ಶ್ರೀಗಂಧ ಮರ ಕಳ್ಳತನ ತಡೆಗೆ KSDL ಹೊಸ ಪ್ಲ್ಯಾನ್; ತಾಂತ್ರಿಕ ಪರಿಹಾರಗಳಿಗೆ ಆಹ್ವಾನ, ರೈತರಿಗೆ ಸಿಹಿಸುದ್ದಿ
ಬೆಂಗಳೂರು: ಕರ್ನಾಟಕ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪ್ ತಯಾರಿಕೆಗೆ ಶ್ರೀಗಂಧವು ಪ್ರಮುಖ ಕಚ್ಚಾ ವಸ್ತುವಾಗಿದೆ. ಅದರ ಬೆಳೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಹಾಗೂ ಶ್ರೀಗಂಧ ಮರದ ಕಳ್ಳತನ ತಡೆಯಲು ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್ಡಿಎಲ್) ಮಹತ್ವದ ಉಪಕ್ರಮವೊಂದನ್ನು ರೂಪಿಸಿದೆ. ತಂತ್ರಜ್ಞಾನ ನೆರವನ್ನು ಕೋರಲಾಗಿದೆ.
ಉತ್ಪನ್ನಗಳ ತಯಾರಿಕೆ ಅತ್ಯವಶ್ಯಕವಾಗಿರುವ ಶ್ರೀಗಂಧದ ಮರ/ಗಿಡಗಳ ಕಳ್ಳತನ ತಡೆಯುವುದು ಕೂಡ ದೊಡ್ಡ ಸವಾಲಾಗಿದೆ. ಹೀಗಾಗಿ ಅವರುಗಳ ಕಳ್ಳತನತಡೆಗೆ ಯಾರೇ ತಂತ್ರಜ್ಞಾನದ ನೆರವು ನೀಡಿದರೂ ಅದನ್ನು ಸ್ವೀಕರಿಸಲು ಸಂಸ್ಥೆ ಸಿದ್ಧ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಗುರುವಾರ ತಿಳಿಸಿದ್ದಾರೆ.

ಈ ಉಪಕ್ರಮದ ಭಾಗವಾಗಿ, ಶ್ರೀಗಂಧ ಕಳ್ಳತನ ತಡೆಗೆ ಸಂಬಂಧಿಸಿದ ಸುಧಾರಿತ ಉಪಕರಣಗಳು ಅಥವಾ ಆಧುನಿಕ ತಂಜ್ಞಾನಗಳ ಮಾಹಿತಿ ಹೊಂದಿರುವ ರೈತರು, ವಿಜ್ಞಾನಿಗಳು ಹಾಗೂ ಸಂಸ್ಥೆಗಳಿಗೆ ಕೆಎಸ್ಡಿಎಲ್ ಅನ್ನು ಸಂಪರ್ಕಿಸಿ ಮಾಹಿತಿ ಹಂಚಿಕೊಳ್ಳುವಂತೆ ಕೋರಲಾಗಿದೆ. ಸಂಸ್ಥೆಯ ಮುಂದೆ ಇಂತಹ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ನೀಡಲು ಅವಕಾಶ ಕಲ್ಪಿಸಲಾಗುತ್ತದೆ.
ಪ್ರಸ್ತಾಪಿತ ಪರಿಹಾರಗಳು ಸೂಕ್ತ ಹಾಗೂ ಪರಿಣಾಮಕಾರಿ ಎಂದು ಕಂಡು ಬಂದರೆ, ಅವುಗಳನ್ನು ಪರಿಗಣಿಸಿ ಅನುಷ್ಠಾನಗೊಳಿಸಲಾಗುವುದು. ಆಯ್ಕೆಯಾಗುವ ಯಾವುದೇ ತಂತ್ರಜ್ಞಾನದ ಅನುಷ್ಠಾನಕ್ಕೆ ಬೇಕಾಗುವ ವೆಚ್ಚವನ್ನು ಕೆಎಸ್‌ಡಿಎಲ್ ಭರಿಸಲಿದೆ ಎಂದು ಸಚಿವರು ವಿವರಿಸಿದ್ದಾರೆ.
ಶ್ರೀಗಂಧ ರೈತರಿಗೆ ಸನ್ಮಾನ
ಶ್ರೀಗಂಧ ಬೆಳೆ ಉತ್ತೇಜಿಸುವ ಉದ್ದೇಶದಿಂದ ಕೆಎಸ್ ಡಿಎಲ್ ಗೆ ಅತಿ ಹೆಚ್ಚು ಪ್ರಮಾಣದಲ್ಲಿ ಶ್ರೀಗಂಧ ಪೂರೈಸಿದ ನಾಲ್ವರು ರೈತರನ್ನು ಜೂನ್ 4ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಇದೇ ವೇಳೆ, ಶ್ರೀಗಂಧ ಚೋರರನ್ನು ಬಂಧಿಸುವಲ್ಲಿ ಹಾಗೂ ಪ್ರಕರಣ ದಾಖಲಿಸುವಲ್ಲಿ ಗಮನಾರ್ಹ ಸಾಧನೆ ಮಾಡಿರುವ ಪೊಲೀಸ್ ಸಿಬ್ಬಂದಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಈ ಸಂಬಂಧ ಮಹತ್ವದ ಮಾಹಿತಿ ನೀಡಿದ ಸಾರ್ವಜನಿಕರನ್ನು ಪುರಸ್ಕರಿಸಲಾಗುವುದು ಎಂದರು.
ಶ್ರೀಗಂಧ ಬೆಳೆಗಾರರಿಗೆ ಕಳ್ಳತನದ ಭೀತಿ
ತಮ್ಮ ಜಮೀನುಗಳಲ್ಲಿ ಶ್ರೀಗಂಧ ಬೆಳೆಸುತ್ತಿರುವ ರೈತರು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿ ಕಳ್ಳತನದ ಭೀತಿ ಎದುರಿಸುತ್ತಿದ್ದಾರೆ. ಶ್ರೀಗಂಧ ಮರಗಳ ಅಕ್ರಮ ಕಟಾವು ಮತ್ತು ಕಳವು ದಶಕಗಳಿಂದ ಮುಂದುವರಿದಿದೆ. ಇಂತಹ ಕೃತ್ಯಗಳನ್ನು ತಡೆಯಲು ಕಠಿಣ ಕಾನೂನುಗಳಿದ್ದರೂ ಶಿಕ್ಷೆಯಲ್ಲಿ ಕೊನೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ತುಂಬಾ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕಾನೂನು ಮತ್ತು ತಾಂತ್ರಿಕ ನೆರವು ನೀಡುವ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ಶ್ರೀಗಂಧ ಬೆಳೆ ಬೆಳೆಯಲು ಉತ್ತೇಜಿಸುವುದು ಸಂಸ್ಥೆಯ ಹೊಣೆಗಾರಿಕೆಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
174.5 ಮೆಟ್ರಿಕ್ ಟನ್ ಶ್ರೀಗಂಧ ಖರೀದಿ
ಕಳೆದ ಮೂರು ವರ್ಷಗಳಲ್ಲಿ ಕೆಎಸ್ಡಿಎಲ್ ರಾಜ್ಯದ ವಿವಿಧ ಭಾಗಗಳ ರೈತರಿಂದ 174.5 ಮೆಟ್ರಿಕ್ ಟನ್ ಶ್ರೀಗಂಧವನ್ನು ಖರೀದಿಸಿದೆ. ಅವರ ಖಾತೆಗಳಿಗೆ ಒಟ್ಟು ರೂ 6.08 ಕೋಟಿ ಹಣವನ್ನು ನೇರ ವರ್ಗಾವಣೆ ಮಾಡಿದೆ ಎಂದು ಪಾಟೀಲ ಅವರು ಮಾಹಿತಿ ನೀಡಿದರು.













Click it and Unblock the Notifications