Year End Special 2024 : ಬೆಂಗಳೂರಲ್ಲಿ 2025ರಲ್ಲಿ ಉದ್ಘಾಟನೆಗೊಳ್ಳಲಿರುವ ರಸ್ತೆ, ಮೆಟ್ರೋ ಯೋಜನೆಗಳು
ಬೆಂಗಳೂರು, ಡಿಸೆಂಬರ್ 09: ಬೆಂಗಳೂರು ನಗರದಲ್ಲಿ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಲು ಎಷ್ಟು ಯೋಜನೆಗಳನ್ನು ಮಾಡಿದರೂ ಸಹ ಸಮಸ್ಯೆಗಳು ಹೆಚ್ಚಾಗುತ್ತಲೇ ಇದೆ. ನಗರದ ಸಂಚಾರ ಸಮಸ್ಯೆ ಪರಿಹಾರ ಮಾಡಲು ಸರ್ಕಾರ, ಬಿಬಿಎಂಪಿ ಸೇರಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿವೆ. 2024ನೇ ವರ್ಷ ಮುಗಿಯುತ್ತಾ ಬಂದಿದ್ದು, ಹೊಸ ವರ್ಷದಲ್ಲಿ ಕೆಲವು ಪ್ರಮುಖ ಯೋಜನೆಗಳ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಇದರಿಂದಾಗಿ ನಗರದ ಜನರಿಗೆ ಅನುಕೂಲವಾಗಲಿದೆ.
ನಮ್ಮ ಮೆಟ್ರೋ ರಸ್ತೆ ಸೇರಿದಂತೆ ವಿವಿಧ ಯೋಜನೆಗಳನ್ನು ಬೆಂಗಳೂರು ನಗರದಲ್ಲಿ ಕೈಗೊಳ್ಳಲಾಗಿದೆ. 2024ರಲ್ಲಿ ಉದ್ಘಾಟನೆಯಾಗಬೇಕಿದ್ದ ಕೆಲವು ಯೋಜನೆಗಳನ್ನು 2025ರ ಮೊದಲ ಭಾಗದಲ್ಲಿಯೇ ಲೋಕಾರ್ಪಣೆಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಈ ವರ್ಷ ಪೂರ್ಣಗೊಳ್ಳದ ಯೋಜನೆ ಮುಂದಿನ ವರ್ಷದಲ್ಲಿ ಖಂಡಿತ ಜನರಿಗೆ ಅನುಕೂಲ ಕಲ್ಪಿಸಲಿವೆ ಎಂದು ಅಂದಾಜಿಸಲಾಗಿದೆ.

ನಗರದಲ್ಲಿ ನಡೆಯುತ್ತಿರುವ ಹಾಗೂ ಮುಂದಿನ ವರ್ಷ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವ ಕೆಲವು ಪ್ರಮುಖ ಯೋಜನೆಗಳ ವಿವರಗಳು ಇಲ್ಲಿವೆ. ಇವುಗಳಲ್ಲಿ ನಮ್ಮ ಮೆಟ್ರೋ, ರಸ್ತೆ ಯೋಜನೆಗಳು ಸೇರಿವೆ. ಹೊಸ ವರ್ಷದಲ್ಲಿ ಬೆಂಗಳೂರು ನಗರ ಜನರಿಗೆ ಕೊಡುಗೆಯಾಗಿ ಸಿಗುವ ಯೋಜನೆಗಳ ವಿವರ, ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
* ಡಬಲ್ ಡೆಕ್ಕರ್ ಫ್ಲೈ ಓವರ್ ಮತ್ತೊಂದು ಭಾಗ ಓಪನ್: ಬಿಎಂಆರ್‌ಸಿಎಲ್‌ನ ಆರ್. ವಿ. ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಆರಂಭವಾಗಿಲ್ಲ. ಆದರೆ ಈ ಮಾರ್ಗದಲ್ಲಿ ಬರುವ ಡಬಲ್ ಡೆಕ್ಕರ್ ಫ್ಲೈ ಓವರ್‌ನಲ್ಲಿ ಒಂದು ಕಡೆ ವಾಹನ ಸಂಚಾರ ಆರಂಭವಾಗಿದೆ. ಮತ್ತೊಂದು ಕಡೆ (ಹೆಚ್ಎಸ್‌ಆರ್-ಜೆಪಿ ನಗರ ಮಾರ್ಗ) 2025ರ ಏಪ್ರಿಲ್‌ನಲ್ಲಿ ಸಂಚಾರ ಆರಂಭವಾಗಲಿದೆ. ಇದರಿಂದಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಇತರ ಕಡೆ ಸಾಗುವ ಜನರಿಗೆ ವಾಹನ ದಟ್ಟಣೆಯಿಂದ ಪಾರಾಗಲು ಅನುಕೂಲವಾಗಲಿದೆ. ಪ್ರಯಾಣದ ಅವಧಿ ಕೂಡ ಇಳಿಕೆಯಾಗಲಿದೆ.
* ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ಸಂಚಾರ: ಆರ್. ವಿ. ರಸ್ತೆ-ಬೊಮ್ಮಸಂದ್ರ 18.82 ಕಿ. ಮೀ. ಉದ್ದದ ನಮ್ಮ ಮೆಟ್ರೋ ಹಳದಿ ಮಾರ್ಗ ನಗರದ ಬಹು ನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗದಲ್ಲಿ ಒಂದಾಗಿದೆ. ಈ ಮಾರ್ಗ ಉದ್ಘಾಟನೆಯಾದರೆ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಐಟಿ-ಬಿಟಿಯ ಲಕ್ಷಾಂತರ ಟೆಕ್ಕಿಗಳಿಗೆ ಅನುಕೂಲವಾಗಲಿದೆ. ಒಂದು ಅಂದಾಜಿನ ಪ್ರಕಾರ ಸುಮಾರು 3.5 ಲಕ್ಷ ಜನರಿಗೆ ಈ ಮಾರ್ಗ ಅನುಕೂಲಕರವಾಗಿದ್ದು, 16 ನಿಲ್ದಾಣಗಳಿವೆ. ಈ ಮಾರ್ಗದಲ್ಲಿ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿದ್ದು, 2025ರಲ್ಲಿ ಮಾರ್ಗದಲ್ಲಿ ಮೆಟ್ರೋ ರೈಲುಗಳ ಸಂಚಾರ ಆರಂಭವಾಗಲಿದೆ.
* ಮೈಸೂರು ರಸ್ತೆ-ನೈಸ್ ರಸ್ತೆ ಸಂಪರ್ಕ ರಸ್ತೆ: ಹಲವಾರು ವರ್ಷಗಳ ವಿಳಂಬದ ಬಳಿಕ ನೈಸ್ ರಸ್ತೆ-ಮೈಸೂರು ರಸ್ತೆ (ದೀಪಾಂಜಲಿ ನಗರ ಮೆಟ್ರೋ ನಿಲ್ದಾಣ ಬಳಿ) ನಡುವಿನ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಭೂ ಸ್ವಾಧೀನ ಸೇರಿ ಹಲವು ಕೆಲಸಗಳು ಈಗಾಗಲೇ ಪೂರ್ಣಗೊಂಡಿದ್ದು, ನೈಸ್ ಸಂಸ್ಥೆ ಕಾಮಗಾರಿಯನ್ನು ಕೈಗೊಂಡಿದೆ. ಈ ಸಂಪರ್ಕ ರಸ್ತೆ ನಿರ್ಮಾಣಗೊಂಡರೆ ವಾಹನಗಳು ನೇರವಾಗಿ ನೈಸ್ ರಸ್ತೆಗೆ ತೆರಳಬಹುದು. ಆದ್ದರಿಂದ ಮೈಸೂರು ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. 2025ರಲ್ಲಿ ಈ ಸಂಪರ್ಕ ರಸ್ತೆ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ.
* ನಮ್ಮ ಮೆಟ್ರೋ ಗುಲಾಬಿ ಮಾರ್ಗ: ಬಿಎಂಆರ್‌ಸಿಎಲ್ 21.26 ಕಿ.ಮೀ. ಗುಲಾಬಿ ಮಾರ್ಗದ ಕಾಮಗಾರಿಯನ್ನು ಚುರುಕುಗೊಳಿಸಿದೆ. ಕಾಳೇನ ಅಗ್ರಹಾರ (ಗೊಟ್ಟಿಗೆರೆ)-ನಾಗವಾರ ಮಾರ್ಗದಲ್ಲಿ ಒಂದು ಹಂತದ ಕಾಮಗಾರಿ ಮುಗಿದು, ಡಿಸೆಂಬರ್ 2025ರಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅಂದಾಜಿಸಲಾಗಿದೆ. ತಾವರೆಕೆರೆ-ಕಾಳೇನ ಅಗ್ರಹಾರ ನಡುವಿನ 7.5 ಕಿ. ಮೀ. ಎತ್ತರಿಸಿದ ಮಾರ್ಗದಲ್ಲಿ 6 ನಿಲ್ದಾಣಗಳಿದ್ದು, ಈ ಮಾರ್ಗ ಮೊದಲು ಪ್ರಾರಂಭವಾಗುವ ನಿರೀಕ್ಷೆ ಇದೆ.
* ಹೆಬ್ಬಾಳ ಫ್ಲೈ ಫವರ್ ಪುನರ್ ಅಭಿವೃದ್ಧಿ: ನಗರದ ಸದಾ ವಾಹನ ದಟ್ಟಣೆಯ ಹೆಬ್ಬಾಳ ಫ್ಲೈ ಓವರ್ ಪುನರ್ ಅಭಿವೃದ್ಧಿ ಕಾಮಗಾರಿಯನ್ನು ಬಿಡಿಎ ಕೈಗೊಂಡಿದೆ. ಇದರಲ್ಲಿ ಏರ್‌ಪೋರ್ಟ್-ಕೆಆರ್ ಪುರ ನಡುವಿನ ಮಾರ್ಗದ ಕಾಮಗಾರಿ 2025ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಈ ಮಾರ್ಗ ಲೋಕಾರ್ಪಣೆಗೊಂಡರೆ ಈ ಜಂಕ್ಷನ್‌ನಲ್ಲಿ 10-12 ನಿಮಿಷ ಸಮಯ ಉಳಿತಾಯವಾಗಲಿದ್ದು, ವಾಹನ ಸವಾರರಿಗೆ ಅನುಕೂಲವಾಗಲಿದೆ.












Click it and Unblock the Notifications