ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಸರಾ ಅರಳು ಕವಿಗೋಷ್ಠಿ ಕಾವ್ಯ ಸುಧೆ

By Staff
|
Google Oneindia Kannada News

ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಶನಿವಾರ(ಅ.4) ತಾರುಣ್ಯದ ಕಂಪು... ದಸರಾ ಅರಳು ಕವಿಗೋಷ್ಠಿ ಅಂಗವಾಗಿ ನಾಡಿನ ವಿವಿಧ ಕಡೆಯಿಂದ ಆಗಮಿಸಿದ್ದ ಮೂವತ್ತಕ್ಕೂ ಹೆಚ್ಚು ಯುವ ಕವಿಗಳು ತಮ್ಮ ಕಾವ್ಯ ಸುಧೆ ಹರಿಸಿದರು.

ಗೋಷ್ಠಿಯ ತುಂಬಾ ಯುವಮನಗಳು ವಾಚಿಸಿದ ಕವನಗಳ ಲಹರಿಯಲ್ಲಿ ಬಹುತೇಕ ಪ್ರೀತಿ, ಪ್ರೇಮ, ಪ್ರಣಯದ ಹುಚ್ಚು ಖೋಡಿ ಹರಿದಾಡಿದರೆ ನಡುವೆ ಒಂದಷ್ಟು ಸಮಯ ಭ್ರಷ್ಟಾಚಾರ, ಮತಾಂತರ, ಬಾಂಬ್ ಸ್ಫೋಟ, ದೇಶಭಕ್ತಿ, ನಾಡಪ್ರೇಮ, ರಾಜಕೀಯ, ಜಾಗತೀಕರಣ ಹೀಗೊಂದಿಷ್ಟು ವಿಚಾರಗಳು ಪದಗಳ ಪ್ರಾಸ ಜೋಡಣೆಯೊಡನೆ ಸಭಾಂಗಣದಲ್ಲಿ ಗಂಭೀರತೆ ಹರಡಿದವು.
ಮುಂಜಾನೆ ಹಿರಿಯ ನಟ ಶ್ರೀನಾಥ್ ದೀಪ ಬೆಳಗುವುದರ ಮೂಲಕ ಕವಿಗೋಷ್ಠಿಗೆ ವಿದ್ಯುಕ್ತ ಚಾಲನೆ ನೀಡಿ, ತಮ್ಮ "ಪ್ರಣಯ ರಾಜ" ಬಿರುದಿತ ತಾತ್ಪರ್ಯ ಬಿಚ್ಚಿಡುತ್ತಾ ಪ್ರಣಯ ಕೇವಲ ಪ್ರೇಮಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ ನಿರ್ಮಲ ಸ್ನೇಹ ಮತ್ತು ಪ್ರೀತಿಯ ನಡುವೆಯೂ ಒಡಮೂಡುವಂತಹದ್ದು. ಬದುಕಿನಲ್ಲಿ ಗೆಳೆತನದ ಬಂಧವನ್ನು ಸದಾ ಉಳಿಸಿಕೊಳ್ಳುವಂತೆ ಕರತಾಡನದ ನಡುವೆ ಯುವ ಗೆಳೆಯರಿಗೆ ಕಿವಿಮಾತು ಹೇಳಿದರು.

ಸಮಾರಂಭದ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಶಂಕರಲಿಂಗೇಗೌಡ ಮಾತನಾಡಿ, ಕಾವ್ಯ ಆರೋಗ್ಯಕರ ಬದುಕಿನ ಹೆಗ್ಗುರುತು. ಅದರ ಅಭಿರುಚಿ ಬೆಳೆಸಿಕೊಂಡಲ್ಲಿ ಒತ್ತಡ ಮುಕ್ತ ನೆಮ್ಮದಿಯ ಬದುಕು ಸಾಧ್ಯ. ತಮ್ಮ ಕಾವ್ಯಾಸಕ್ತಿಯೇ ರಾಜಕೀಯ ಬದುಕಿನ ನಿರಂತರ ಯಶಸ್ಸಿಗೆ ಸಾಧ್ಯ ಎಂದು ಹೇಳಿದರು.

ನಂತರ ಆರಂಭವಾದ ಕವಿಗೋಷ್ಠಿಯಲ್ಲಿ ಯುವ ಕವಿ ಹೇಮಂತಕುಮಾರ್ ಕರುನಾಡ ಸಿರಿಯ ಅನ್ವೇಷಣೆಯ ಬಗ್ಗೆ ಕವನ ವಾಚನ ಮಾಡಿದರೆ, ಎನ್.ಆರ್.ರೂಪಶ್ರೀ ನಿತ್ಯ ಸತ್ಯವ ಸಾರಲು ನೀ ಮತ್ತೆ ಹುಟ್ಟಿ ಬಾ ಗಾಂಧೀಜಿ ಎಂದು ತಮ್ಮ ಆಶಯ ತೋಡಿಕೊಂಡರು. ಎಂ.ಎನ್. ಕವಿತಾ ಇವರು ಹೀಗೆಯೇ ಎಂಬ ಶೀರ್ಷಿಕೆಯ ಕವನ ವಾಚಿಸಿ ಬದುಕಿನ ಪ್ರೀತಿ ಕುಂದಿಸುವ ನಮ್ಮ ಸಣ್ಣತನಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟು ನೆರೆದವರನ್ನು ಆತ್ಮವಿಮರ್ಶೆಗೆ ಹಚ್ಚಿದರು.

ಈ ಮಧ್ಯೆ ಮಹಾರಾಣಿ ಕಾಲೇಜಿನ ಅನುಪಮಾ, "ಹರೆಯದ ಹದಿನಾರರ ಪ್ರಾಯಕ್ಕೆ ಮಿಂಚು ತಂದ ಮಾಯಗಾರನೇ ಓ ಪ್ರಿಯತಮನೇ ಎಂದು ಕಾವ್ಯ ವಾಚಿಸಿ ಸಭಾಂಗಣದ ಹಸಿರ ನಡುವೆ ಬಹುಸಂಖ್ಯೆಯಲ್ಲಿ ನೆರೆದಿದ್ದ ತರಳೆಯರ ಮುಖದಂಚಿನಲ್ಲಿ ಕೆಂಪು ಕಿಚ್ಚು ಮೂಡಲು ಕಾರಣರಾದರು.

ಯುವ ಗೆಳೆಯರ ನಡುವೆ ತುಳು ಭಾಷೆಯಲ್ಲಿ ಕವನ ವಾಚಿಸಿದ ದಕ್ಷಿಣ ಕನ್ನಡದ ಆಶಾ ರೈ ತಾಳತ್ತಮನೆ ಅದು ಅರ್ಥವಾಗದೆ ಸುಮ್ಮನೆ ಕೂತಿದ್ದ ಕೇಳುಗರಿಗೆ ಕನ್ನಡದಲ್ಲಿ ಅರ್ಥ ಹೇಳಿ ಚಪ್ಪಾಳೆ ಗಿಟ್ಟಿಸಿದರು.

ಪಕ್ಕದ ತಮಿಳುನಾಡಿನ ಕನ್ನಡ ನೆಲ ತಾಳವಾಡಿಯಿಂದ ಆಗಮಿಸಿದ್ದ ಸಿ.ಗುರುಸ್ವಾಮಿ ಹರಿದು ಹಂಚಿಹೋದ ಕನ್ನಡದ ನೆಲವನ್ನು ಒಗ್ಗೂಡಿಸಿ ಅಖಂಡ ನಾಡು ಕಟ್ಟುವಂತೆ ತಮ್ಮ ಕವನದ ಮೂಲಕ "ಪ್ರೀತಿಯ ಕರೆ" (ಕವನದ ಶೀರ್ಷಿಕೆ) ನೀಡಿದರು.

ಆಕಾಶವಾಣಿಯ ಕೃ.ಪ.ಮಂಜುನಾಥ್ ತಮ್ಮ 'ಬತ್ತಿ ಹೋಗದ ಬಯಕೆ' ಶೀರ್ಷಿಕೆಯ ಕವನ ವಾಚಿಸಿದರೆ, ಮಂಡ್ಯದ ಎ.ಆರ್.ಬಾಲಕೃಷ್ಣ ತಮ್ಮ ಕವನದ ಮೂಲಕ ಹಿರಿಯ ಕಲಾ ಚೇತನ ಡಾ.ರಾಜ್‌ಕುಮಾರ್‌ಗೆ ನಮನ ಅರ್ಪಿಸಿದರು. ಶೋಭಿತ 'ಶೂನ್ಯವಾದವಳು' ಎಂಬ ಶೀರ್ಷಿಕೆಯಡಿ ವೇದನೆ ಹೇಳಿಕೊಂಡರೆ, ಎ.ಎಲ್.ವಿಜಯಲಕ್ಷ್ಮಿ ಕಾಣದಾದ ನಲ್ಲನ ಬಗ್ಗೆ ಕವನ ವಾಚಿಸಿದರು. ಇನ್ನು ಆದಿಲ್ ಪಾಶಾ ಛಿದ್ರಗೊಂಡ ಕನ್ನಡಿಗರನ್ನು ಒಟ್ಟುಗೂಡಿಸೋಣ, ಜೇನು ಗೂಡು ಕಟ್ಟೋಣ ಎನ್ನುತ್ತಾ ಇತ್ತೀಚಿನ ಭಯೋತ್ಪಾದಕ ಕೃತ್ಯಗಳನ್ನು ತಮ್ಮ ಕವನದ ಮೂಲಕ ಖಂಡಿಸಿದರು.
ಹೇಮ ಯರಿಯೂರು 'ಬಂಜೆಯ ಬೇಗುದಿ' ಎಂಬ ಕವನದ ಮೂಲಕ ಸ್ತ್ರೀ ಸಂವೇದನೆಗಳ ಒಳಸುಳಿಯನ್ನು ಬಿಚ್ಚಿಟ್ಟರೆ, ಅಖಿಲಾ ಶೃಂಗೇರಿ' ಸತ್ತವರ ಹಾದಿ 'ಎಂಬ ಕವನದ ಮೂಲಕ ಕಾವ್ಯಾಸಕ್ತರನ್ನು ಗಂಭೀರ ನೆಲೆಗೆ ಕೊಂಡೊಯ್ದರು.

ವಿಜ್ಞಾನದ ವಿದ್ಯಾರ್ಥಿಗಳಾದ ಬಿ.ಆರ್. ಸಿಂಧೂರ, ಮಂಜುನಾಥ ನರಗುಂದ ತಮ್ಮ ಭಿನ್ನ ಚಿಂತನೆಯ ಕವನಗಳ ಮೂಲಕ ಗಮನ ಸೆಳೆದರು.ಸಾಹಿತಿ ಡಾ.ವಿಕ್ರಮ ವಿಸಾಜಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ, ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯೆ ಪ್ರೊ.ಕೆ.ನಾಗಲಕ್ಷ್ಮಿ ಉಪಸ್ಥಿತರಿದ್ದರು. ದಸರಾ ಅರಳು ಕವಿಗೋಷ್ಠಿ ಉಪಸಮಿತಿ ಉಪಾಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅತಿಥಿಗಳನ್ನು ಸ್ವಾಗತಿಸಿ ಸಮಾರಂಭದ ಆಶಯದ ಬಗ್ಗೆ ತಿಳಿಸಿದರು. ಪ್ರೊ.ಎ.ಕೆ. ಹಂಪಣ್ಣ ನಿರೂಪಿಸಿದರು. ಕವಿಗೋಷ್ಠಿಯ ಆರಂಭಕ್ಕೆ ಮುನ್ನ ಕಾಲೇಜಿನ ವಿದ್ಯಾರ್ಥಿನಿ ಕೆ.ದಿವ್ಯಶ್ರೀ ಭರತನಾಟ್ಯ ಪ್ರದರ್ಶನ ನೀಡಿದರು.
ಗ್ಯಾಲರಿ : ಮೈಸೂರಲ್ಲಿ ಜನಪದ ಜಾತ್ರೆ

ನಾದಲೋಕದಲ್ಲಿ ಮಿಂದೆದ್ದ ಮೈಸೂರು ಜನ
ಕ್ರೀಡಾ ತರಬೇತಿಗಾರರ ಪ್ರತಿಭಟನೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X