Year End Special 2024: ಲೋಕಸಭೆ ಚುನಾವಣೆ, ಮೋದಿ 3.0 ಸರ್ಕಾರ ಅಸ್ತಿತ್ವಕ್ಕೆ
2024ನೇ ವರ್ಷ ಭಾರತದ ರಾಜಕೀಯದ ಪಾಲಿಗೆ ಮಹತ್ವದ್ದಾಗಿತ್ತು. ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯ ಜೊತೆ ಈ ವರ್ಷ ಲೋಕಸಭೆ ಚುನಾವಣೆ ನಡೆಯಿತು. ಎನ್‌ಡಿಎ ಮೈತ್ರಿಕೂಟ ನರೇಂದ್ರ ಮೋದಿ ನೇತೃತ್ವದಲ್ಲಿ ಮತ್ತೊಮ್ಮೆ ಅಧಿಕಾರವನ್ನು ಪಡೆಯಿತು. ಕಳೆದ ಎರಡು ಲೋಕಸಭೆ ಚುನಾವಣೆಗಳಲ್ಲಿ ನಿರೀಕ್ಷಿತ ಸಾಧನೆ ಮಾಡಿರದ ಕಾಂಗ್ರೆಸ್ ಈ ಬಾರಿ 99 ಸೀಟು ಗೆದ್ದಿತು. ಎನ್‌ಡಿಎ 3.0 ಸರ್ಕಾರದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರು.
ಕೇಂದ್ರ ಚುನಾವಣಾ ಆಯೋಗ ಮಾರ್ಚ್ 16ರಂದು ಲೋಕಸಭೆ ಚುನಾವಣೆ ವೇಳಾಪಟ್ಟಿ 2024 ಘೋಷಣೆ ಮಾಡಿತು. ತಕ್ಷಣದಿಂದಲೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿತು. ಏಪ್ರಿಲ್ 19 ರಿಂದ ಜೂನ್ 1ರ ತನಕ ಒಟ್ಟು 7 ಹಂತದಲ್ಲಿ 543 ಸದಸ್ಯ ಬಲದ ಲೋಕಸಭೆಗೆ ಮತದಾನ ನಡೆಯಿತು. ಜೂನ್ 4ರಂದು ಚುನಾವಣಾ ಫಲಿತಾಂಶ ಘೋಷಣೆಗೊಂಡಿತು.

ಏಪ್ರಿಲ್ 19ರಂದು ಮೊದಲ ಹಂತದಲ್ಲಿ 102, ಏಪ್ರಿಲ್ 26ರಂದು 88 ಸೀಟುಗಳಿಗೆ 2ನೇ ಹಂತದಲ್ಲಿ, ಮೇ 7ರಂದು 94 ಸೀಟುಗಳಿಗೆ 3ನೇ ಹಂತ, ಮೇ 13ರಂದು 96 ಸೀಟುಗಳಿಗೆ 4ನೇ ಹಂತ, ಮೇ 20ರಂದು 5ನೇ ಹಂತದಲ್ಲಿ 49 ಸೀಟುಗಳಿಗೆ, ಮೇ 25ರಂದು 6ನೇ ಹಂತದಲ್ಲಿ 58 ಸೀಟುಗಳಿಗೆ ಮತ್ತು ಜೂನ್ 1ರಂದು 7ನೇ ಹಂತದಲ್ಲಿ 57 ಸೀಟುಗಳಿಗೆ ಮತದಾನ ನಡೆಯಿತು.
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು ಚುನಾವಣೆಯಲ್ಲಿ ಕಾಂಗ್ರೆಸ್ ಮಿತ್ರಪಕ್ಷಗಳನ್ನು ಸೇರಿಸಿಕೊಂಡು 'ಇಂಡಿಯಾ' ಮೈತ್ರಿಕೂಟ ರಚನೆ ಮಾಡಿಕೊಂಡಿತು. 27 ಪಕ್ಷಗಳು ಬಿಜೆಪಿ ವಿರುದ್ಧದ ಇಂಡಿಯಾ ಮೈತ್ರಿಕೂಟದಲ್ಲಿದ್ದವು. ರಾಜ್ಯಗಳಲ್ಲಿ ಸೀಟು ಹಂಚಿಕೆ ಮಾಡಿಕೊಂಡು ಕಾಂಗ್ರೆಸ್ ಚುನಾವಣೆಯನ್ನು ಎದುರಿಸಿತು.
ಚುನಾವಣಾ ಫಲಿತಾಂಶ: 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 400+ ಸ್ಥಾನಗಳಲ್ಲಿ ಗೆಲ್ಲುವ ಗುರಿಯನ್ನು ಹೊಂದಿತ್ತು. ಈ ಕುರಿತು ಘೋಷಣೆಗಳನ್ನು ಸಹ ಮಾಡಿತ್ತು. ಆದರೆ ಜೂನ್ 4ರಂದು ಘೋಷಣೆಯಾದ ಫಲಿತಾಂಶ ಪಕ್ಷಕ್ಕೆ ನಿರಾಸೆ ಮೂಡಿಸಿತು. ಏಕಾಂಗಿಯಾಗಿ ಅಧಿಕಾರವನ್ನು ನಡೆಸುವ ಬಿಜೆಪಿಯ ನಿರೀಕ್ಷೆ ಹುಸಿಯಾಗಿತ್ತು. ಚುನಾವಣೆಯಲ್ಲಿ ಬಿಜೆಪಿ 240 ಸೀಟುಗಳಲ್ಲಿ ಜಯಗಳಿಸಿತು. ಕಾಂಗ್ರೆಸ್ 99, ಸಮಾಜವಾದಿ ಪಕ್ಷ 37, ಎಐಟಿಸಿ 29, ಡಿಎಂಕೆ 22, ಟಿಡಿಪಿ 16, ಜೆಡಿಯು 12, ಶಿವಸೇನೆ (ಉದ್ಧವ್ ಠಾಕ್ರೆ ಬಣ) 9, ಎನ್‌ಸಿಪಿ (ಶರದ್ ಪವಾರ್ ಬಣ) 8, ಶಿವಸೇನೆ (ಏಕನಾಥ್ ಶಿಂಧೆ ಬಣ) 7, ಎಲ್‌ಜೆಪಿಆರ್‌ವಿ 5, ವೈಎಸ್‌ಆರ್‌ಸಿಪಿ 4 ಹೀಗೆ ವಿವಿಧ ಪಕ್ಷಗಳು ಲೋಕಸಭೆ ಚುನಾವವಣೆಯಲ್ಲಿ ಸೀಟುಗಳನ್ನು ಗೆದ್ದವು.
ಬಿಜೆಪಿ 240 ಸೀಟುಗಳಲ್ಲಿ ಜಯಗಳಿಸಿತು. ಟಿಡಿಪಿಯ 16, ಜೆಡಿಯುನ 12, ಜೆಡಿಎಸ್‌ನ 2 ಹೀಗೆ ಎನ್‌ಡಿಎ ಮೈತ್ರಿಕೂಟ ವಿವಿಧ ಪಕ್ಷಗಳ ನೆರವಿನಿಂದ ಸರ್ಕಾರವನ್ನು ರಚನೆ ಮಾಡಿತು. ಪ್ರಧಾನಿಯಾಗಿ ನರೇಂದ್ರ ಮೋದಿ ಅವರನ್ನು ಮತ್ತೆ ಆಯ್ಕೆ ಮಾಡಲಾಯಿತು. ನರೇಂದ್ರ ಮೋದಿ 3.0 ಸರ್ಕಾರ ರಚನೆಗೊಂಡಿತು. ಜೂನ್ 9ರಂದು ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನವನ್ನು ಸ್ವೀಕಾರ ಮಾಡಿದರು.
ನರೇಂದ್ರ ಮೋದಿ ಮತ್ತು ಸಚಿವರ ಪ್ರಮಾಣ ವಚನ ಸಮಾರಂಭ ಜಗತ್ತಿನ ಗಮನ ಸೆಳೆಯಿತು. ಭಾರತದ ನೆರೆಹೊರೆ ದೇಶದ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಶ್ರೀಲಂಕಾದ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮದ್ ಮುಯಿಝು, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ಮಾರಿಷಸ್‌ನ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್, ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್, ಭೂತಾನ್ ಪ್ರಧಾನಿ ಷೆರಿಂಗ್ ಟೋಬ್‌ಗೇ ಮುಂತಾದವರು ಸಮಾರಂಭಕ್ಕೆ ಆಗಮಿಸಿದ್ದರು.
ನರೇಂದ್ರ ಮೋದಿ ಅವರ ಜೊತೆ 72 ಸಚಿವರು ಮಂತ್ರಿ ಮಂಡಲ ಸೇರಿದರು. ರಾಜನಾಥ್ ಸಿಂಗ್, ಅಮಿತ್ ಶಾ, ನಿರ್ಮಲಾ ಸೀತಾರಾಮನ್, ಎಸ್. ಜೈಶಂಕರ್, ಧರ್ಮೇಂದ್ರ ಪ್ರಧಾನ್, ಪ್ರಹ್ಲಾದ್ ಜೋಶಿ, ಮನ್‌ಸುಖ್ ಮಾಂಡವೀಯ, ನಿತಿನ್ ಗಡ್ಕರಿ ಹೀಗೆ ಮೋದಿ 2.0 ಸರ್ಕಾರದಲ್ಲಿದ್ದ ಹಲವು ಸಚಿವರು ಸಹ 3.0 ಸರ್ಕಾರದಲ್ಲಿ ಮುಂದುವರೆದರು.
ಎಚ್. ಡಿ. ಕುಮಾರಸ್ವಾಮಿ, ಜೆ. ಪಿ. ನಡ್ಡಾ, ಶಿವರಾಜ್ ಸಿಂಗ್ ಚೌವ್ಹಾಣ್, ಸರ್ಬಾನಂದ ಸೋನವಾಲ್, ಮನೋಹರ್ ಲಾಲ್ ಖಟ್ಟರ್ ಸೇರಿದಂತೆ ಹಲವರು ಮೊದಲ ಬಾರಿಗೆ ಕೇಂದ್ರ ಸಚಿವರಾದರು. ಕೇಂದ್ರ ಸಚಿವ ಸಂಪುಟದ ಗರಿಷ್ಠ ಮಿತಿ 81 ಸಚಿವರು. ಸದ್ಯ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 72 ಸಚಿವರು ಸಂಪುಟದಲ್ಲಿದ್ದಾರೆ.
ಸಂಪುಟ ರಚನೆ ಮಾಡುವಾಗ ಪ್ರಧಾನಿ ನರೇಂದ್ರ ಮೋದಿ ಬಹುತೇಕ ಹಿರಿಯ ಸಚಿವರನ್ನು ಉಳಿಸಿಕೊಂಡರು. ಸಂಪುಟದ ಪ್ರಾತಿನಿಧ್ಯ ಗಮನಿಸಿದಾಗ ಬಿಜೆಪಿ ಪ್ರಾಬಲ್ಯ ಎದ್ದು ಕಾಣುತ್ತಿದೆ. ಎನ್‌ಡಿಎ ಮೈತ್ರಿಕೂಟದ ಸರ್ಕಾರ ಆದ ಕಾರಣ ಮಿತ್ರ ಪಕ್ಷಗಳಿಗೆ ಸಂಪುಟದಲ್ಲಿ 11 ಸ್ಥಾನಗಳನ್ನು ನೀಡಲಾಗಿದೆ. ಎರಡು ಬಾರಿ ಬಿಜೆಪಿ ನಿಯಂತ್ರಣದಲ್ಲಿರುವ ಸರ್ಕಾರವನ್ನು ಮುನ್ನಡೆಸಿದ್ದ ನರೇಂದ್ರ ಮೋದಿ ಈ ಬಾರಿ ಮಿತ್ರಪಕ್ಷಗಳು ಜೊತೆಗಿರುವ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ.
ಚುನಾವಣೆಯಲ್ಲಿ 99 ಸೀಟುಗಳಲ್ಲಿ ಜಯಗಳಿಸಿದ ಕಾಂಗ್ರೆಸ್ ಪಕ್ಷಕ್ಕೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಕ್ಕಿತು. ಜೂನ್ 25ರಂದು ರಾಯ್ ಬರೇಲಿ ಕ್ಷೇತ್ರದ ಸಂಸದ ರಾಹುಲ್ ಗಾಂಧಿಯನ್ನು 18ನೇ ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಲಾಯಿತು. ಚುನಾವಣೆಯಲ್ಲಿ ರಾಹುಲ್ ಗಾಂಧಿ ಕೇರಳದ ವಯನಾಡು, ಉತ್ತರ ಪ್ರದೇಶದ ರಾಯ್ ಬರೇಲಿ ಎರಡೂ ಕ್ಷೇತ್ರಗಳಲ್ಲಿ ಗೆದ್ದಿದ್ದರು. ರಾಯ್ ಬರೇಲಿ ಉಳಿಸಿಕೊಂಡು ವಯನಾಡು ಕ್ಷೇತ್ರದ ಸಂಸತ್ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆಯನ್ನು ನೀಡಿದರು.
2024ರಲ್ಲಿ ಲೋಕಸಭೆ ಚುನಾವಣೆ ಜೊತೆಗೆ 7 ರಾಜ್ಯಗಳ ವಿಧಾನಸಭೆ ಚುನಾವಣೆ ಸಹ ಈ ವರ್ಷ ನಡೆಯಿತು. ನವೆಂಬರ್ ತಿಂಗಳಿನಲ್ಲಿ ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳು ನಡೆದವು. ಈ ವರ್ಷ ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಒಡಿಶಾ, ಸಿಕ್ಕಿಂ, ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ವಿಧಾನಸಭೆ ಚುನಾವಣೆ ನಡೆದು, ಹೊಸ ಸರ್ಕಾರಗಳು ಅಸ್ತಿತ್ವಕ್ಕೆ ಬಂದವು.












Click it and Unblock the Notifications