ ಗಂಗೆಯರ ಪ್ರಸಂಗ, ಶ್ರೀರಾಮ ಪಟ್ಟಾಭಿಷೇಕ, ವಾರಣಾಸಿಯ ಗೊಂಬೆಗಳು, ತಿರುಪತಿ ಬೆಟ್ಟ, ಕೃಷ್ಣನ ಬಾಲ್ಯ ಪ್ರಸಂಗ, ದಸರಾ ಅಂಬಾರಿ ಮೆರವಣಿಗೆ, ಸಂಗೀತ ಕಚೇರಿಗಳು ನೋಡುಗರ ಗಮನ ಸೆಳೆಯುತ್ತಿವೆ.

ಯುವದಸರಾ: ಮಹಾರಾಜ ಕಾಲೇಜು ಮೈದಾನದಲ್ಲಿ ಈಗ ಅಕಾಲದಲ್ಲಿ ವಸಂತನಾಗಮನದ ಅನುಭವ. ಯುವ ದಸರಾ ಸೃಷ್ಟಿಸಿರುವ ಹೊಸ ಸಂಚಲನ ನವರಾತ್ರಿಯನ್ನು ಬಣ್ಣಗಳ ಹಬ್ಬವಾಗಿ ರೂಪಿಸಿದಂತಿದೆ. ಸಂಜೆಯಾಗುತ್ತಿದ್ದಂತೆಯೇ ಮೈಸೂರಿನ ಯುವಪಡೆಯೇ ಅಲ್ಲಿ ನೆರೆದಂತೆ ತೋರುತ್ತಿದ್ದು, ಪೊಲೀಸರ ಬಿಗಿ ತಪಾಸಣೆಯ ಹಿನ್ನೆಲೆಯಲ್ಲಿ ಅಲ್ಲಿ ನೆರೆಯುವ ಸಾವಿರಾರು ಜನರಿಂದ ಉದ್ಭವವಾಗುತ್ತಿರುವ ಮೈಲುಗಟ್ಟಲೇ ಉದ್ದನೆಯ ಸಾಲು ಕಾರ್ಯಕ್ರಮದ ಅಪಾರ ಜನಾಕರ್ಷಣೆಯನ್ನು ಬಿಂಬಿಸುತ್ತಿದೆ.

ಕಿವಿಗಡಚ್ಚುವ ಸಂಗೀತ ಹಾಗೂ ಜಗಮಗಿಸುವ ಬೆಳಕಿನ ಚಿತ್ತಾರದ ನಡುವೆ ವೇದಿಕೆಯಲ್ಲಿ ನೃತ್ಯದ ಲಯಕ್ಕನುಗುಣವಾಗಿ ಮೈದಾನದಲ್ಲಿ ನೆರದವರು ಹೆಜ್ಜೆ ಹಾಕುತ್ತಿದ್ದು, ಗುರುವಾರ ನಗರದ ಬನುಮಯ್ಯ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟ ಬೆಟ್ಟದ ಮಾದಪ್ಪನಿಗೆ ಶರಣು ಸಮರ್ಪಣೆಯ ನೃತ್ಯ, ಅಕ್ಷಯಭಂಡಾರದ ಗೆಲಾಕ್ಸಿ ತಂಡದವರ ಫ್ಯೂಜನ್ ಡ್ಯಾನ್ಸ್, ಆದರ್ಶ ಪಿ.ರಾವ್ ತಂಡದವರ ವಂದೇ ಮಾತರಂ ನೃತ್ಯ ವೈಭವ ಮತ್ತು ಮುಂಬೈನ ಕೈಲಾಸ್ ಕೇರ್ ತಂಡದ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಗೀತ ಹಾಗೂ ನೃತ್ಯ ಪ್ರಿಯರಿಗೆ ರಸದೌತಣ ಒದಗಿಸಿದವು.

ಇನ್ನು ಅರಮನೆ ಆವರಣದಲ್ಲಿ ನಡೆದ ಸಂಗೀತ ಕಾರ್ಯಕ್ರಮ ಹಾಗೂ ಆಹಾರ ಮೇಳ ನಡೆಯುತ್ತಿರುವ ಕಾಡಾ ಆವರಣದಲ್ಲಿ ಭಾರತೀಯ ಕಲಾ ಕೇಂದ್ರ ತಂಡದವರು ಅಭಿನಯಿಸಿದ ಟಿಪ್ಪು ಸುಲ್ತಾನ್ ನಾಟಕ ನೋಡುಗರ ಮೆಚ್ಚುಗೆ ಗಳಿಸಿದವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X