ಫ್ಯಾಷನ್ ಯುಗದಲ್ಲಿ ಹೊಸತನದ ಹೇರ್ ಸ್ಟೈಲ್‌ನತ್ತ ಯುವಕರ ಚಿತ್ತ
ಇದು ಫ್ಯಾಷನ್ ಯುಗ, ಇಲ್ಲಿ ಏನೇ ಮಾಡಿದರೂ ಅದು ಫ್ಯಾನ್ಸಿ ಆಗಿರಬೇಕೆಂದು ಬಯಸೋದು ಸಹಜವೇ. ಅದರಲ್ಲೂ ಧರಿಸುವ ಉಡುಪಿಗೆ ತಕ್ಕಂತೆ, ತಮ್ಮ ಹೇರ್ ಸ್ಟೈಲ್‌ನಲ್ಲೂ ಫ್ಯಾಷನ್ ಇರಬೇಕೆಂದು ಬಯಸುವವರು ಇಲ್ಲದಿಲ್ಲ. ಜೊತೆಗೆ ಒಂದೇ ಹೇರ್ ಸ್ಟೈಲ್‌ಗೆ ಜೋತು ಬೀಳುವ ಕಾಲ ಬದಲಾಗಿದ್ದು, ಯುವಕರು ಹೊಸ, ಹೊಸ ಹೇರ್ ಸ್ಟೈಲ್ಗಳನ್ನು ಮಾಡುವುದು ಹೊಸ ಬೆಳವಣಿಗೆಯಾಗಿದೆ.
ಹಾಗೆ ನೋಡಿದರೆ ಕಾಲಕ್ಕೆ ತಕ್ಕಂತೆ ಹೇರ್ ಸ್ಟೈಲ್ಗಳು ಕೂಡ ಬದಲಾಗಿವೆ. ಹಿಂದಿನ ಸಿನಿಮಾಗಳನ್ನು ನೋಡಿದರೆ ಅದರಲ್ಲಿನ ಹೀರೋ, ವಿಲನ್‌ಗಳ ಹೇರ್ ಸ್ಟೈಲ್ಗಳನ್ನು ಗಮನಿಸಿದರೆ ಕಾಲಕ್ಕೆ ತಕ್ಕಂತೆ ಹೇರ್ ಸ್ಟೈಲ್ಗಳು ಕೂಡ ಬದಲಾಗಿವೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಆಟಗಾರರು, ನಟರು ಹೀಗೆ ಸೆಲೆಬ್ರಿಟಿಗಳು ತಮ್ಮದೇ ಆದ ಹೇರ್ ಸ್ಟೈಲ್ಗಳನ್ನು ಪರಿಚಯಿಸುತ್ತಿರುವುದು ಹೊಸದೇನಲ್ಲ. ಅವರು ಹೇಗೆ ಹೇರ್ ಸ್ಟೈಲ್ ಚೇಂಜ್ ಮಾಡುತ್ತಿದ್ದಂತೆಯೇ ಅಭಿಮಾನಿಗಳು ಕೂಡ ಅದನ್ನು ಅನುಕರಿಸುತ್ತಾರೆ.

ಇತ್ತೀಚೆಗಿನ ದಿನಗಳಲ್ಲಿ ನಟರು ಆಟಗಾರರ ಹೇರ್ ಸ್ಟೈಲ್ಗಳ ಚಿತ್ರಗಳನ್ನು ಸೆಲೂನ್‌ಗಳಲ್ಲಿ ಇಡಲಾಗುತ್ತಿದ್ದು, ಅದರಂತೆ ಕಟಿಂಗ್ ಮಾಡಿಸಿಕೊಂಡು ಖುಷಿ ಪಡುವ ಫ್ಯಾನ್ಸ್ ದೊಡ್ಡಮಟ್ಟದಲ್ಲಿದೆ. ಇನ್ನು ಕೆಲವರು ಕಟ್ಟಿಂಗ್ ಶಾಪ್‌ನಲ್ಲಿ ತಮ್ಮದೇ ಆದ ಹೊಸ ಬಗೆಯ ಕಟಿಂಗ್ ಮಾಡಿಕೊಡುವಂತೆ ದುಂಬಾಲು ಬೀಳುವುದು ಕಂಡು ಬರುತ್ತದೆ. ಇದು ನಾವು ಏನೇ ಮಾಡಿದರೂ ಅದರಲ್ಲೊಂದು ಆಕರ್ಷಣೆ ಇರಬೇಕು ಎಂದು ಬಯಸುವ ಯುವ ಸಮುದಾಯದ ಆಕಾಂಕ್ಷೆಯಾಗಿದ್ದು, ಆ ಕಾರಣಕ್ಕಾಗಿಯೇ ನಾವೀನ್ಯದ ಹೇರ್ ಕಟ್ಟಿಂಗ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಎದ್ದು ಕಾಣುತ್ತಿದೆ.
ಸೆಲೆಬ್ರಿಟಿಗಳ ಹೇರ್ ಸ್ಟೈಲ್ ಅನುಕರಣೆ
ಒಂದು ಕಾಲದಲ್ಲಿ ಬಟ್ಟೆ ಧರಿಸೋದು ಮಾನಮುಚ್ಚೋಕೆ ಎಂಬಂತೆ ಯಾವುದೋ ಫ್ಯಾಂಟ್‌ಗೆ ಮತ್ಯಾವುದೋ ಶರ್ಟ್ ಹಾಕಿಕೊಳ್ಳುತ್ತಿದ್ದರು. ಡ್ರೆಸ್‌ಗೆ ಹೆಚ್ಚಿನ ಒತ್ತು ಕೊಡುತ್ತಿರಲಿಲ್ಲ. ಈಗ ಹಾಗಿಲ್ಲ. ಎಲ್ಲವೂ ಬದಲಾಗಿದೆ. ತಮ್ಮ ಕೆಲಸ ಕಾರ್ಯಗಳಿಗೆ ಎಷ್ಟು ಒತ್ತು ಕೊಡುತ್ತೇವೆಯೋ ಹಾಗೆಯೇ ನಮ್ಮ ಬಟ್ಟೆ ಮತ್ತು ಅದಕ್ಕೆ ತಕ್ಕಂತೆ ಹೇರ್ ಸ್ಟೈಲ್ ಇರಬೇಕೆಂದು ಬಯಸುತ್ತಾರೆ. ಹಾಗಾಗಿ ಏನಾದರೊಂದು ಹೊಸ ಫ್ಯಾಷನ್‌ಗಳ ಅನ್ವೇಷಣೆಯಲ್ಲಿಯೇ ಯುವಜನತೆ ಇರುತ್ತಾರೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.
ಸೆಲೆಬ್ರಿಟಿಗಳನ್ನು ನೋಡಿ ಅವರ ಬಟ್ಟೆ ಹೇರ್‌ಸ್ಟೈಲ್‌ಗಳನ್ನು ಅನುಕರಣೆ ಮಾಡುವುದು ಇವತ್ತಿನದಲ್ಲ. ಹಿಂದಿನಿಂದಲೂ ನಡೆದು ಬಂದಿದ್ದು ಅದೀಗ ಅದು ಮುಂದುವರೆದುಕೊಂಡು ಹೋಗುತ್ತಿದೆ. ಹೀಗಾಗಿ ಬಟ್ಟೆ ಹೊಲಿಯುವ ಟೈಲರ್ ಮತ್ತು ಹೇರ್ ಕಟ್ಟಿಂಗ್ ಸೆಲೂನ್‌ಗಳಲ್ಲಿ ಕೆಲಸ ಮಾಡುವವರು ತಮ್ಮ ಕೆಲಸಗಳಲ್ಲಿ ಅಪ್ ಡೇಟ್ ಆಗಲೇಬೇಕು. ಇವತ್ತಿನ ವೇಗದ ಬದುಕಿನಲ್ಲಿ ತಮ್ಮ ವೃತ್ತಿಯಲ್ಲಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲೇ ಬೇಕಾಗಿದೆ. ಇದರಲ್ಲಿ ನೈಪುಣ್ಯತೆ ಸಾಧಿಸಿದರೆ ಗ್ರಾಹಕರು ಅಂಗಡಿ ಮುಂದೆ ಕ್ಯೂ ನಿಲ್ಲುವುದರಲ್ಲಿ ಸಂಶಯವಿಲ್ಲ.

ಹೊಸ ಬಗೆಯ ಹೇರ್ ಸ್ಟೈಲ್ ಟ್ರೆಂಡ್
ಕ್ರಿಕೆಟ್ ಆಟಗಾರರಿರಬಹುದು ಅಥವಾ ಸಿನಿಮಾ ನಟರಿರಬಹುದು ಅವರನ್ನು ಗಮನಿಸಿ ನೋಡಿದರೆ ಅವರ ಡ್ರೆಸ್‌ಗಿಂತ ಅವರ ಹೇರ್ ಸ್ಟೈಲ್‌ಗಳು ಗಮನಸೆಳೆಯುತ್ತವೆ. ಅವು ನೋಡೋದಕ್ಕೆ ಆಕರ್ಷವಾಗಿದೆ ಎನ್ನುವುದಕ್ಕಿಂತ ವಿಭಿನ್ನವಾಗಿರುತ್ತವೆ. ಹತ್ತು ಜನರ ನಡುವೆ ಮಾಮೂಲಿ ಜನರಿಗಿಂತ ಭಿನ್ನವಾಗಿದ್ದರೆ ತಾನೆ ಜನ ಅತ್ತ ದೃಷ್ಠಿ ಹಾಯಿಸೋದು. ಹೀಗಾಗಿಯೇ ಹೇರ್‌ಸ್ಟೈಲ್ ವಿಚಿತ್ರ ರೂಪಗಳಲ್ಲಿರುತ್ತವೆ. ಮತ್ತು ಒಂದು ವರ್ಗ ಅಂತಹ ಹೇರ್ ಸ್ಟೈಲ್‌ಗಳನ್ನು ಇಷ್ಟಪಡುತ್ತಿರುತ್ತದೆ.
ಈಗೀಗ ಯುವಕರು ಲವ್ ಸಿಂಬಲ್ ಸೇರಿದಂತೆ ವಿವಿಧ ರೀತಿಯ ಚಿತ್ರಗಳನ್ನು ತಲೆ ಕೂದಲು ಮತ್ತು ಗಡ್ಡಗಳಲ್ಲಿ ಬಿಡಿಸಿಕೊಡುವಂತೆ ಕಟ್ಟಿಂಗ್ ಶಾಪ್ ಗಳಲ್ಲಿ ಕೇಳುತ್ತಾರೆ. ಒಂದು ವೇಳೆ ಸಾಧ್ಯವಿಲ್ಲ ಎಂದಾದರೆ ಗ್ರಾಹಕರನ್ನು ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಂತಹ ಫ್ಯಾಷನ್ ಗಳ ಕಟ್ಟಿಂಗ್ ಗಳನ್ನು ಕಲಿಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಫ್ಯಾಷನ್ ಯುಗದಲ್ಲಿ ಯಾರು ಏನೇ ಮಾಡಿದರೂ ಅದು ಫ್ಯಾಷನ್ ಆಗುವುದರಿಂದ ದೊಡ್ಡ ದೊಡ್ಡ ಹೇರ್ ಡಿಸೈನರ್ ಗಳಿಂದ ಆರಂಭವಾಗಿ ಹಳ್ಳಿಯ ಹೇರ್ ಕಟ್ಟಿಂಗ್ ಸೆಲೂನ್ ವರೆಗೆ ಎಲ್ಲರೂ ಆಧುನಿಕತೆಗೆ ತೆರೆದುಕೊಂಡರೆ ವೃತ್ತಿಯಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲದೆ ಫ್ಯಾಷನ್ ಪ್ರಿಯರಿಗೂ ಖುಷಿಯಾಗುತ್ತದೆ.












Click it and Unblock the Notifications